ರಾಜ್ಯದ ಮೂರು ಜಿಲ್ಲೆಗಳಲ್ಲಿ ಸಿಬಿಐ ದಾಳಿ

ರಾಜಕಾರಣಿಗಳ ಮನೆ ಮೇಲೆ ಮಾತ್ರ ದಾಳಿ ನಡೆಸುತ್ತಿದ್ದ ಸಿಬಿಐ ಈ ಬಾರಿ ಬಳ್ಳಾರಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿದ್ದ ಐಎಎಸ್, ಐಪಿಎಸ್, ಐಎಫ್ಎಸ್, ಹಿರಿಯ ಪೊಲೀಸ್ ಅಧಿಕಾರಿಗಳು, ಅರಣ್ಯ ಇಲಾಖೆ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿದೆ.
ಬೇಲೆಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆಸಿದ್ದು, ಬೆಂಗಳೂರು, ಬಳ್ಳಾರಿ, ಬೆಳಗಾವಿ, ಉತ್ತರ ಪ್ರದೇಶದ ಅಲಹಾಬಾದ್ ನಲ್ಲಿರುವ ವಿವಿಧ ಅಧಿಕಾರಿಗಳ ಮನೆ ಮೇಲೆ, ಶುಕ್ರವಾರ ರಾತ್ರಿ ಸುಮಾರು 7.30ಕ್ಕೆ ಈ ದಾಳಿ ನಡೆಸಲಾಗಿದೆ.
ಪ್ರಮುಖ ಅಧಿಕಾರಿಗಳು : ಬಳ್ಳಾರಿಯಲ್ಲಿ ಕಾರ್ಯನಿರ್ವಹಿಸಿದ್ದ ಎಸ್ ಪಿ ಸೀಮಂತ್ ಕುಮಾರ್ ಸಿಂಗ್, ಹೆಚ್ಚುವರಿ ಎಸ್ಪಿ ಅಶೋಕ್ ಕುರೇರಾ, ಐಎಫ್ಎಸ್ ಅಧಿಕಾರಿ ಮನೋಜ್ ಕುಮಾರ್ ಶುಕ್ಲಾ, ಸಂಡೂರಿನ ರಮಾಕಾಂತ್, ದೇವಯ್ಯ ಮನೆಗಳ ಮೇಲೆ ದಾಳಿ ನಡೆದಿದೆ.
ಅಶೋಕ್ ಕುರೇರಾ ಪ್ರಸ್ತುತ ಉತ್ತರ ಪ್ರದೇಶದ ಅಲಹಾಬಾದ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಉಳಿದ ಅಧಿಕಾರಿಗಳು ಬೆಳಗಾವಿ, ಬೆಂಗಳೂರು ಮತ್ತು ಬಳ್ಳಾರಿಯಲ್ಲಿದ್ದಾರೆ. ಅಕ್ರಮ ಅದಿರು ಸಾಗಣೆ ಸಂಬಂಧ ಮಾಹಿತಿ ಸಂಗ್ರಹಿಸಿದ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಸುಪ್ರೀಂ ಆದೇಶ : ಬೇಲೆಕೇರಿ ಅಕ್ರಮ ಅದಿರು ಸಾಗಣೆ ಸಂಬಂಧ ಕೇಂದ್ರಿಯ ಉನ್ನತಾಧಿಕಾರದ ಸಮಿತಿ (ಸಿಇಸಿ) ಸುಪ್ರೀಂಕೋರ್ಟ್ ಗೆ ವರದಿ ನೀಡಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯ 50 ಲಕ್ಷ ಟನ್ ಅದಿರನ್ನು ಬೇಲೆಕೇರಿಗೆ ಅಕ್ರಮವಾಗಿ ಸಾಗಿಸಲು 5 ಲಕ್ಷ ಟ್ರಿಪ್ ಲಾರಿಗಳು ಸಂಚರಿಸಬೇಕು.
ಹಿರಿಯ ಅಧಿಕಾರಿಗಳ ಸಹಾಯವಿಲ್ಲದೆ ಇಂತಹ ಕೆಲಸ ಅಸಾಧ್ಯ ಎಂದು ಪ್ರಕಕರಣದ ವಿಚಾರಣೆಯನ್ನು ಸಿಬಿಐಗೆ ವಹಿಸುವ ಮೊದಲು ಸೂಚಿಸಿತ್ತು. ಸುಪ್ರೀಂನ ಈ ಆದೇಶದಂತೆ ದಾಳಿ ನಡೆಸಿರಬಹದು ಎಂದು ಶಂಕಿಸಲಾಗಿದೆ.
ಬೇಲೆಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಜನಾರ್ಧನ ರೆಡ್ಡಿ ಅವರನ್ನು ಸಿಬಿಐ ವಿಚಾರಣೆ ನಡೆಸುತ್ತಿದೆ. ಅವರು ನೀಡಿದ ಮಾಹಿತಿ ಹಿನ್ನೆಲೆಯಲ್ಲಿ ದಾಳಿ ನಡೆದಿರಬಹುದು ಎಂದು ಶಂಕಿಸಲಾಗಿದೆ. ಒಟ್ಟಾರೆ ಶುಕ್ರವಾರ ಹಿರಿಯ ಅಧಿಕಾರಿಗಳಿಗೆ ಸಿಬಿಐ ತಂಡ ಸರಿಯಾಗಿಯೇ ಶಾಕ್ ನೀಡಿದೆ. (ಬೇಲೆಕೇರಿ ಅಧಿಕಾರಿಗಳಿಗೆ ಸಿಕ್ಕ ಲಂಚವೆಷ್ಟು?)
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications