ಬೆಂಗಳೂರಿಗರಿಗೆ ಈ ಶುಕ್ರವಾರ ಏನೋ 'ಕಾದಿದೆ'!

ಬರುವ ಶುಕ್ರವಾರ, ಅಂದರೆ ಚೈತ್ರಮಾಸ ಆರಂಭವಾದ ಮರುದಿನ ಏಪ್ರಿಲ್ 12ರಂದು ಬೆಂಗಳೂರಿನ ತಾಪಮಾನ 38 ಡಿಗ್ರಿ ಸೆಲ್ಶಿಯಸ್ ಆಗಲಿದೆ ಎಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ. ಇದು ಬಹುಶಃ ಕಳೆದ ತೊಂಬತ್ತು ವರ್ಷಗಳಲ್ಲಿ ಅತಿಹೆಚ್ಚು ತಾಪಮಾನವಾಗಲಿದೆ.
1931ರಲ್ಲಿ ಗರಿಷ್ಠ ತಾಪಮಾನ 38.9 ಡಿಗ್ರಿ ಸೆಲ್ಶಿಯಸ್ಸಿಗೆ ಮುಟ್ಟಿತ್ತು. ಶುಕ್ರವಾರದ ತಾಪಮಾನ ಕೂಡ ಅದರ ಆಜುಬಾಜು ಬರಲಿದೆ. ತಾಪಮಾನ 34ರಿಂದ 36ರೊಳಗೆ ಇದ್ದಾಗಲೇ ಬೆವರಿ ಬಸವಳಿಯುತ್ತಿರುವ ಬೆಂಗಳೂರಿಗರ ಸ್ಥಿತಿ 38 ಡಿಗ್ರಿ ತಲುಪಿದರೆ ಏನಾಗಬಲ್ಲದು? ಯೋಚನೆ ಮಾಡಿ.
ಕೆಲ ದಿನಗಳ ಹಿಂದೆ ಕಾಣಿಸಿಕೊಂಡಿದ್ದ ಕೆಲ ಮೋಡಗಳನ್ನು ಗಾಳಿ ಕಿಡ್ನಾಪ್ ಮಾಡಿಕೊಂಡು ಹೋಗಿದ್ದು, ರಾತ್ರಿ ವೇಳೆಯಲ್ಲಿ ನಕ್ಷತ್ರಗಳನ್ನು ನಿಚ್ಚಳವಾಗಿ ಎಣಿಸಬಹುದಾಗಿದೆ. ಇನ್ನು ಹಗಲಲ್ಲಿ ಕೆಲಸ ಭೊಗಸಿಗೆಂದು ಅಡ್ಡಾಡುವವರ ಪಾಡು ಕೇಳುವುದೇ ಬೇಡ. ಕುಕ್ಕರು ಮುಚ್ಚಳ ತೆಗೆದಾಗ ರಾಚುವ ಹಬೆಯಂತೆ ಬಿಸಿ ಮುಖಕ್ಕೆ ರಾಚುತ್ತಿದೆ. ಬೆಳಗಿನಿಂದ ರಾತ್ರಿಯವರೆಗೆ ಜ್ಯೂಸ್ ಅಂಗಡಿಯವರಿಗೆ ಭರ್ಜರಿ ಆದಾಯ.
ಬೈಕ್ ಓಡಿಸುವವರು ಮರ ಸಿಕ್ಕಕೂಡಲೆ ತಂಪು ಮಾಡಿಕೊಂಡು ಮುಂದೆ ಹೋಗುವುದನ್ನು ರೂಢಿ ಮಾಡಿಕೊಂಡಿದ್ದಾರೆ. ಕಣ್ಣಿಗೆ ಕಪ್ಪು ಕನ್ನಡಕಗಳು ಸರ್ವೇಸಾಮಾನ್ಯವಾಗಿವೆ. ವಾಹನ ಓಡಿಸುವ ಯುವತಿಯರು ಕೈಗವಸು, ಮುಖಕ್ಕೆ ವೇಲು, ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕಿಕೊಂಡು ಅಡ್ಡಾಡುತ್ತಿರುವ ದೃಶ್ಯ ಕಣ್ಣಿಗೆ ಬೀಳುತ್ತಿರುತ್ತದೆ. ಮುಖದ ಕಾಂಪ್ಲೆಕ್ಷನ್ನೂ ಹಾಳಾಗಬಾರದು ಚರ್ಮವೂ ಸುಟ್ಟುಹೋಗಬಾರದು.
ರಾಜ್ಯದ ಗರಿಷ್ಠ ತಾಪಮಾನ ಗುಲಬರ್ಗಾದಲ್ಲಿ ದಾಖಲಾಗಿದ್ದು, ಭಾನುವಾರ 42.2 ಡಿಗ್ರಿಯಷ್ಟು ತಾಪಮಾನವಿತ್ತು. ಇದು ಕಳೆದ ವರ್ಷ ಈ ಸಮಯಕ್ಕೆ ಹೋಲಿಸಿದರೆ 3 ಡಿಗ್ರಿಯಷ್ಟು ಹೆಚ್ಚಿದೆ ಎಂದು ಹವಾಮಾನ ಇಲಾಖೆ ತಜ್ಞರು ಹೇಳಿದ್ದಾರೆ. ಪೂಜಾಗಾಂಧಿ ಎಲೆಕ್ಷನ್ನಿಗೆ ನಿಂತಿರುವ ರಾಯಚೂರು, ಬಳ್ಳಾರಿಯಲ್ಲಿಯೂ ನೆಲ ಕಾದ ಕಾವಲಿಯಂತಾಗಿದೆ. ಕೊಪ್ಪಳ ಕೂಡ ಹಿಂದೆ ಬಿದ್ದಿಲ್ಲ, ಅಲ್ಲಿ 39 ಡಿಗ್ರಿಯಷ್ಟು ತಾಪಮಾನ ದಾಖಲಾಗಿದೆ.
ಈ ಸಮಯದಲ್ಲಿ ಅಕಾಲಿಕ ಮಳೆ ಸುರಿಯದಿದ್ದರೆ ಉತ್ತರ ಕರ್ನಾಟಕದ ಜನತೆ ಈ ಬೇಸಿಗೆಯಲ್ಲಿ ಬೆಂದು ಹೋಗಲಿದ್ದಾರೆ ಎಂದು ತಜ್ಞರು ಹೇಳಿದ್ದಾರೆ. ಹಾಗೆಯೆ, ಹೊರಗಡೆ ಅಡ್ಡಾಡುವಾಗ ಬಿಸಿಲನ್ನು ತಪ್ಪಿಸಿಕೊಳ್ಳಲು ಛತ್ರಿಗಳನ್ನು ತೆಗೆದುಕೊಂಡು ಹೋಗಲು ಮರೆಯಬಾರದು ಎಂದು ಸೂಚನೆ ನೀಡಲಾಗಿದೆ. ಜೊತೆಗೆ ಕೈಯಲ್ಲಿ ಒಂಟು ಬಾಟಲು ಶುದ್ಧವಾದ ನೀರೂ ಇರಲಿ. ಹಾಳುಮೂಳು ಸಾಫ್ಟ್ ಡ್ರಿಂಕ್ಸ್ ಕುಡಿಯುವ ಬದಲು ಎಳನೀರು ಕುಡಿಯಿರಿ.











Click it and Unblock the Notifications