ಸಂಪುಟ ವಿಸ್ತರಣೆ ಕಸರತ್ತು: ಸಿದ್ದು ದಿಲ್ಲಿಗೆ ಎಂಟ್ರಿ

Siddaramaiah
ನವದೆಹಲಿ, ಮೇ 15 : ಸಿದ್ದರಾಮಯ್ಯ ಅವರ ಮಂತ್ರಿಮಂಡಲ ಸೇರಲು ಕನಿಷ್ಠ ಪಕ್ಷ ನಾಲ್ಕು ಡಜನ್ ಆಕಾಂಕ್ಷಿಗಳು ಸಿದ್ಧತೆ ನಡೆಸಿದ್ದಾರೆ. ಮುಖ್ಯಮಂತ್ರಿಗಿಂತ ಮೊದಲೇ ದೆಹಲಿ ತಲುಪಿರುವ ಶಾಸಕರ ಹಿರಿಯ ನಾಯಕರ ಮನವೊಲಿಸಿ ಸಚಿವ ಸ್ಥಾನ ಪಡೆಯುವ ಸರ್ಕಸ್ ನಡೆಸುತ್ತಿದ್ದಾರೆ.

ಹೈಕಮಾಂಡ್ ನಾಯಕರ ಜೊತೆ ಚರ್ಚಿಸಲು ಸಿಎಂ ಸಿದ್ದರಾಮಯ್ಯ 10.30ರ ಏರ್ ಇಂಡಿಯಾ ವಿಮಾನದಲ್ಲಿ ದೆಹಲಿಗೆ ಆಗಮಿಸಲಿದ್ದಾರೆ. ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಸಿದ್ದರಾಮಯ್ಯ ಮೊದಲ ಬಾರಿಗೆ ದೆಹಲಿಗೆ ಆಗಮಿಸುತ್ತಿದ್ದು, ಹಿರಿಯ ನಾಯಕರನ್ನು ಭೇಟಿ ಮಾಡಿ, ನಂತರ ಸಂಪುಟ ರಚನೆ ಬಗ್ಗೆ ಗಮನ ಹರಿಸಲಿದ್ದಾರೆ.

ಮಂಗಳವಾರ ಮಧ್ಯಾಹ್ನ ದೆಹಲಿಗೆ ಆಗಮಿಸಿರುವ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಯಾವ ಶಾಸಕರ ಕೈಗೂ ಸಿಗದೆ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಮಧುಸೂದನ್ ಮಿಸ್ತ್ರೀ ಅವರೊಂದಿಗೆ ಸೇರಿ ಸಚಿವರ ಪಟ್ಟಿ ತಯಾರಿಸುತ್ತಿದ್ದಾರೆ. ಬೆಂಗಳೂರಿನಿಂದ ಬರುವಾಗಲೇ ಸಾಂಭವ್ಯ ಸಚಿವರ ಪಟ್ಟಿ ಹಿಡಿದು ಪರಮೇಶ್ವರ್ ಆಗಮಿಸಿದ್ದಾರೆ.

ಕಳಂಕಿತರಿಗೆ ಕೋಕ್ : ಕಳಂಕಿತ ಶಾಸಕರಿಗೆ ಸಚಿವ ಸ್ಥಾನ ನೀಡಬಾರದು ಎಂದು ಕರ್ನಾಟಕದಲ್ಲಿ ಕೂಗು ಕೇಳಿಬರುತ್ತಿದೆ. ಇದನ್ನು ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಿದೆ. ಆದ್ದರಿಂದ, ಕಳಂಕಿತರನ್ನು ದೂರವಿಡುವ ಅಂತಿಮ ನಿರ್ಧಾರವನ್ನು ಸಿಎಂ ಸಿದ್ದರಾಮಯ್ಯ ಅವರ ಹೆಗಲಿಗೆ ವಹಿಸಲಾಗಿದೆ.

ಇಂದು ದೆಹಲಿಗೆ ಬರುವ ಸಿದ್ದರಾಮಯ್ಯ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಜೊತೆ ಚರ್ಚಿಸಿ ಸಚಿವ ಸಂಪುಟದ ವಿಸ್ತರಣೆ, ಯಾರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. ಎರಡು ಅಥವಾ ಮೂರು ಕಂತುಗಳಲ್ಲಿ ಸಂಪುಟ ರಚನೆ ಮಾಡಲು ಸಿಎಂ ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

ಡಿಸಿಎಂ ಇಲ್ಲ : ಉಪ ಮುಖ್ಯಮಂತ್ರಿ ಹುದ್ದೆಯನ್ನು ಸೃಷ್ಟಿಸಬೇಕು ಎಂಬ ಪ್ರಸ್ತಾವನೆ ಹೈ ಕಮಾಂಡ್ ನಾಯಕರ ಮುಂದೆ ಇಲ್ಲ ಎಂದು ತಿಳಿದು ಬಂದಿದೆ. ಕೆಲವು ಶಾಸಕರು ಡಿಸಿಎಂ ಹುದ್ದೆ ಸೃಷ್ಠಿಸಬೇಕೆಂದು ಬೇಡಿಕೆ ಇಟ್ಟಿದ್ದರೂ, ಹೈಕಮಾಂಡ್ ಇದಕ್ಕೆ ಸಮ್ಮತಿ ಸೂಚಿಸಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಗೃಹ ಖಾತೆ ಪರಮೇಶ್ವರ್ ಗೆ : ಚುನಾವಣೆಯಲ್ಲಿ ತಾವು ಸೋತು ಪಕ್ಷವನ್ನು ಆಧಿಕಾರಕ್ಕೆ ತಂದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರಿಗೆ ಸೂಕ್ತ ಅವಕಾಶ ನೀಡಬೇಕಾಗಿದೆ. ಆದ್ದರಿಂದ ಸಿದ್ದರಾಮಯ್ಯ ಸಂಪುಟದಲ್ಲಿ ಗೃಹಖಾತೆಯನ್ನು ಪರಮೇಶ್ವರ್ ಅವರಿಗೆ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.

ಆಕಾಂಕ್ಷಿಗಳು : ಸಚಿವ ಸ್ಥಾನದ ಆಕಾಂಕ್ಷಿಗಳಾದ ಮೋಟಮ್ಮ, ಡಿ.ಕೆ.ಶಿವಕುಮಾರ್ ಮತ್ತು ಟಿ.ಬಿ.ಜಯಚಂದ್ರ ಮುಂತಾದವರು ಬಹಿರಂಗವಾಗಿ ಪ್ರಮುಖ ಖಾತೆಗಳ ಬೇಡಿಕೆ ಇಟ್ಟಿದ್ದಾರೆ. ಮೋಟಮ್ಮ ಗ್ರಾಮೀಣಾಭಿವೃದ್ಧಿ ಖಾತೆ ಬಯಸಿದರೆ, ಜಯಚಂದ್ರ ಜಲಸಂಪನ್ಮೂಲ ಖಾತೆ ಬೇಕು ಎಂದು ಕೇಳುತ್ತಿದ್ದಾರೆ.

ಮಾಜಿ ಸಚಿವರಾದ ರೋಷನ್ ಬೇಗ್, ಕೆ.ಬಿ.ಕೋಳಿವಾಡ, ರಮೇಶ್ ಮತ್ತು ಸತೀಶ್ ಜಾರಕಿಹೊಳಿ, ಅಪ್ಪಾಜಿ ನಾಡಗೌಡ, ಸಿದ್ದು ನ್ಯಾಮಗೌಡ, ಬಸವರಾಜ ರಾಯರೆಡ್ಡಿ, ವೀರಕುಮಾರ್ ಪಾಟೀಲ್, ವೀರಣ್ಣ ಮತ್ತೀಕಟ್ಟಿ, ಕೆ. ಶಿವಮೂರ್ತಿ ಮುಂತಾದ ಹಳೆಯ ಹುಲಿಗಳು ಸಹ ಪ್ರಭಾವಿ ಖಾತೆಗಾಗಿ ಲಾಬಿ ನಡೆಸಿದ್ದಾರೆ.

ಈ ವಾರವೇ ಸಂಪುಟ ರಚನೆ : ಶುಕ್ರವಾರ ಅಥವ ಶನಿವಾರ ನೂತನ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಬೆಂಗಳೂರಿನಲ್ಲಿ ಬುಧವಾರ ಬೆಳಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಂದು ದೆಹಲಿಗೆ ತೆರಳಿ ಹೈ ಕಮಾಂಡ್ ನಾಯಕರ ಜೊತೆ ಚರ್ಚಿಸುತ್ತೇನೆ. ನಂತರ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+