ಈಶ್ವರಪ್ಪ ವಿರುದ್ಧ ತನಿಖೆಗೆ ಅಸ್ತು ಎಂದ ರಾಜ್ಯಪಾಲರು

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಶೆಟ್ಟರ್ ಬಚ್ಚಿಟ್ಟಿರುವ ಸತ್ಯವನ್ನು ಹೊರಹಾಕಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಮಾತನಾಡುವ ಸಿಎಂ ಜಗದೀಶ್ ಶೆಟ್ಟರ್, ರಾಜ್ಯಪಾಲರು ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ಶಿಫಾರಸನ್ನು ಬಚ್ಚಿಟ್ಟು ಭ್ರಷ್ಟರನ್ನು ರಕ್ಷಿಸುತ್ತಿದ್ದಾರೆ ಎಂದು ಯಡಿಯೂರಪ್ಪ ಆರೋಪಿಸಿದ್ದಾರೆ.
ರಾಜ್ಯಾಪಾಲರು ಮಂತ್ರಿಗಳ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವುದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದು ಎಂದು ಈಶ್ವರಪ್ಪ ವಿರುದ್ಧದ ಕಡತವನ್ನು ಶೆಟ್ಟರ್ ಅವರಿಗೆ ಒಂಬತ್ತು ದಿನಗಳ ಹಿಂದೆ ರವಾನಿಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಶಿಫಾರಸ್ಸು ಮಾಡಿದ್ದಾರೆ. ಆದರೆ, ಶೆಟ್ಟರ್ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂಬುದು ಯಡಿಯೂರಪ್ಪ ಆರೋಪ.
ಶೆಟ್ಟರ್ ಗೆ ಸವಾಲು : ಈಶ್ವರಪ್ಪ ಅವರ ವಿರುದ್ಧ ಕ್ರಮಕ್ಕೆ ಅನುಮತಿ ನೀಡಿ, ರಾಜ್ಯಪಾಲರು ರವಾನಿಸಿರುವ ಕಡತವನ್ನು ತಕ್ಷಣ ವಿಲೇವಾರಿ ಮಾಡಿ ಎಂದು ಯಡಿಯೂರಪ್ಪ ಸಿಎಂ ಶೆಟ್ಟರ್ ಗೆ ಸವಾಲು ಹಾಕಿದ್ದಾರೆ. ನಿಮ್ಮ ಪಕ್ಷದಲ್ಲಿರುವ ಭ್ರಷ್ಟರ ಬಗ್ಗೆ ಏಕೆ ಮೌನ ವಹಿಸುತ್ತಿದ್ದೀರಿ? ಎಂದು ಶೆಟ್ಟರ್ ವಿರುದ್ಧ ಸಮರ ಸಾರಿದ್ದಾರೆ.
ಪ್ರಕರಣವೇನು : ಉಪ ಮುಖ್ಯಮಂತ್ರಿ ಈಶ್ವರಪ್ಪ ಅವರು ಆದಾಯ ಮೀರಿದ ಆಸ್ತಿ ಗಳಿಸಿದ್ದಾರೆ. ಆದ್ದರಿಂದ ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿ ಎಂದು ಕೋರಿ ನಾಗಲಕ್ಷ್ಮಿಬಾಯಿ ರಾಜ್ಯಪಾಲರಿಗೆ ಮನವಿ ಮಾಡಿದ್ದರು. ಜೊತೆಗೆ 29 ಪುಟಗಳ ದಾಖಲೆಯನ್ನು ಸಲ್ಲಿಸಿದ್ದರು.
ಈ ಪೈಕಿ 19 ದಾಖಲೆಗಳು ಶಿವಮೊಗ್ಗದ ಬಿ.ಎಚ್. ರಸ್ತೆಯಲ್ಲಿರುವ ವಾಣಿಜ್ಯ ಸಂಕೀರ್ಣ, ಕೈಗಾರಿಕಾ ಶೆಡ್, ನಿವೇಶನ ಮತ್ತು ವಸತಿಗೆ ಸಂಬಂಧಿಸಿದವು. ಜತೆಗೆ ಇಂಧನ ಖಾತೆ ಸಚಿವರಾಗಿದ್ದಾಗ ಈಶ್ವರಪ್ಪ ಅವರು ದಾಬಸ್‌ಪೇಟೆಯಲ್ಲಿ ಎರಡು ಎಕರೆ ಜಮೀನು ಮಂಜೂರು ಮಾಡಿಸಿಕೊಂಡಿದ್ದಾರೆ.
ಬಳ್ಳಾರಿಯ ಕುಡಿತಿನಿಯಲ್ಲಿ ಪವರ್ ಸ್ಟೇಷನ್ ಹೆಸರಿನಲ್ಲಿ 11 ಎಕರೆ ಭೂಮಿ ಪಡೆದುಕೊಂಡಿದ್ದಾರೆ. ಪತ್ನಿ ಮತ್ತು ಸೊಸೆಯ ಹೆಸರಿನಲ್ಲಿರುವ ಭರತ್ ಇಂಡಸ್ಟ್ರೀಸ್ ಹೆಸರಿನಲ್ಲಿ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಎರಡು ಶೆಡ್ ಪಡೆದುಕೊಂಡಿದ್ದಾರೆ ಮುಂತಾದ ಆರೋಪಗಳ ದಾಖಲೆಗಳಿದ್ದವು.
ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದ ರಾಜ್ಯಪಾಲ ಹಂಸರಾಜ್ ಭಾರದ್ವಾಜ್, ಆರೋಪಗಳು ಪ್ರಾಥಮಿಕವಾಗಿ ನಿಜ ಎನ್ನುವಂತೆ ಕಾಣಿಸುತ್ತಿದೆ. ಆದ್ದರಿಂದ ಸೂಕ್ತ ಕ್ರಮ ಕೈಗೊಳ್ಳಿ. ಸಚಿವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ಅಧಿಕಾರ ಮುಖ್ಯ ಮಂತ್ರಿಗಳಿಗೆ ಬಿಟ್ಟಿದ್ದು ಎಂದು ಸಿಎಂ ಶೆಟ್ಟರ್ ಗೆ ಕಡತ ಮರಳಿಸಿದ್ದಾರೆ.
ಆದರೆ, ಕಡರ ಕೈ ಸೇರಿ ಒಂಬತ್ತು ದಿನಗಳಾದರೂ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕ್ರಮ ಕೈಗೊಳ್ಳದೇ ಈಶ್ವರಪ್ಪ ಅವರನ್ನು ರಕ್ಷಿಸುತ್ತಿದ್ದಾರೆ ಎಂಬುದು ಯಡಿಯೂರಪ್ಪ ಅವರ ಆರೋಪ. ಸದಾನಂದಗೌಡರ ಚೀಟಿ ಹಗರಣ ಆರೋಪದಿಂದ ಮುಜುಗರಕ್ಕೆ ಒಳಗಾಗಿದ್ದ ಬಿಜೆಪಿಗೆ ಈಶ್ವರಪ್ಪ ಮತ್ತೊಷ್ಟು ಕಂಟಕ ತಂದೊಡ್ಡಿದ್ದಾರೆ.
ತಜ್ಞರೊಂದಿಗೆ ಚರ್ಚಿಸಿ ಕ್ರಮ : ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ಬಗ್ಗೆ ಕಾನೂನು ತಜ್ಞರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಶನಿವಾರ ಯಾದಗಿರಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಭ್ರಷ್ಟರನ್ನು ರಕ್ಷಿಸುತ್ತಿದೆ ಎಂಬ ಕೆಜಿಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆರೋಪವನ್ನು ತಳ್ಳಿ ಹಾಕಿದರು. ಸೋಲಿನ ಭೀತಿಯಲ್ಲಿ ಯಡಿಯೂರಪ್ಪ ಈ ರೀತಿ ಹೇಳುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications