ಕಾಂಗ್ರೆಸ್ ಎರಡನೇ ಪಟ್ಟಿ ಕಸರತ್ತು ಪ್ರಾರಂಭ

ಮಂಗಳವಾರ ಮಧ್ಯಾಹ್ನ ಸ್ಕ್ರೀನಿಂಗ್ ಕಮಿಟಿ ಅಧ್ಯಕ್ಷ ಲೂಸಿಯಾನೋ ಫೆಲೆರೋ ನೇತೃತ್ವದಲ್ಲಿ ಸಭೆ ಆರಂಭವಾಗಿದೆ. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮುಂತಾದ ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದಾರೆ. 47 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಎರಡನೇ ಪಟ್ಟಿ ಅಂತಿಮಗೊಳಿಸಲು ಚರ್ಚೆ ನಡೆಸಲಾಗುತ್ತಿದೆ.
ಬಳ್ಳಾರಿಗರ ಪೈಪೋಟಿ : ಬಳ್ಳಾರಿ ನಗರ ಕ್ಷೇತ್ರದ ಅಭ್ಯರ್ಥಿಯಗಳನ್ನು ಆಯ್ಕೆ ಮಾಡುವುದು ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಸವಾಲಾಗಿದೆ. ಅನಿಲ್ ಲಾಡ್ , ಪಂಪಾಪತಿ, ಅಲ್ಲಂ ವೀರಭದ್ರಪ್ಪ, ಕೆ.ಸಿ.ಕೊಂಡಯ್ಯ, ಮಹಮದ್ ಇಕ್ಬಾಲ್ ಆಂಜನೇಯಲು ಮುಂತಾದವರು ಟಿಕೆಟ್ ಅಕಾಂಕ್ಷಿಗಳಾಗಿದ್ದು ಒಬ್ಬ ಅಭ್ಯರ್ಥಿ ಆಯ್ಕೆಗೆ ಸವಾಲಾಗಿದೆ.
ಎಲ್ಲಾ ಟಿಕೆಟ್ ಆಕಾಂಕ್ಷಿಗಳ ಜೊತೆ ಚರ್ಚಿಸಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಆಸ್ಕರ್ ಫರ್ನಾಂಡೀಸ್ ಸರ್ವ ಸಮ್ಮತ ಅಭ್ಯರ್ಥಿಯನ್ನು ಸೂಚಿಸಿದರೆ ಮಾತ್ರ ಅಭ್ಯರ್ಥಿ ಘೋಷಣೆ ಮಾಡುವುದಾಗಿ ಖಡಕ್ ಸಂದೇಶ ರವಾನಿಸಿದ್ದಾರೆ.
ಪಟ್ಟಿ ಪರಿಷ್ಕರಣೆ : ಮೊದಲನೆ ಪಟ್ಟಿ ಬಿಡುಗಡೆಯ ನಂತರ ಉಂಟಾಗಿರುವ ಅಸಮಾಧಾನದ ಹಿನ್ನೆಲೆಯಲ್ಲಿ 47 ಅಭ್ಯರ್ಥಿಗಳ ಪಟ್ಟಿಯನ್ನು ಎಚ್ಚರಿಕೆಯಿಂದ ಸಿದ್ದ ಪಡಿಸಲು ಕೇಂದ್ರ ನಾಯಕರು ಸಿದ್ಧವಾಗಿದ್ದಾರೆ.
ಕೇಂದ್ರ ಸಚಿವರ ಮಕ್ಕಳಿಗೆ ಟಿಕೆಟ್ ನೀಡುವುದು. ಪಕ್ಷೇತರರಿಗೆ ಅವರು ಕೇಳಿದ ಕ್ಷೇತ್ರದಲ್ಲಿ ಟಿಕೆಟ್ ನೀಡಿಕೆ ಮುಂತಾದ ನಿರ್ಧಾರಗಳನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಇಂದು ಸಂಜೆ ನಡೆಯುವ ಕೇಂದ್ರ ಚುನಾವಣಾ ಸಮಿತಿ ಸಭೆಗಳಲ್ಲಿ ತೆಗೆದುಕೊಳ್ಳಲಿದ್ದಾರೆ.
ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಅಭ್ಯರ್ಥಿಯಾರು? ಕೆಪಿಸಿಸಿ ಖಜಾಂಚಿ ಶಾಮನೂರು ಶಿವಶಂಕರಪ್ಪ ಅವರಿಗೆ ಟಿಕೆಟ್ ನೀಡಿಕೆ ಮುಂತಾದ ಮಹತ್ವದ ನಿರ್ಧಾರಗಳು ಇಂದು ಹೊರಬೀಳುವ ಸಂಭವವಿದೆ. ಏ.10ರಂದು ಕಾಂಗ್ರೆಸ್ ಎರಡನೇ ಪಟ್ಟಿ ಬಿಡುಗಡೆಯಾಗಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಪ್ರಚಾರಕ್ಕೆ ಒತ್ತು : ಟಿಕೆಟ್ ಹಂಚಿಕೆ ಗೊಂದಲ ಹೊರತು ಪಡಿಸಿ ರಾಜ್ಯಾದ್ಯಂತ ಪಕ್ಷದ ಪ್ರಚಾರ ಕಾರ್ಯ ಹೇಗಿರಬೇಕು ಎಂಬ ಬಗ್ಗೆ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಯೋಜನೆ ಸಿದ್ಧಗೊಳ್ಳುವ ನಿರೀಕ್ಷೆ ಇದೆ. ಅದರಂತೆ ಸೋನಿಯಾ ಮತ್ತು ರಾಹುಲ್ ಗಾಂಧಿ ಕರ್ನಾಟಕಕ್ಕೆ ಪ್ರಚಾರಕ್ಕರ ಬರುವ ದಿನಾಂಕಗಳು ಅಂತಿಮಗೊಳ್ಳುವ ಸಾಧ್ಯತೆ ಇದೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications