ಉತ್ತಮ ಸರ್ಕಾರ ನೀಡುತ್ತೇವೆ : ಸುಷ್ಮಾ ಸ್ವರಾಜ್

ಭಾನುವಾರ ಸಂಜೆ ಮಲ್ಲೇಶ್ವರಂ ಆಟದ ಮೈದಾನದಲ್ಲಿ ಬಿಜೆಪಿಯ ವಿಧಾನಸಭೆ ಚುನಾವಣೆಯ ಬಹಿರಂಗ ಚುನಾವಣಾ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದಕ್ಷಿಣ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಅಧಿಕಾರ ಹಿಡಿದ ಬಿಜೆಪಿ ಜಗಳಗಳಲ್ಲೇ ಮುಳುಗಿ ಹೋಗಿದೆ ಎಂಬ ಆರೋಪವಿದೆ.
ಆದರೆ, ಈಗ ಜಗಳವಾಡುವವರು ಪಕ್ಷ ಬಿಟ್ಟು ಹೋಗಿದ್ದಾರೆ. ಮತ್ತೊಮ್ಮೆ ಜನರು ಮತ ನೀಡಿದರೆ ಅಭಿವೃದ್ಧಿ ಪರವಾದ ಆಡಳಿತ ಮಾಡಿ ತೋರಿಸುತ್ತೇವೆ ಎಂದು ಸುಷ್ಮಾ ಸ್ವರಾಜ್ ಜನರಿಗೆ ಭರವಸೆ ನೀಡಿದರು.
ರಾಜ್ಯದಲ್ಲಿ ಬಿಜೆಪಿ ಉತ್ತಮ ಆಡಳಿತ ನೀಡಿದೆ. ಜನರಿಗಾಗಿ ಸಾಕಷ್ಟು ಕೆಲಸ ಮಾಡಿದೆ. ಆದರೆ, ಸರ್ಕಾರದಲ್ಲಿ ಕುಳಿತವರು ಜಗಳವಾಡಿದರು. ಇದನ್ನು ತಡೆಗಟ್ಟಲು ರಾಷ್ಟ್ರೀಯ ನಾಯಕರು ಮಾಡಿದ ಪ್ರಯತ್ನಗಳು ವಿಫಲವಾದವು ಎಂದು ಸುಷ್ಮಾ ಹೇಳಿದರು.
ಜನರಿಗೆ ಉತ್ತಮ ಆಡಳಿತ ನೀಡಬೇಕೆಂದು ಎರಡು ಬಾರಿ ಮುಖ್ಯಮಂತ್ರಿಗಳನ್ನು ಬದಲಾವಣೆ ಮಾಡಲಾಯಿತು. ಮುಖ್ಯ ಮಂತ್ರಿಗಳಾಗಿ ಡಿ.ವಿ. ಸದಾನಂದಗೌಡ ಮತ್ತು ಜಗದೀಶ್ ಶೆಟ್ಟರ್ ಉತ್ತಮ ಆಡಳಿತ ನೀಡಿದ್ದಾರೆ. ಜನಪರ ಕೆಲಸ ಮಾಡಿದ್ದಾರೆ. ಆದ್ದರಿಂದ ಪಕ್ಷಕ್ಕೆ ಮತ ನೀಡಬೇಕೆಂದು ಮನವಿ ಮಾಡಿದರು.
ಕೆಜೆಪಿಗೆ ಭವಿಷ್ಯವಿಲ್ಲ : ರಾಜ್ಯದಲ್ಲಿ ನೂತನವಾಗಿ ಪ್ರಾರಂಭವಾಗಿರುವ ಕೆಜೆಪಿ ಪಕ್ಷಕ್ಕೆ ಸರ್ಕಾರ ರಚಿಸುವಷ್ಟು ಶಕ್ತಿಯಲ್ಲ, ಬೇರೆ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವಷ್ಟು ಸ್ಥಾನಗಳು ದೊರೆಯುವುದಿಲ್ಲ. ಆದ್ದರಿಂದ ಆ ಪಕ್ಷಕ್ಕೆ ಭವಿಷ್ಯವಿಲ್ಲ. ಜೆಡಿಎಸ್ ವಚನಭ್ರಷ್ಟ ಪಕ್ಷ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕೇಂದ್ರದಲ್ಲಿ ನಡೆದಂತೆ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕೇಂದ್ರದ ವಿರುದ್ಧ ಗರಂ : ಕೇಂದ್ರದ ಯುಪಿಎ ಸರ್ಕಾರವನ್ನು ಕಟುವಾಗಿ ಟೀಕಿಸಿದ ಸುಷ್ಮಾ ಸ್ವರಾಜ್ ಕಾಂಗ್ರೆಸ್ ಕಾಮನ್‌ವೆಲ್ತ್ ಹಗರಣ, 2ಜಿ ಸ್ಪೆಕ್ಟ್ರಂ ಹಗರಣ, ಕಲ್ಲಿದ್ದಲು ಹಗರಣ ಎಂದು ಭೂಮಿ, ಆಕಾಶ ಮತ್ತು ಪಾತಾಳದಲ್ಲೂ ಹಗರಣಗಳನ್ನು ಮಾಡಿದೆ ಎಂದು ವ್ಯಂಗ್ಯವಾಡಿದರು.
ಸಂಸದ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್, ಉಪಮುಖ್ಯಮಂತ್ರಿ ಆರ್. ಅಶೋಕ್, ಸಚಿವ ಎಸ್. ಸುರೇಶ್ ಕುಮಾರ್, ಸಂಸದ ಡಿ.ಬಿ. ಚಂದ್ರೇಗೌಡ, ಬಿಜೆಪಿ ಅಭ್ಯರ್ಥಿಗಳಾದ ಡಾ.ಸಿ.ಎನ್. ಅಶ್ವತ್ಥನಾರಾಯಣ, ಪಿ.ಸಿ. ಮೋಹನ್, ಎಸ್. ಹರೀಶ್, ಡಿ. ವೆಂಕಟೇಶಮೂರ್ತಿ, ಬಿ.ವಿ. ಗಣೇಶ್, ಜಗದೀಶ್ ಕುಮಾರ್ ಮುಂತಾದವರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications