ಶೆಟ್ಟರ್ ವಿರುದ್ಧ ಬಿದರಿ ಸ್ಪರ್ಧೆಗೆ ಕಾಂಗ್ರೆಸ್ ಚಿಂತನೆ

ತೇರದಾಳ ಕ್ಷೇತ್ರವನ್ನು ಉಮಾಶ್ರೀ ಅವರಿಗೆ ಕೊಟ್ಟಿರುವ ಕಾಂಗ್ರೆಸ್ ಈಗ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಟಿಕೆಟ್ ಅನ್ನು ಶಂಕರ್ ಬಿದರಿ ಅವರಿಗೆ ನೀಡಲು ಕೆಪಿಸಿಸಿಯಲ್ಲಿ ಚರ್ಚೆ ನಡೆದಿದೆಯಂತೆ. ಶೆಟ್ಟರ್ ಹಾಗೂ ಬಿದರಿ ಇಬ್ಬರೂ ಬಣಜಿಗ ಸಮುದಾಯಕ್ಕೆ ಸೇರಿದವರಾಗಿದ್ದು, ಜನಪ್ರಿಯತೆಯಲ್ಲಿ ಸಮವಾಗಿ ತೂಗುತ್ತಾರೆ.
ವೀರಪ್ಪನ್ ಕಾರ್ಯಚಾರಣೆ ವೇಳೆಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಮಾಡಿದ ಆರೋಪ ಹೊತ್ತಿದ್ದ ಬಿದರಿ ಅವರು ನಿರ್ದೋಷಿ ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ. ಆದೇಶ ಹೊರ ಬಿದ್ದ ದಿನ ಬಿದರಿಯಂಥ ಸೂಪರ್ ಕಾಪ್ ಕೂಡಾ ಕೆಮೆರಾ ಮುಂದೆ ಅಳು ತಡೆದುಕೊಳ್ಳಲಾಗಿರಲಿಲ್ಲ. ಜನರ ಅನುಕಂಪ, ನಂಬಿಕೆ ಇವರ ಮೇಲೆ ಸಹಜವಾಗಿ ಇದೆ.
ಆದರೆ, ಬಿದರಿ ಅವರು ಇನ್ನೂ ಸ್ಪರ್ಧೆ ಬಗ್ಗೆ ಸ್ಪಷ್ಟವಾಗಿ ಹೇಳಿಲ್ಲ. ತೇರದಾಳ ಟಿಕೆಟ್ ಕೈ ತಪ್ಪಿರುವುದರಿಂದ ಈ ಬಾರಿ ಅಸೆಂಬ್ಲಿ ಸಹವಾಸವೇ ಬೇಡ ಎಂದು ಹೇಳಿ ಮುಂದಿನ ಲೋಕಸಭೆಗೆ ಬಾಗಲಕೋಟೆ ಟಿಕೆಟ್ ಕೇಳಿದರೂ ಅಚ್ಚರಿ ಏನಿಲ್ಲ. ಆದರೆ, ಈ ಬಾರಿ ಸ್ಪರ್ಧಿಸಿ ಚುನಾವಣೆ ಅನುಭವ ಪಡೆದುಕೊಳ್ಳಿ. ಸೋತರೂ ಚಿಂತೆಯಿಲ್ಲ. ಲೋಕಸಭೆ ಟಿಕೆಟ್ ನೀಡುತ್ತೇವೆ ಎಂದು ಕೆಪಿಸಿಸಿ ಭರವಸೆ ನೀಡಿದೆಯಂತೆ.
ಬಿದರಿಗೆ ಟಿಕೆಟ್ ಸಿಕ್ಕಿದ್ದೇ ಆದಲ್ಲಿ ಶೆಟ್ಟರ್ ಅವರ ವಿರುದ್ಧ ಪ್ರಬಲ ಸ್ಪರ್ಧಿ ಇಳಿಸಿದಂತಾಗುತ್ತದೆ. ಹಾಗೂ ವೀರಶೈವ ಸಮುದಾಯದ ನಾಯಕ ಅದರಲ್ಲೂ ಉತ್ತರ ಕರ್ನಾಟಕ ಮೂಲದವರಿಗೆ ನ್ಯಾಯ ದೊರಕಿಸಿಕೊಟ್ಟೆವು ಎಂದು ಕೈ ಪಡೆ ಎಲ್ಲೆಡೆ ಘೋಷಿಸಿಕೊಳ್ಳಬಹುದು.
ಶಂಕರ್ ಬಿದರಿ ಅಲ್ಲದೆ ಎ.ಎಂ ಹಿಂಡಸಗೇರಿ, ರಾಜಶೇಖರ್ ಮೆಣಸಿನಕಾಯಿ, ಸದಾನಂದ ಡಂಗಣವರ್ ಅವರ ಹೆಸರು ಕೇಳಿ ಬಂದರೂ ಯಾರೂ ಕೂಡಾ ಶೆಟ್ಟರ್ ಎದುರು ನಿಲ್ಲಲು ಧೈರ್ಯ ಮಾಡಿಲ್ಲ. ಮಾಜಿ ಮೇಯರ್ ಅನಿಲ್ ಕುಮಾರ್ ಪಾಟೀಲ್ ಅವರು ಎರಡು ಬಾರಿ ಶೆಟ್ಟರ್ ಎದುರು ಕಾಂಗ್ರೆಸ್ ಟಿಕೆಟ್ ಪಡೆದು ನಿಂತಿದ್ದರು ಆದರೆ, ಗೆಲುವಿನ ನಗೆ ಬೀರಲಾಗಿಲ್ಲ.ಈಗ ಕೈ ಸಹವಾಸ ಸಾಕು ಎಂದು ಬಿಎಸ್ ಆರ್ ಕಾಂಗ್ರೆಸ್ ಸೇರಿದ್ದಾರೆ.
ಉಳಿದಂತೆ ಮಹೇಶ್ ನಲವಾಡ, ಮಂಜುನಾಥ್ ಕುನ್ನೂರು ಅವರ ಮನ ಒಲಿಸಲು ಕೆಪಿಸಿಸಿ ಯತ್ನಿಸುತ್ತಿದೆ. ಕಾರ್ಪೊರೇಟರ್ ಪಿ.ಕೆ ರಾಯಣಗೌಡರ್ ಅವರ ಹೆಸರು ಕೇಳಿ ಬಂದಿರುವುದು ಸ್ವತಃ ಅವರಿಗೆ ಅಚ್ಚರಿ ಮೂಡಿಸಿರಲಿಕ್ಕೂ ಸಾಕು.
ಕೆಜೆಪಿಯಂತೂ ಶಂಕರಣ್ಣ ಮುನವಳ್ಳಿ ಅವರನ್ನು ನೆಚ್ಚಿಕೊಂಡಿದೆ. ಕೆಜೆಪಿ ಟಿಕೆಟ್ ಪಡೆಯಲು ಶಂಕರಣ್ಣ ಕೂಡಾ ಸಿದ್ಧವಾಗಿದ್ದಾರೆ. ಕೆಜೆಪಿ ಪರ ವಿಜಯ್ ಸಂಕೇಶ್ವರ ಹಾಗೂ ಮೋಹನ್ ಲಿಂಬಿಕಾಯಿ ಇದ್ದರೂ ಬೇರೆ ಕ್ಷೇತ್ರದ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದು, ಶೆಟ್ಟರ್ ವಿರುದ್ಧ ಸ್ಪರ್ಧೆಗಿಳಿಯುತ್ತಿಲ್ಲ. ಸಂಕೇಶ್ವರ ಅಸೆಂಬ್ಲಿ ಟಿಕೆಟ್ ಬೇಡ ಎಂದರೆ, ಲಿಂಬಿಕಾಯಿ ಧಾರವಾಡ ಪಶ್ಚಿಮದ ಕಡೆ ತಿರುಗಿದ್ದಾರೆ.
ಸದ್ಯಕ್ಕೆ ಕೆಜೆಪಿ ಕಾರ್ಪೊರೇಟರ್ ಅಜ್ಜಪ್ಪ ಬೆಂಡಿಗೇರಿ ಅಥವಾ ಮಾಜಿ ಸಚಿವ ಜಬ್ಬಾರ್ ಖಾನ್ ಹೊನ್ನಾಳಿಗೆ ಟಿಕೆಟ್ ಆಫರ್ ನೀಡಿದೆಯಂತೆ. ಆದರೆ,ಅವರು ಕೂಡಾ ಶೆಟ್ಟರ್ ವಿರುದ್ಧ ಸೋಲಲು ರೆಡಿಯಿಲ್ಲ.
ಇತ್ತ ಬಿಎಸ್ ಆರ್ ಕಾಂಗ್ರೆಸ್ ನಿಂದ ಅನಿಲ್ ಕುಮಾರ್ ಪಾಟೀಲ್ ಪಡೆದು ಜೆಡಿಎಸ್ ಟಿಕೆಟ್ ಪಡೆಯುವ ಸಾಧ್ಯತೆಯಿದೆಯಂತೆ. ಬಸವರಾಜ ಹೊರಟ್ಟಿ ಮಗ ವಸಂತ ಹೊರಟ್ಟಿ ಹೆಸರು ಕೇಳಿ ಬಂದಿದೆ. ಉದ್ಯಮಿ ತಮ್ಬ್ ರೇಜ್ ಸೌಶಿ ಟಿಕೆಟ್ ಪಡೆಯುವ ಸಾಧ್ಯತೆಯಿದೆ.ಸದ್ಯಕ್ಕೆ ಶೆಟ್ಟರ್ ವಿರುದ್ಧ ಉದ್ಯಮಿ ರಾಮಚಂದ್ರ ಗೋಪಾಲ್ ಬಡ್ಡಿ ಅವರು ಶೆಟ್ಟರ್ ವಿರುದ್ಧ ಸ್ಪರ್ಧಿಸುವ ಪಕ್ಷೇತರ ಅಭ್ಯರ್ಥಿಯಾಗಿದ್ದಾರೆ.











Click it and Unblock the Notifications