ಈಶುಗೆ ಈ ಸ್ಥಿತಿ ಬರಬಾರದಿತ್ತು : ಬಿಎಸ್ ವೈ

ರಾಜ್ಯದಲ್ಲಿ ಬಿಜೆಪಿಯನ್ನು ಸೋಲಿಸಲೇಬೇಕು ಎಂದು ಕೆಜೆಪಿ ಸ್ಥಾಪಿಸಲಾಗಿತ್ತು. ಹೀಗಾಗಿ ನಿಮ್ಮ ಗುರಿ ಈಗ ಈಡೇರಿದೆಯೇ? ಮತ್ತೆ ಬಿಜೆಪಿ ಸೇರುತ್ತೀರಾ ಎಂಬ ಪ್ರಶ್ನೆಗಳಿಗೆ ನಿರೀಕ್ಷಿತ ಉತ್ತರಗಳನ್ನೇ ಯಡಿಯೂರಪ್ಪ ನೀಡಿದರು.ಶಿವಮೊಗ್ಗ ಜಿಲ್ಲೆ ಮತದಾರ ಸಾರಾಸಗಟಾಗಿ ಬಿಜೆಪಿಯನ್ನು ತಿರಸ್ಕರಿಸಿದ್ದು, ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ ಮತ್ತೊಮ್ಮೆ ಪ್ರತಿಫಲಿಸಿದಂತೆ ಆಗಿದೆ ಎಂದರು. ಆದರೆ, ಮಾತಿನಲ್ಲಿ ಎಂದಿನ ವ್ಯಂಗ್ಯ, ಸಿಟ್ಟು ಸ್ವಲ್ಪಮಟ್ಟಿಗೆ ಕಡಿಮೆಯಾಗಿದ್ದು ಗಮನೀಯವಾಗಿತ್ತು.
ಬಿಜೆಪಿಗೆ ಯಾವ ದಾರಿ ತೋರಿಸಬೇಕೋ ಅದನ್ನು ಜನ ತೋರಿಸಿಕೊಟ್ಟಿದ್ದಾರೆ. ಹಾಗೆಂದು ಯಾರ ಬಗ್ಗೆಯೂ ದ್ವೇಷ ಸಾಧನೆ ಮಾಡುವ ವ್ಯಕ್ತಿ ನಾನಲ್ಲ. ಯಡಿಯೂರಪ್ಪ ಅವರಿಲ್ಲದೆ ಬಿಜೆಪಿಗೆ ಅಸ್ತಿತ್ವ ಇದೆಯೇ ಎಂಬ ಬಗ್ಗೆ ಫಲಿತಾಂಶ ಕಣ್ಣ ಮುಂದಿದ್ದು, ಆ ಪಕ್ಷದ ನಾಯಕರು ಇದನ್ನು ತೀರ್ಮಾನಿಸಬೇಕು ಎಂದರು.
[ 2013 ಫಲಿತಾಂಶ: ಗೆದ್ದವರು, ಸೋತವರು ]
ಈಶ್ವರಪ್ಪ ಸೋಲಿನ ಬಗ್ಗೆ: ಶಿವಮೊಗ್ಗದಲ್ಲಿ ಕೆ.ಎಸ್. ಈಶ್ವರಪ್ಪ ಅವರ ಸೋಲಿನ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಈಶ್ವರಪ್ಪ ಅವರಿಗೆ ಆ ರೀತಿ ಆಗಬಾರದಿತ್ತು. ಇನ್ನೊಬ್ಬರ ಸೋಲಿನ ಬಗ್ಗೆ ಖುಷಿ ಪಡುವ ಮನಸ್ಥಿತಿ ನನ್ನದಲ್ಲ. ಉಪಮುಖ್ಯಮಂತ್ರಿ, ಪಕ್ಷದ ರಾಜ್ಯಾಧ್ಯಕ್ಷ ಹುದ್ದೆಯಲ್ಲಿದ್ದ ವ್ಯಕ್ತಿಗೆ ಸೋಲಿನ ಕಹಿ ಸಹಿಸಲು ಕಷ್ಟವಾಗುತ್ತದೆ. ಈಶ್ವರಪ್ಪ ಅವರಂಥ ಜನಪ್ರತಿನಿಧಿಗಳು ಸದನದಲ್ಲಿರಬೇಕಿತ್ತು ಎಂದರು. ಆದರೆ, ತಮ್ಮನ್ನು ಟೀಕಿಸಿದ ಬಿಜೆಪಿ ನಾಯಕರು ಈಗ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಕುಟುಕಿದರು.
ಆಯೋಗದ ಮಾನ್ಯತೆ: ಪಕ್ಷ ಸ್ಥಾಪನೆಯಾಗಿ 5 ತಿಂಗಳಿನಲ್ಲೇ ವಿಧಾನಸಭೆ ಚುನಾವಣೆ ಎದುರಿಸಿದ್ದೇವೆ. ನಾವು ಆರು ಸ್ಥಾನ ಗೆದ್ದಿದ್ದರೂ 35 ಕ್ಷೇತ್ರಗಳಲ್ಲಿ 2ನೇ ಸ್ಥಾನ ಗಳಿಸಿದ್ದೇವೆ. ಕಡಿಮೆ ಸ್ಥಾನ ಗಳಿಸಿದರೂ ಶೇ.10ರಷ್ಟು ಮತವನ್ನು ಕೆಜೆಪಿ ಗಳಿಸಿದೆ. ಚಿನ್ಹೆ ಗೊಂದಲ ಇಲ್ಲದಿದ್ದರೆ ಇನ್ನೂ ಶೇ. 4ರಿಂದ 5ರಷ್ಟು ಹೆಚ್ಚುವರಿ ಮತ ಬರುತ್ತಿತ್ತು. ಇದೀಗ ಶೇ.10ರಷ್ಟು ಮತ ಗಳಿಸಿರುವುದರಿಂದ ಚುನಾವಣಾ ಆಯೋಗದ ಮಾನ್ಯತೆಯೂ ಸಿಗಲಿದೆ. ಇದು ಅತ್ಯಂತ ಸಂತೋಷದ ವಿಷಯ ಎಂದು ಯಡಿಯೂರಪ್ಪ ಹೇಳಿದರು.












Click it and Unblock the Notifications