ಮೇ 8ರಂದು ಉತ್ತರ ನೀಡುತ್ತೇನೆ: ಎಸ್ಎಂ ಕೃಷ್ಣ
ಬೆಂಗಳೂರು, ಏ.22: ಮಂಡ್ಯದ ವರ್ಚಸ್ವಿ ನಾಯಕ ಎಸ್ಎಂ ಕೃಷ್ಣ ಇನ್ನೇನು ಕಾಂಗ್ರೆಸ್ಸಿಗೇ 'ಕೈ'ಕೊಟ್ಟರು ಎಂದು ಪಕ್ಷದ ಕಾರ್ಯಕರ್ತರು ಮಾತನಾಡಿಕೊಳ್ಳುತ್ತಿರುವ ಹೊತ್ತಿನಲ್ಲೇ ಕೃಷ್ಣ ಸಾಹೇಬರು ರಣ ಕಹಳೆ ಮೊಳಗಿಸಿದ್ದಾರೆ.
ಈ ಹಿಂದೆ ಚುನಾವಣೆ ಸಂದರ್ಭದಲ್ಲಿ ಪಾಂಚಜನ್ಯ ಮೊಳಗಿಸಿದ್ದ ಮಾಜಿ ಕೇಂದ್ರ ಸಚಿವ ಕೃಷ್ಣ ವಿಜಯನಗರದಲ್ಲಿ ಪಕ್ಷದ ಅಭ್ಯರ್ಥಿ ಕೃಷ್ಣಪ್ಪ ಮತ್ತು ಪುತ್ರರ ಪರವಾಗಿ ಮತ ಯಾಚಿಸುವ ಮೂಲಕ ತಾವಿನ್ನೂ ಚಲಾವಣೆಯಲ್ಲಿರುವುದಾಗಿ ನಿರೂಪಿಸಿದ್ದಾರೆ.

ಕೊನೆ ಘಳಿಗೆಯಲ್ಲಿ ವಿದೇಶಕ್ಕೆ ಹಾರಲು ಸಿದ್ಧವಾಗಿದ್ದ ಕೃಷ್ಣ ಸಾಹೇಬರು ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಚುನಾವಣೆ ಉಸ್ತುವಾರಿ ಹೊತ್ತಿರುವ ಕೇಂದ್ರ ಸಚಿವ ಎಕೆ ಆಂಟನಿ ಅವರ ಯಶಸ್ವಿ ಸಂಧಾನದ ಫಲವಾಗಿ ಆಯ್ದ ಅಭ್ಯರ್ಥಿಗಳ ಪರ ಪ್ರಚಾರ ನಡೆಸುವುದಾಗಿ ಅಭಯಹಸ್ತ ನೀಡಿದ್ದಾರೆ. ಕೆಪಿಸಿಸಿ ಸಹ ಇದಕ್ಕೆ ಸ್ಪಂದಿಸಿದ್ದು, ಕೃಷ್ಣ ಸಂಚಾರಕ್ಕಾಗಿ ಹೆಲಿಕಾಪ್ಟರ್ ಅನ್ನು ಮೀಸಲಿರಿಸಿದೆ.
ಕೃಷ್ಣ ಅಖಾಡಕ್ಕೆ ಆಗಮಿಸುವುದಕ್ಕೂ ಮುನ್ನ ನ್ಯೂಸ್ ಚಾನೆಲುಗಳಿಗೆ ನೀಡಿದ ಸಂದರ್ಶನದಲ್ಲಿ ಪಕ್ಷದಲ್ಲಿನ ಕೆಲ ನಾಯಕರ ಬಗ್ಗೆ ತಮ್ಮಲ್ಲಿರುವ ಸಿಟ್ಟು, ಸೆಡವು, ದುಃಖ, ಅಸಮಾಧಾನಗಳನ್ನು ದೃಗ್ಗೋಚರವಾಗಿ ಹೊರಹಾಕಿದ್ದಾರೆ.
'ನಾನು ಮತ್ತು ದೇವೇಗೌಡರು ಇಬ್ಬರೇ ಹಳೆಯ ತಲೆಮಾರಿನ ರಾಜಕಾರಣಿಗಳು. ಹೀಗಾಗಿ ರಾಜಕಾರಣದಲ್ಲಿ ಕನಿಷ್ಠ ಮರ್ಯಾದೆ ನಿರೀಕ್ಷಿಸುವುದರಲ್ಲಿ ತಪ್ಪೇನಿದೆ?' ಎಂದೇ ಕೃಷ್ಣ ತಾವು ಪ್ರಚಾರದಿಂದ ವಿಮುಖರಾಗಲು ಮುಂದಾಗಿದ್ದೇಕೆ ಎಂಬುದಕ್ಕೆ ವಿವರಣೆ ನೀಡಿದ್ದಾರೆ.
'ರಾಜ್ಯದಲ್ಲಿ ಕಾಂಗ್ರೆಸ್ ಎಂಬ ಮನೆಯನ್ನು ಕಳೆದ 4 ದಶಕಗಳಿಂದ ಕಟ್ಟಿದ್ದೇನೆ. ಇದಕ್ಕಾಗಿ ಸಾಕಷ್ಟು ಬೆವರು ಹರಿಸಿದ್ದೇನೆ. ಈ ಚುನಾವಣೆಯಲ್ಲೂ ಬೆವರು ಹರಿಸುತ್ತೇನೆ' ಎನ್ನುವ ಮೂಲಕ ಪಕ್ಷಕ್ಕೆ ಇನ್ನೂ ತಾವು ಆಸರೆಯಾಗಿರುವುದಾಗಿ ಘೋಷಿಸಿದ್ದಾರೆ.
ಆದರೆ ಕೃಷ್ಣ ಪಾರಾಯಣ ಇಷ್ಟಕ್ಕೇ ಮುಗಿದಿಲ್ಲ. 'ತಮ್ಮನ್ನು ಪಕ್ಷದಲ್ಲಿ ಮೂಲೆಗುಂಪು ಮಾಡಲು ಯತ್ನಿಸಿದವರ ಬಗ್ಗೆ ಮೇ 8ರಂದು ಉತ್ತರ ನೀಡುತ್ತೇನೆ' ಎನ್ನುವ ಮೂಲಕ ಪಕ್ಷದಲ್ಲಿನ ಆಂತರಿಕ ವಿರೋಧಿಗಳಿಗೆ ಮುಂದಿದೆ ಮಾರಿ ಹಬ್ಬ ಎಂಬ ಖಡಕ್ಕಾದ ಸಂದೇಶವನ್ನು ಕೃಷ್ಣ ರವಾನಿಸಿದ್ದಾರೆ.












Click it and Unblock the Notifications