ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿದ್ದರಾಮಯ್ಯ ಮಹಾ ಬುದ್ಧಿವಂತ : ಅನಂತಮೂರ್ತಿ

By Prasad
|
Google Oneindia Kannada News

ಬೆಂಗಳೂರು, ಮೇ. 11 : "ಸಿದ್ದರಾಮಯ್ಯ ಅವರು ಮಹಾ ಬುದ್ಧಿವಂತರು. ಅವರಿಗೆ ಯಾರೂ ಬುದ್ಧಿವಾದ ಹೇಳುವುದು ಬೇಡ. ಅವರಿಗೆ ಯಾರು ಕೂಡ ಸಲಹೆ ನೀಡುವ ಅಗತ್ಯವೂ ಇಲ್ಲ. ಆದರೆ, ಸರಕಾರ ನಡೆಸುವಾಗ ಅವರು ತಪ್ಪು ಮಾಡದ ಹಾಗೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ (ಸಾಹಿತಿಗಳ) ಮೇಲಿದೆ."

ಹೀಗೆಂದು ಹೇಳಿದವರು 'ಸಂಸ್ಕಾರ' ಕಾದಂಬರಿಗಾಗಿ 1994ರಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದ ಖ್ಯಾತ ಸಾಹಿತಿ ಡಾ. ಯು.ಆರ್. ಅನಂತಮೂರ್ತಿಯವರು. ಡಾಲರ್ಸ್ ಕಾಲೋನಿಯಲ್ಲಿರುವ ತಮ್ಮ ಮನೆಗೆ ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಭೇಟಿ ನೀಡಿದಾಗ ಮೇಲಿನಂತೆ ಹಾಸ್ಯಮಿಶ್ರಿತ ಧಾಟಿಯಲ್ಲಿ ಅನಂತಮೂರ್ತಿಯವರು ಹೇಳಿದರು.

ರಾಜಕೀಯದಲ್ಲಿ ಅಪಾರ ಅನುಭವವುಳ್ಳ ಸಿದ್ದರಾಮಯ್ಯ (64) ಅವರಿಗೆ ಅಧಿಕಾರ ಚಲಾಯಿಸುವ ಬಗ್ಗೆ ಹೇಳಿಕೊಡಬೇಕಿಲ್ಲ. ಅವರನ್ನು ಅವರಷ್ಟಕ್ಕೇ ಬಿಟ್ಟರೆ ಸಾಕು. ಅವರ ಮೇಲೆ ಯಾರೂ ಒತ್ತಡ ಹೇರಬಾರದು. ಯಾವುದೇ ರೀತಿಯ ಸಲಹೆ ಸೂಚನೆಗಳನ್ನು ನೀಡಲೂಬಾರದು ಎಂದು 80 ವರ್ಷ ವಯಸ್ಸಿನ ಸಾಹಿತಿ ಅನಂತಮೂರ್ತಿ ಅವರು ಸುದ್ದಿಗಾರರಿಗೆ ತಿಳಿಸಿದರು.

Siddaramaiah is very intelligent : UR Ananthamurthy

ನಂತರ ಮಾತನಾಡಿದ ಕನ್ನಡ ಕಾವಲು ಸಮಿತಿಯ ಪ್ರಥಮ ಅಧ್ಯಕ್ಷರಾಗಿದ್ದ ಸಿದ್ದರಾಮಯ್ಯ ಅವರು, ಅನಂತಮೂರ್ತಿಯವರು ತಮಗೆ ತಪ್ಪು ಮಾಡಲು ಬಿಡುವುದೇ ಇಲ್ಲ. ನಾನು ವಿದ್ಯಾರ್ಥಿಯಾದಾಗಿನಿಂದಲೂ ಸೋಷಲಿಸ್ಟ್ ಬಗ್ಗೆ ಸೆಳೆತವಿದ್ದ ಅನಂತಮೂರ್ತಿಯವರ ಸಂಪರ್ಕವಿದೆ. ತಾಯಿ ಮಗು ಇದ್ದ ಹಾಗೆ ಸಮಾಜವಿರಬೇಕು, ಎಲ್ಲ ಜಾತಿಗಳು ಸಮಾನವಾಗಿ ಬದುಕಬೇಕು ಎಂಬ ಧ್ಯೇಯವುಳ್ಳವರು ಮೂರ್ತಿಗಳು. ಇದನ್ನು ಪಾಲಿಸಬೇಕಾಗಿರುವುದು ಸರಕಾರದ ಜವಾಬ್ದಾರಿ ಕೂಡ ಎಂದರು.

ಸೋಮವಾರ ಅಧಿಕಾರ ಸ್ವೀಕರಿಸುವ ಮುನ್ನ ಸಿದ್ದರಾಮಯ್ಯ ಅವರು ಕನ್ನಡದ ಖ್ಯಾತ ಸಾಹಿತಿಗಳನ್ನು ಭೇಟಿ ಮಾಡಿ ಅವರ ಆರೋಗ್ಯ ವಿಚಾರಿಸಿದರು ಮತ್ತು ಅವರ ಆಶೀರ್ವಾದ ಪಡೆದರು. ಮೊದಲಿಗೆ ಬನಶಂಕರಿ ಎರಡನೇ ಹಂತದಲ್ಲಿರುವ 85ರ ವಯೋಮಾನದ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಅವರ ಆರೋಗ್ಯ ವಿಚಾರಿಸಿದರು. ಜಿಎಸ್ಎಸ್ ಅವರು ಸಿದ್ದರಾಮಯ್ಯ ಅವರಿಗೆ ಮನವಿಪತ್ರ ಸಲ್ಲಿಸಿದರು.

ನಂತರ ಕತ್ರಿಗುಪ್ಪೆಯಲ್ಲಿರುವ ಮತ್ತೊಬ್ಬ ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಅವರ ನಿವಾಸಕ್ಕೆ ತೆರಳಿ ಅವರ ಉಭಯಕುಶಲೋಪರಿ ವಿಚಾರಿಸಿದರು. ನಂತರ ಸಿದ್ದರಾಮಯ್ಯ ಅವರು ಡಾಲರ್ಸ್ ಕಾಲೋನಿಯಲ್ಲಿರುವ ಅನಂತಮೂರ್ತಿ ಅವರ ನಿವಾಸಕ್ಕೆ ತೆರಳಿದರು. ಈ ಸಂದರ್ಭದಲ್ಲಿ ಸಾಹಿತಿ ಮರುಳಸಿದ್ದಪ್ಪ ಅವರು ಜತೆಗೂಡಿದ್ದರು.

ಸೋಮವಾರ ಬೆಳಿಗ್ಗೆ 11.50ಕ್ಕೆ ಪ್ರಮಾಣವಚನ : ಸೋಮವಾರ, ಮೇ 13ರಂದು ಬೆಳಿಗ್ಗೆ 11.50ಕ್ಕೆ ಕಂಠೀರವ ಸ್ಟೇಡಿಯೇನಲ್ಲಿ ತಾವೊಬ್ಬರೇ ಪ್ರಮಾಣವಚನ ಸ್ವೀಕರಿಸುತ್ತಿರುವುದಾಗಿ ನಿಯೋಜಿತ ಮುಖ್ಯಮಂತ್ರಿ ಎಸ್ ಸಿದ್ದರಾಮಯ್ಯ ಅವರು ಸುದ್ದಿಗಾರರಿಗೆ ಶನಿವಾರ ಸ್ಪಷ್ಟಪಡಿಸಿದರು. ಸದ್ಯಕ್ಕೆ ತಾವು ಮಾತ್ರ ಪ್ರಮಾಣವಚನ ಸ್ವೀಕರಿಸಿ ನಂತರ ರಾಜ್ಯದ ನಾಯಕರು ಮತ್ತು ಕಾಂಗ್ರೆಸ್ ಹೈಕಮಾಂಡ್ ಜೊತೆ ಚರ್ಚಿಸಿ ಮಂತ್ರಿಮಂಡಳದ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ಅವರು ತಿಳಿಸಿದರು.

ಇದೇ ಮಾತನ್ನು ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಅವರು ಕೂಡ ಪುನರುಚ್ಚರಿಸಿದರು. ಸಿದ್ದರಾಮಯ್ಯ ಅವರು ಪ್ರಮಾಣವಚನ ಸ್ವೀಕರಿಸಿದ ಮೇಲೆ ತಾವು, ಸಿದ್ದರಾಮಯ್ಯ ಮತ್ತು ಇತರ ನಾಯಕರು ಸೇರಿ ಮಾತುಕತೆ ನಡೆಸಿ, ಸಂಪುಟ ವಿಸ್ತರಿಸುವ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ನುಡಿದರು. ಈ ನಡುವೆ, ಯಾವ ಜಿಲ್ಲೆಯ, ಯಾವ ಜಾತಿಯ ಶಾಸಕರಿಗೆ ಸಂಪುಟದಲ್ಲಿ ಸ್ಥಾನ ಸಿಗಲಿದೆ ಎಂಬುದರ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮುಖ್ಯಮಂತ್ರಿ ಪಟ್ಟ ಸಿಗದಿರುವ ಬಗ್ಗೆ ಗುಲಬರ್ಗದಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ.

ಯುವಕರಿಗೆ ಆದ್ಯತೆ ನೀಡಿ : ಸಿದ್ದರಾಮಯ್ಯ ಅವರ ನೂತನ ಸಂಪುಟದಲ್ಲಿ ಶೇ.40ರಷ್ಟು ಯುವಕರಿಗೆ ಮತ್ತು ಹೊಸಬರಿಗೆ ಆದ್ಯತೆ ನೀಡಬೇಕೆಂದು ಯುವ ಕಾಂಗ್ರೆಸ್ ಅಧ್ಯಕ್ಷ ರಿಜ್ವಾನ್ ಅರ್ಷದ್ ಅವರು ಮನವಿ ಮಾಡಿದ್ದಾರೆ. ಹಾರ, ತುರಾಯಿ ಒಪ್ಪಿಸಿ ಶಾಲು ಹೊದಿಸಿದವರ ಬೇಡಿಕೆಗಳು ಇನ್ನೂ ಏನೇನಿವೆಯೋ? ಎಲ್ಲಕ್ಕೂ ಸೊಪ್ಪು ಹಾಕ್ತಾರಾ ಸಿದ್ದು? [ಸಿದ್ದರಾಮಯ್ಯ ವ್ಯಕ್ತಿಚಿತ್ರ]

English summary
Chief minister designate S Siddaramaiah visited many Kannada laureates in Bangalore to seek blessings before taking oath on Monday, 13th May, 2013. He met Dr. UR Ananthamurthy, Dr. Chandrashekhar Kambar, Dr GS Shivarudrappa and others.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X