ಬೆಂಗಳೂರು ಬಿಜೆಪಿ ಅಭ್ಯರ್ಥಿ ಪ್ರಚಾರಕ್ಕೆ ಬಿಎಸ್ವೈ ಫೋಟೋ
ಬೆಂಗಳೂರು, ಮೇ 4: ರಾಜ್ಯ ಬಿಜೆಪಿ ಘಟಕದ ಕಾರ್ಯದರ್ಶಿ ಮತ್ತು ಶಿವಾಜಿನಗರ ಕ್ಷೇತ್ರದ ಅಭ್ಯರ್ಥಿ ನಿರ್ಮಲ್ ಕುಮಾರ್ ಸುರಾನ ಗೊತ್ತಿದ್ದೋ, ಗೊತ್ತಿಲ್ಲದೋ ಆವಾಂತರ ಮಾಡಿಕೊಂಡು ಬಿಟ್ಟಿದ್ದಾರೆ.
ತಮಿಳು ಪತ್ರಿಕೆಗೆ ನಿರ್ಮಲ್ ಕುಮಾರ್ ಸುರಾನ ನೀಡಿರುವ ಮತ ಯಾಚಿಸುವ ಜಾಹೀರಾತಿನಲ್ಲಿ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರ ಭಾವಚಿತ್ರವನ್ನು ಬಳಸಿಕೊಂಡಿರುವ ಪ್ರಸಂಗ ನಡೆದಿದೆ.
ಶಿವಾಜಿನಗರ ಕ್ಷೇತ್ರದಲ್ಲಿ ತಮಿಳರ ಪ್ರಾಭಲ್ಯ ಹೆಚ್ಚಾಗಿರುವ ಹಿನ್ನಲೆಯಲ್ಲಿ ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ ಜಿ ರಾಮಚಂದ್ರನ್ ಜೊತೆ ಯಡಿಯೂರಪ್ಪ ನಡೆದುಕೊಂಡು ಬರುತ್ತಿರುವ ಫೋಟೋ, ಬಿಜಿಪಿ ಚಿಹ್ನೆ, ಕ್ರಮ ಸಂಖ್ಯೆಯೊಂದಿಗೆ ಸುರಾನ ಭಾವಚಿತ್ರದ ಜಾಹೀರಾತು ಪ್ರಕಟವಾಗಿದೆ.

ಈ ಜಾಹೀರಾತಿಗೆ ಪ್ರತಿಕ್ರಿಯಿಸಿರುವ ಸುರಾನ, ನನಗೂ ಈ ಜಾಹೀರಾತಿಗೂ ಯಾವುದೇ ಸಂಬಂಧವಿಲ್ಲ. ಯಾರೋ ತಲೆ ಕೆಟ್ಟವರು ಈ ಕೆಲಸ ಮಾಡಿದ್ದಾರೆಂದು ಹೇಳಿಕೆ ನೀಡಿ ನುಣುಚಿಕೊಂಡಿದ್ದಾರೆ.
ತಾನು ಮತ್ತೆ ಬಿಜೆಪಿಗೆ ಬರುತ್ತೇನೆ, ತನ್ನನ್ನು ಬಿಜೆಪಿಗೆ ಮತ್ತೆ ಕರೆತರಲು ಸರ್ವ ಪ್ರಯತ್ನಗಳು ನಡೆಯುತ್ತಲೇ ಇದೆ ಎಂದು ಇತ್ತೀಚೆಗೆ ಯಡಿಯೂರಪ್ಪ ಹೇಳಿಕೆ ನೀಡಿದ್ದರು.
ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ತೀವ್ರ ವಿರೋಧದ ನಡುವೆಯೂ ಬೆಂಗಳೂರಿನಲ್ಲಿ ತಿರುವಳ್ಳುವರ್ ಮತ್ತು ಚೆನ್ನೈನಲ್ಲಿ ಸರ್ವಜ್ಞ ಪ್ರತಿಮೆ ಅನಾವರಣ ಮಾಡಲಾಗಿತ್ತು. ಅಂದಿನ ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ, ಯಡಿಯೂರಪ್ಪ ಅವರನ್ನು 'ಚಿನ್ನತಂಬಿ' ಎಂದು ಕರೆದಿದ್ದನ್ನು ಸ್ಮರಿಸಿಕೊಳ್ಳಲು ಇದು ಸೂಕ್ತ ಸಮಯ.












Click it and Unblock the Notifications