ಬಿಜೆಪಿಗೆ ದೊಡ್ಡ ನಮಸ್ಕಾರ ಹಾಕಿದ ಜಾಲಪ್ಪ ಪುತ್ರ

ಇದರಲ್ಲಿ ಪ್ರಮುಖವಾಗಿ ಕೇಳಿ ಬರುತ್ತಿರುವ ಹೆಸರು ದೊಡ್ಡಬಳ್ಳಾಪುರ ಕ್ಷೇತ್ರದ ಹಾಲಿ ಶಾಸಕ ಜಾಲಪ್ಪ ನರಸಿಂಹಸ್ವಾಮಿ ಅವರದು. ಅವರಿಗೆ ಆಡಳಿತಾರೂಢ ಬಿಜೆಪಿ ಪಕ್ಷದ ವತಿಯಿಂದ ಅದಾಗಲೇ ಟಿಕೆಟ್ ಸಿಕ್ಕಿದೆ. ಆದರೂ ಅವರು ಸ್ಪರ್ಧೆಯಿಂದ ದೂರ ಸರಿದಿದ್ದು ಬಿಜೆಪಿ ಟಿಕೆಟ್ ಬೇಡ ಎಂದು ಶನಿವಾರ ಪ್ರಕಟಿಸಿದ್ದಾರೆ.
ನರಸಿಂಹಸ್ವಾಮಿ ಅವರ ಈ ರಾಜಕೀಯ ನಡೆಯ ಮರ್ಮ ಏನೆಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಅಪ್ಪ ಜಾಲಪ್ಪ ಪ್ರತಿನಿಧಿಸುತ್ತಿದ್ದ ಕಾಂಗ್ರೆಸ್ ವತಿಯಿಂದ ಗೆದ್ದು ಬಂದಿದ್ದ ನರಸಿಂಹಸ್ವಾಮಿ ಅವರು ಆಪರೇಶನ್ ಕಮಲದ ಕೂಸಾಗಿ ಬಿಜೆಪಿಗೆ ಪಕ್ಷಾಂತರಗೊಂಡು ಅಧಿಕಾರವನ್ನು ಅನುಭವಿಸಿದ್ದರು. ಉಪ ಚುನಾವಣೆಯಲ್ಲಿಯೂ ಗೆದ್ದುಬಂದಿದ್ದರು.
ಆದರೆ, ಪ್ರಸ್ತುತ ದೊಡ್ಡಬಳ್ಳಾಪುರ ಕಣದಲ್ಲಿ ಸ್ಪರ್ಧೆ ಬಹುತೇಕ ನಿಷ್ಕರ್ಶೆಯಾಗಿದೆ. ಚೆನ್ನಿಗಪ್ಪ ಜೆಡಿಎಸ್ ನಿಂದ, ಅದೇ ಜೆಡಿಎಸ್ ಪಕ್ಷದ ಬಂಡಾಯ ಅಭ್ಯರ್ಥಿಯಾಗಿ ಮುನೇಗೌಡ ಕಣಕ್ಕಿಳಿಸಿದ್ದಾರೆ. ಇನ್ನು ಕೆಲವೇ ಕ್ಷಣಗಳಲ್ಲಿ ಕೆಜೆಪಿ ಪಟ್ಟಿ ಬಿಡುಗಡೆಯಾಗಲಿದ್ದು, ಆ ಪಕ್ಷದ ವತಿಯಿಂದ ಸ್ಥಳೀಯ ಯುವಕ, ಚಿತ್ರಸಾಹಿತಿ ವಿ ನಾಗೇಂದ್ರ ಪ್ರಸಾದ್ ಅವರು ಕಣಕ್ಕೆ ಇಳಿಯುತ್ತಿದ್ದಾರೆ.
ಪರಿಸ್ಥಿತಿ ಹೀಗಿರುವಾಗ ನರಸಿಂಹಸ್ವಾಮಿ ಅವರು ಯಾರಿಗೆ ನೆರವಾಗಲು/ವರವಾಗಲು ಕಣದಿಂದ ಹಿಂದೆ ಸರಿದಿದ್ದಾರೆ ಎಂಬುದು ಸಾಕಷ್ಟು ಗೊಂದಲ ಮೂಡಿಸಿದೆ. ಇನ್ನು ಅವರು ಬಿಜೆಪಿಗೆ ಗುಡ್ ಬೈ ಹೇಳಿದ್ದಾರಾ? ಅಥವಾ ಪಕ್ಷೇತರರಾಗಿ ಸ್ಪರ್ಧಿಸುತ್ತಾರಾ? ಎಂಬುದೂ ತಿಳಿಯುತ್ತಿಲ್ಲ.
ತಂದೆಯವರಾದ ಕೇಂದ್ರ ಮಾಜಿ ಸಚಿವ ಆರ್ ಎಲ್ ಜಾಲಪ್ಪ ಮತ್ತು ಸೋದರರ ಕಡೆಯಿಂದ ಭಾರಿ ಒತ್ತಡ ಬಂದಾಗ ಈ ಹಿಂದೆಯೂ ನರಸಿಂಹ ಸ್ವಾಮಿ ಹೀಗೆಯೇ ಬಿಜೆಪಿಯಿಂದ ದೂರವಾಗಿದ್ದರು. ಬಹುಶಃ ಈಗಲೂ ಅದೇ ಒತ್ತಡವಾ ಅಥವಾ ಚೆನ್ನಿಗಪ್ಪ ಕಡೆಯಿಂದ ಪ್ರಲೋಭೆಗೊಳಗಾಗಿದ್ದಾರಾ ಎಂಬುದು ದೃಢಪಟ್ಟಿಲ್ಲ.












Click it and Unblock the Notifications