ಬಿಜೆಪಿಯನ್ನು ಒಡೆದಿದ್ದು ಶೋಭಾ ಕರಂದ್ಲಾಜೆ

ತಮ್ಮ ಪಕ್ಷಕ್ಕೆ ಚೂರಿ ಹಾಕಿದ್ದು ಬಿಜೆಪಿಯ ಮಾಜಿ ಸಚಿವೆ ಶೋಭಾ ಕರಂದ್ಲಾಜೆ. ಪಕ್ಷಾಂತರಿಗಳಾಗಿ ಬಿಜೆಪಿ ಹೋಳಾಗಲು ಅವರೇ ಮುಖ್ಯ ಕಾರಣ ಎಂದು ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯೂ ಆದ ಬಿ ಸುರೇಶ್ ಗೌಡ ಅವರು ಶೋಭಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಹೊನ್ನುಡಿಕೆ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ಅಂದಿನ ಬಿಜೆಪಿ ಸರ್ಕಾರದ ಮಂತ್ರಿ ಮಂಡಲದಲ್ಲಿ ಸಹೋದ್ಯೋಗಿಗಳಾದ ರೇಣುಕಾಚಾರ್ಯ, ಗಣಿ ರೆಡ್ಡಿಗಳು ಸೇರಿ ಶೋಭಾ ಅವರನ್ನು ಸಚಿವ ಸ್ಥಾನದಿಂದ ನಿರ್ಗಮಿಸುವಂತೆ ಮಾಡಿದ್ದರು. ಆ ಸಂದರ್ಭದಲ್ಲಿ ಶೋಭಾರ ಸ್ವಾಭಿಮಾನ ಎಲ್ಲಿ ಹೋಗಿತ್ತು? ಎಂದು ಪ್ರಶ್ನಿಸಿದ ಅವರು ಚೂರಿ ಹಾಕಿದ ಜನ ಯಾರು ಎಂದು ಈ ನಾಡಿನ ಜನರಿಗೆ ತಿಳಿದಿದೆ ಎಂದು ಸೂಕ್ಷ್ಮವಾಗಿ ಹೇಳಿದರು.
ಚೂರಿ ಹಾಕುವ ಸಂಸ್ಕೃತಿ ನಮ್ಮದಲ್ಲ. ಪಕ್ಷ ನಿಷ್ಠೆ ಸಂಸ್ಕೃತಿ ನಮ್ಮದು ಎಂದ ಸುರೇಶ್, ತಾನು ಪಕ್ಷನಿಷ್ಠ ಸಾಮಾನ್ಯ ಕಾರ್ಯಕರ್ತ, ತಾನೊಬ್ಬ ಶಾಸಕನಾಗಿ ತನ್ನ ಕ್ಷೇತ್ರದ ಅಭಿವೃದ್ಧಿಗಾಗಿ ತನಗೆ ಮತ ನೀಡಿದ ಜನರ ಋಣ ತೀರಿಸಲು ಶ್ರದ್ಧಾ ಭಕ್ತಿಯಿಂದ ಅಂದಿನ ಮುಖ್ಯಮಂತ್ರಿ/ಸಚಿವರಲ್ಲಿ ಕಾಡಿ ಬೇಡಿ ಹಠ ಮಾಡಿ ಅನುದಾನ ತಂದು ಕ್ಷೇತ್ರ ಅಭಿವೃದ್ಧಿಪಡಿಸಿದ್ದೇನೆ. ಅದು ಯಾರದೋ ಭಿಕ್ಷೆಯಲ್ಲ' ಎಂದು ಮಾರ್ಮಿಕವಾಗಿ ಅವರು ನುಡಿದರು.












Click it and Unblock the Notifications