ಬಿಜೆಪಿ ಶಾಸಕಾಂಗ ಸಭೆ : ಸೋಲಿನ ಪರಾಮರ್ಶೆ

ರಾಜ್ಯ ಬಿಜೆಪಿ ಅಧ್ಯಕ್ಷ ಪ್ರಹ್ಲಾದ್ ಜೋಶಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಡಿ.ವಿ.ಸದಾನಂದಗೌಡ, ಬಿಜೆಪಿ ಮಾಜಿ ಅಧ್ಯಕ್ಷ ನಿತಿನ್ ಗಡ್ಕರಿ ಪಾಲ್ಗೊಳ್ಳಲಿದ್ದಾರೆ. ಹಾಲಿ 40 ಶಾಸಕರಿಗೆ ಮತ್ತು ಮಾಜಿ ಶಾಸಕರಿಗೆ ಸಭೆಯಲ್ಲಿ ಭಾಗವಹಿಸುವಂತೆ ಸೂಚನೆ ನೀಡಲಾಗಿದೆ.
ಪಕ್ಷದ ಸೋಲಿಗೆ ಪ್ರಮುಖ ಕಾರಣಗಳೇನು ಎಂದು ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ. ಪಕ್ಷದ ಸೋಲಿನ ಹೊಣೆಯನ್ನು ಯಾವ ನಾಯಕರು ಹೊತ್ತುಕೊಳ್ಳಲು ಸಿದ್ದರಿಲ್ಲ. ಆದ್ದರಿಂದ ಸಭೆಯಲ್ಲಿ ಮಾತಿನ ಸಮರ ನಡೆಯುವ ಸಂಭವವಿದೆ.
ಯಡಿಯೂರಪ್ಪ ಅಜೆಂಡಾ : ಬಿಜೆಪಿ ತೊರೆದು ಕೆಜೆಪಿ ಸ್ಥಾಪಿಸಿ ಚುನವಣೆಯಲ್ಲಿ ಬಿಜೆಪಿಗೆ ತಕ್ಕಪಾಠ ಕಲಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪಕ್ಷ ತೊರೆದಿದ್ದರಿಂದ ಆಗಿರುವ ಲಾಭ ನಷ್ಟಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ತಿಳಿದುಬಂದಿದೆ.
ಪಿರಿಯಾಪಟ್ಟಣ ಚುನಾವಣೆ : ಪಕ್ಷದ ಅಭ್ಯರ್ಥಿ ಸಾವಿನಿಂದ ಮುಂದೂಡಲಾಗಿರುವ ಪಿರಿಯಾಪಟ್ಟಣ ಚುನಾವಣೆಯಲ್ಲಿ ಅನುಕಂಪದ ಆಧಾರದ ಮೇಲೆ ಗೆದ್ದು ಬರಲು ಅಗತ್ಯ ಕಾರ್ಯತಂತ್ರವನ್ನು ಸಭೆಯಲ್ಲಿ ರೂಪಿಸುವ ಸಾಧ್ಯತೆ ಇದೆ. ಮೇ 28ರಂದು ಪಿರಿಯಾಪಟ್ಟಣ ಚುನಾವಣೆ ನಡೆಯಲಿದ್ದು, ಪ್ರಚಾರ ಕಾರ್ಯದ ಬಗ್ಗೆಯೂ ಚರ್ಚಿಸಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ. (ಅಭ್ಯರ್ಥಿಯ ವಿಧಿವಶ: ಚುನಾವಣೆ ಮುಂದೂಡಿಕೆ )
ನಾಯಕನ ಆಯ್ಕೆ : ಶಾಸಕಾಂಗ ಪಕ್ಷದ ನಾಯಕನ ಆಯ್ಕೆಯೂ ಇಂದಿನ ಸಭೆಯಲ್ಲಿ ನಡೆಯುಲಿದೆ. ವಿಧಾನಸಭೆಗೆ ಮಾಜಿ ಸಚಿವ ಸುರೇಶ್ ಕುಮಾರ್, ವಿಧಾನಪರಿಷತ್ ಗೆ ಮಾಜಿ ಸಿಎಂ ಸದಾನಂಗೌಡರನ್ನು ಸಭಾ ನಾಯಕರಾಗಿ ಆಯ್ಕೆ ಮಾಡಬೇಕು ಎಂಬ ಲೆಕ್ಕಾಚಾರ ಪಕ್ಷದೊಳಗೆ ನಡೆದಿದೆ.
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬದಲು ಸುರೇಶ್ ಕುಮಾರ್ ಅವರನ್ನು ಶಾಸಕಾಂಗ ಪಕ್ಷದ ನಾಯಕಾಗಿ ಆಯ್ಕೆ ಮಾಡಲು ಹಲವು ಶಾಸಕರು ಈಗಾಗಲೇ ಸಮ್ಮತಿ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಆಹ್ವಾನ ನೀಡಿರಲಿಲ್ಲ : ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪ್ರಮಾಣ ವಚನ ಸ್ವೀಕರಿಸುವ ಸಮಾರಂಭಕ್ಕೆ ಬಿಜೆಪಿ ಪಕ್ಷಕ್ಕೆ ಅಧೀಕೃತವಾದ ಆಹ್ವಾನ ನೀಡಿರಲಿಲ್ಲ. ಆದ್ದರಿಂದ ಪಕ್ಷದ ಯಾವ ನಾಯಕರು ಸಮಾರಂಭದಲ್ಲಿ ಭಾಗವಹಿಸಲಿಲ್ಲ ಎಂದು ಮಾಜಿ ಸಚಿವ ಜೀವರಾಜ್ ಹೇಳಿದ್ದಾರೆ. (ಸಿದ್ದು ಪದ ಗ್ರಹಣ ಫಂಕ್ಷನ್ನಿಗೆ ವಿಪಕ್ಷವೇ ಚಕ್ಕರ್)












Click it and Unblock the Notifications