ಬೆಂಗಳೂರು : 17ನೇ ಮಹಡಿಯಿಂದ ಬಿದ್ದು ಟೆಕ್ಕಿ ಸಾವು

ವೈಟ್ ಪೀಲ್ಡ್ ಬಳಿಯ ಪ್ರೆಸ್ಟೀಜ್ ಶಾಂತಿನಿಕೇತನ ಅಪಾರ್ಟ್ ಮೆಂಟ್ ನಲ್ಲಿ ಸತ್ಯಾರಾಮಚಂದ್ರನ್ (31)ವಾಸವಾಗಿದ್ದರು. ಮೈಕ್ರೋಸಾಫ್ಟ್ ಉದ್ಯೋಗಿಯಾಗಿರುವ ಇವರು, ರಜೆಯ ಮೇಲೆ ತಮಿಳುನಾಡಿಗೆ ತೆರಳಿದ್ದರು. ಬುಧವಾರ ಪತ್ನಿ ಮತ್ತು ಮಕ್ಕಳ ಸಮೇತ ಬೆಂಗಳೂರಿಗೆ ಆಗಮಿಸಿದ್ದರು.
ಬೆಳಗ್ಗೆ ಆರು ಗಂಟೆಯ ಸಂದರ್ಭದಲ್ಲಿ ಪ್ರೆಸ್ಟೀಜ್ ಅಪಾರ್ಟ್ ಮೆಂಟ್ ನ 17ನೇ ಮಹಡಿಯ ಡಿ ಬ್ಲಾಕ್ ನಲ್ಲಿರುವ ಪ್ಲಾಟ್ ಬಾಗಿಲು ತೆರೆಯಲು ಮುಂದಾಗಿದ್ದಾರೆ. ಬಾಗಿಲು ಗಟ್ಟಿಯಾಗಿ ಹಾಕಿಕೊಂಡಿದ್ದು ಸುಲಭವಾಗಿ ತೆರೆದುಕೊಂಡಿಲ್ಲ. ಮತ್ತೊಮ್ಮೆ ಪ್ರಯತ್ನಿಸುವಾಗ ಆಕಸ್ಮಿಕವಾಗಿ ಕಾಲು ಜಾರಿ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ.
ಮಗುವನ್ನು ಎತ್ತಿಕೊಂಡಿದ್ದ ರಾಮಚಂದ್ರನ್ ಅವರ ಪತ್ನಿ ದಿವ್ಯಾ ಗಂಡ ಕೆಳಗೆ ಬೀಳುವುದನ್ನು ತಪ್ಪಿಸಲು ವಿಫಲರಾಗಿದ್ದಾರೆ. ಹದಿನೇಳನೆ ಮಹಡಿಯಿಂದ ಕೆಳ ಮಹಡಿಯ ವಾಹನ ನಿಲ್ದಾಣದ ಬಳಿಯ ಕಲ್ಲುಹಾಸಿನ ಮೇಲೆ ಬಿದ್ದ ರಾಮಚಂದ್ರನ್ ತೀವ್ರ ರಕ್ತಸ್ರಾವದಿಂದಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೂಲತಃ ತಮಿಳುನಾಡಿನವರಾದ ರಾಮಚಂದ್ರನ್ ದಿವ್ಯ ಅವರನ್ನು ಆರು ರ್ಷಗಳ ಹಿಂದೆ ವಿವಾಹವಾಗಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ದಿವ್ಯ ವಿವಾಹದ ನಂತರ ಕೆಲಸ ತ್ಯಜಿಸಿದ್ದರು.
ಸ್ಥಳಕ್ಕೆ ಆಗಮಿಸಿದ ವೈಟ್ ಪೀಲ್ಡ್ ಪೊಲೀಸರು ವೈದೇಹಿ ಆಸ್ಪತ್ರಗೆ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿದರು. ಮರಣೋತ್ತರ ಪರೀಕ್ಷೆ ನಂತರ ತಮಿಳುನಾಡಿಗೆ ಮೃತದೇಹವನ್ನು ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವೈಟ್ ಫೀಲ್ಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications