ಮಹಾಸಮರ : ನಾಮಪತ್ರ ಸಲ್ಲಿಕೆಯ ಜಾತ್ರೆ

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕುಮಾರಸ್ವಾಮಿ ತಮ್ಮ ಕ್ಷೇತ್ರಗಳಿಂದ ನಾಮಪತ್ರ ಸಲ್ಲಿಸಿದರೆ, ಭಾವಿ ಮುಖ್ಯಮಂತ್ರಿಗಳೆಂದು ಬಿಂಬಿಸಲಾಗುತ್ತಿರುವ ಡಾ.ಜಿ.ಪರಮೇಶ್ವರ್ ಕೊರಟಗೆರೆ ಕ್ಷೇತ್ರದಿಂದ ಮತ್ತು ವಿಪಕ್ಷ ನಾಯಕ ಸಿದ್ಧರಾಮಯ್ಯ ವರುಣಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದರು.
ಉಳಿದಂತೆ ರಾಜಾಜಿನಗರದ ಪ್ರತಿಸ್ಪರ್ಧಿಗಳಾದ ಸುರೇಶ್ ಕುಮಾರ್, ಶೋಭಾ ಕರಂದ್ಲಾಜೆ ಮತ್ತು ಮಂಜುಳಾ ನಾಯ್ಡು ಒಂದೇ ದಿನ ಉಮೇದುವಾರಿಕೆ ಸಲ್ಲಿಸಿದರು. ದಿ.ಎಸ್.ಬಂಗಾರಪ್ಪ ಪುತ್ರರಾದ ಸೊರಬ ಕ್ಷೇತ್ರದ ಕಾಂಗ್ರೆಸ್ ಮತ್ತು ಜೆಡಿಎಸ್ ಎದುರಾಳಿಗಳಾದ ಕುಮಾರ ಬಂಗಾರಪ್ಪ ಮತ್ತು ಮಧು ಬಂಗಾರಪ್ಪ ಒಂದೇ ದಿನ ನಾಮಪತ್ರ ಸಲ್ಲಿಸಿ ಗಮನ ಸೆಳೆದರು.
ಏ.17 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು ಎಲ್ಲಾ ಪಕ್ಷಗಳು 10 ರಿಂದ 12 ಅಭ್ಯರ್ಥಿಗಳನ್ನು ಘೋಷಿಸದೇ ಬಾಕಿ ಉಳಿಸಿಕೊಂಡಿವೆ. ಇಂದು ಅಥವ ನಾಳೆ ಅಭ್ಯರ್ಥಿಗಳ ಪಟ್ಟಿ ಪ್ರಕಟಗೊಳ್ಳಲಿದ್ದು, ಮಂಗಳವಾರ ಮತ್ತು ಬುಧವಾರ ಬಿರುಸಿನಿಂದ ನಾಮಪತ್ರ ಸಲ್ಲಿಕೆ ಕಾರ್ಯ ನಡೆಯುವ ನಿರೀಕ್ಷೆ ಇದೆ.
ತೆನೆ ಹೊತ್ತ ರಕ್ಷಿತಾ : ಬಿಎಸ್ಆರ್ ಕಾಂಗ್ರೆಸ್ ತೊರೆಯಲಿರುವ ನಟಿ ರಕ್ಷಿತಾ ಪದ್ಮನಾಭನಗರದ ಜೆಡಿಎಸ್ ವರಿಷ್ಠ ದೇವೇಗೌಡರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದರು. ನಂತರ ಜೆಡಿಎಸ್ ಸೇರುವುದಾಗಿ ಘೋಷಿಸಿದರು. (ಚುನಾವಣೆಗೆ ಸ್ಪರ್ಧಿಸುತ್ತಾರಾ)
ನಾನು ಒಂಟಿಯಾಗಿದ್ದೇನೆ ರೆಡ್ಡಿ : ಹಿಂದಿನ ಚುನಾವಣೆಯುಲ್ಲಿ ತಮ್ಮಂದಿರು ಜೊತೆಗಿದ್ದರು ಈ ಬಾರಿ ಒಂಟಿಯಾಗಿದ್ದೇನೆ. ಕ್ಷೇತ್ರದ ಜನರು ನನ್ನನ್ನು ಗೆಲ್ಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಮಾಜಿ ಸಚಿವ ಕರುಣಾಕರ ರೆಡ್ಡಿ ಹೇಳಿದ್ದಾರೆ. ಹರಪನಹಳ್ಳಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಅವರು ಇಂದು ನಾಮಪತ್ರ ಸಲ್ಲಿಸಿದರು.
ಆಭರಣ ವಶ : ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 8 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಶಿಡ್ಲಘಟ್ಟ ತಾಲೂಕಿನ ಚೆಕ್ ಪೋಸ್ಟ್ ಬಳಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮತದಾರರಿಗೆ ಹಂಚಲು ಇವುಗಳನ್ನು ತೆಗೆದುಕೊಂಡು ಹೋಗಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದು, ಯಾವ ಪಕ್ಷ ಅಭ್ಯರ್ಥಿಗೆ ಸೇರಿದ್ದು ಎಂದು ತಿಳಿದು ಬಂದಿಲ್ಲ.
ಕಗ್ಗಂಟಾದ ಕೋಟಿ ರಹಸ್ಯ : ನೆಲಮಂಗಲ ಟೋಲ್ ಗೇಟ್ ಸಮೀಪ ಎರಡು ದಿನಗಳ ಹಿಂದೆ ವಶಪಡಿಸಿಕೊಳ್ಳಲಾದ 1.69 ಕೋಟಿ ರೂ. ಹಣ ಯಾರಿಗೆ ಸೇರಿದ್ದು ಎಂದು ಪತ್ತೆಯಾಗಿಲ್ಲ. ಬ್ಯಾಂಕಿನ ಎಟಿಎಂಗಳಿಗೆ ತುಂಬಿಸಲು ಸಾಗಿಸುತ್ತಿದ್ದೆವು ಎಂದು ವಾಹನ ಚಾಲಕ ಹೇಳುತ್ತಿದ್ದಾನೆ. ಆದರೆ, ಯಾವ ಬ್ಯಾಂಕ್ ನವರು ಇದುವರೆಗೂ ಹಣ ಕಳೆದು ಹೋಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿಲ್ಲ.
ಆಯನೂರು ಪುನರ್ ನೇಮಕ : ಬಿಜೆಪಿ ವಕ್ತಾರರಾಗಿ ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಅವರನ್ನು ಪುನಃ ನೇಮಕ ಮಾಡಲಾಗಿದೆ. ಆರ್.ಅಶೋಕ್ ವಿರುದ್ಧ ವಾಗ್ದಾಳಿ ನಡೆಸಿದ ನಂತರ ಅವರನ್ನು ವಕ್ತಾರರ ಸ್ಥಾನದಿಂದ ವಜಾಗೊಳಿಸಲಾಗಿತ್ತು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ











Click it and Unblock the Notifications