ಪರಿಮಳಾ ನಾಗಪ್ಪ ಹತ್ಯೆ ಯತ್ನ ಆರೋಪಿ ಬಂಧನ

ಭಾನುವಾರ ಚಾಮರಾಜನಗರ ಜಿಲ್ಲೆಯ ಹನೂರುನಲ್ಲಿ ಚುಣಾವಣಾ ಪ್ರಚಾರ ಮುಗಿಸಿಕೊಂಡು ಪರಿಮಳ ನಾಗಪ್ಪ ಮರಳುತ್ತಿದ್ದರು. ಮಾರ್ಟಳ್ಳಿ ಬಳಿ ಅವರ ಕಾರಿಗೆ ಟಿಪ್ಪರ್ ಲಾರಿ ಬಂದು ಡಿಕ್ಕಿ ಹೊಡೆದಿದೆ. ಆದೃಷ್ಟವಶಾತ್ ಯಾವುದೇ ಅಪಾಯಗಳಾಗದೇ ಪರಿಮಳ ನಾಗಪ್ಪ ಪಾರಾಗಿದ್ದಾರೆ.
ಪರಿಮಳ ನಾಗಪ್ಪ ಜೊತೆಯಲ್ಲಿದ್ದ ಬೆಂಬಲಿಗರು ಲಾರಿ ಚಾಲಕನನ್ನು ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ. ಕೊಳ್ಳೆಗಾಲ ಮೂಲದವರರಾದ ಲಾರಿ ಚಾಲಕ ಮೂರ್ತಿ, ಕುಡಿದು ಲಾರಿ ಓಡಿಸುತ್ತಿದ್ದ ಎಂದು ರಾಮಾಪುರ ಪೊಲೀಸರು ತಿಳಿಸಿದ್ದಾರೆ.
ಲಾರಿ ಚಾಲಕನ ವಿರುದ್ಧ ಕೊಲೆ ಯತ್ನದ ದೂರನ್ನು ಪರಿಮಳಾ ನಾಗಪ್ಪ ದಾಖಲಿಸಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಕೊಲೆ ಮಾಡುವ ಉದ್ದೇಶದಿಂದ ಲಾರಿ ಹತ್ತಿಸಲು ಯತ್ನಿಸಿದ್ದಾನೆಯೇ ಎಂದು ತನಿಖೆ ನಡೆಸುತ್ತಿದ್ದಾರೆ.
ಪರಿಮಳ, ಮುತ್ತುಲಕ್ಷ್ಮೀ ಮುಖಾಮುಖಿ : ಚಾಮರಾಜನಗರ ಜಿಲ್ಲೆಯ ಹನೂರು ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ವೀರಪ್ಪನ್ ಪತ್ನಿ ಮುತ್ತುಲಕ್ಷ್ಮೀ ಚಿಂತನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
2006ರಲ್ಲಿ ತಮಿಳುನಾಡಿನಲ್ಲಿ ನಡೆದ ಚುನಾವಣೆಗೆ ಸ್ಪರ್ಧಿಸಿ ಪೆನ್ನಾಗರಂ ಕ್ಷೇತ್ರದಲ್ಲಿ ಹತ್ತು ಸಾವಿರ ಮತಗಳನ್ನು ಪಡೆದು ಮುತ್ತುಲಕ್ಷ್ಮೀ ಸೋಲು ಅನುಭವಿಸಿದ್ದರು. ಸದ್ಯ ಹನೂರು ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸಲು ಅವರು ಮತಪಟ್ಟಿಯಲ್ಲಿ ಹೆಸರು ನೋಂದಾಯಿಸಿದ್ದಾರೆ.
ಹನೂರು ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಪರಿಮಳಾ ನಾಗಪ್ಪ. ಕಾಡುಗಳ್ಳ ವೀರಪ್ಪನ್ ನಿಂದ ಹತ್ಯೆಯಾದ ಮಾಜಿ ಸಚಿವ ಹೆಚ್. ನಾಗಪ್ಪ ಅವರ ಪತ್ನಿ. ಇವರಿಗೆ ಎದುರಾಳಿರಾಗಿ ಮುತ್ತುಲಕ್ಷ್ಮೀ ಸ್ಪರ್ಧಿಸಿದರೆ ಕ್ಷೇತ್ರದ ಚುನಾವಣೆ ಕುತೂಹಲ ಕೆರಳಿಸುವುದಂತೂ ಸತ್ಯ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications