ನಾಮಪತ್ರ ಸಲ್ಲಿಕೆಗೆ ಒಳ್ಳೆ ಮಹೂರ್ತ ಯಾವುದು?
ಬೆಂಗಳೂರು, ಏ.5: ವಿಧಾನಸಭೆ ಚುನಾವಣೆ ಅಖಾಡಕ್ಕಾಗಿ ಬಹುತೇಕ ಪಕ್ಷಗಳು ತಮ್ಮ ಹುರಿಯಾಳುಗಳನ್ನು ಹುರಿಗೊಳಿಸುತ್ತಿವೆ. ಆಡಳಿತಾರೂಢ ಬಿಜೆಪಿ ಅಭ್ಯರ್ಥಿಗಳ ಒಂದು ಪಟ್ಟಿ ಇಂದು ಹೊರಬೀಳುವ ಸಾಧ್ಯತೆ ಹೆಚ್ಚಾಗಿದೆ. ಸಿ ಎಂ ಶೆಟ್ಟರ್ ಮತ್ತು ಅನಂತ್ ಕುಮಾರ್ ಒಟ್ಟಿಗೆ ಇಂದು ಬೆಳಗ್ಗೆ ದೆಹಲಿ ವಿಮಾನ ಹತ್ತಿದ್ದಾರೆ. ಅಲ್ಲಿ ರಾಜನಾಥ್ ಸಿಂಗರನ್ನು ಭೇಟಿ ಮಾಡಿ, ಈಗಾಗಲೇ ಸಿದ್ದವಾಗಿರುವ ಪಟ್ಟಿಯ ಬಿಡುಗಡೆ ಮಾಡಲು ಅನುಮೋದನೆ ಪಡೆಯಬಹುದು.
ಆದರೆ ಕಾಂಗ್ರೆಸ್ ಪರಿಸ್ಥಿತಿ ಹಾಗಿಲ್ಲ. ಅದೇನೂ ಗೆಲ್ಲುವ ಕುದುರೆ ಎಂದು ಬಿಂಬಿತವಾಗಿರುವುದಕ್ಕೆ ಅಷ್ಟೊಂದು ಟಿಕೆಟ್ ಆಕಾಂಕ್ಷಿಗಳು ಹೆಚ್ಚಾದರೋ ಏನೂ? ಅಂತೂ ಕಾಂಗ್ರೆಸ್ ಪಕ್ಷಕ್ಕೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಸಕಾಲದಲ್ಲಿ ಬಿಡುಗಡೆ ಮಜಾಡುವುದಕ್ಕೆ ತ್ರಾಸಾಗುತ್ತಿದೆ.

ಏನೇ ಆಗಲಿ... ಟಿಕೆಟ್ ಪಡೆಯುತ್ತಿದ್ದಂತೆ ಅಭ್ಯರ್ಥಿಗಳು ಮತ್ತೊಂದು ಸುತ್ತಿನ ಅಗ್ನಿಪರೀಕ್ಷೆಗೆ ಎದುರಾಗಬೇಕಾಗುತ್ತದೆ. ಏನಪ್ಪಾ ಅಂದರೆ ಯಾವ ಶುಭ ಘಳಿಗೆಯಲ್ಲಿ ನಾಮಪತ್ರ ಸಲ್ಲಿಕೆ ಮಾಡುವುದು ಎಂಬುದು.
ಇದಕ್ಕಾಗಿ ಈಗಾಗಲೇ ಟಿಕೆಟ್ Confirm ಆದವರು ಗುಟ್ಟಾಗಿ ತಮ್ಮ ತಮ್ಮ ಜ್ಯೋತಿಷಿಗಳನ್ನು ಭೇಟಿ ಮಾಡಿ, ಶಾಸ್ತ್ರಿಗಳೇ ಮಹೂರ್ತ ಫಿಕ್ಸ್ ಮಾಡಿಕೊಡಿ ಎಂದು ಕೇಳತೊಡಗಿದ್ದಾರೆ. ಜತೆಗೆ ಟಿಕೆಟ್ ತಪ್ಪಿದವರ ನಿಟ್ಟುಸಿರೂ ತಾಕದಿರಲಿ, ವಿರೋಧಿಗಳ ಕಣ್ಣು ಬೀಳದಿರಲಿ ಎಂದು ಶಾಂತಿ ಶಾಸ್ತ್ರ ಸಹ ಮಾಡಿಸುತ್ತಿದ್ದಾರೆ. ಹೋಮ ಹವನಗಳು ಜೋರಾಗಿವೆ. ಹಾಗಾಗಿ ಶಾಸ್ತ್ರಿಗಳು/ ಜ್ಯೋತಿಷಿಗಳಿಗೂ ಡಿಮಾಂಡ್ ಕುದುರಿದೆ.
ಏಪ್ರಿಲ್ 10ರಿಂದ 17ರವರೆಗೆ ನಾಮಪತ್ರ ಸಲ್ಲಿಕೆಗೆ ದಿನಾಂಕ ನಿಗದಿ ಪಡಿಸುವಾಗ ಚುನಾವಣೆ ಆಯೋಗವೇನೂ ಯಾವುದೇ ಜ್ಯೋತಿಷಿಯನ್ನು ಕಂಡಿಲ್ಲವಾದರೂ ಅಭ್ಯರ್ಥಿಗಳು ಆ 10ರಿಂದ 17ರ ನಡುವಿನ ಅತ್ಯಂತ ಶುಭ ಮಹೂರ್ತ ಯಾವುದು ಎಂಬುದನ್ನು ತಿಳಿಯಲು ಜ್ಯೋತಿಷಿಗಳ ಎಡತಾಕುತ್ತಿದ್ದಾರೆ.
ಜ್ಯೋತಿಷಿಗಳು ಹೇಳುವಂತೆ ಏಪ್ರಿಲ್ 10ರಿಂದ 17ರವರೆಗೆ ಎಲ್ಲ ದಿನಗಳೂ ಶುಭವಲ್ಲ. ಅಂದರೆ ಅಭ್ಯರ್ಥಿಗಳಿಗೆ ಅವರವರ ಜಾತಕಕ್ಕೆ ತಕ್ಕಂತೆ ಒಂದು ಶುಭಮಹೂರ್ತವ ಅಂತ ಇರುತ್ತದೆ. ಅದನ್ನು ಲೆಕ್ಕ ಹಾಕಿ ಹೇಳುವುದಷ್ಟೇ ಜ್ಯೋತಿಷಿಗಳ ಕೆಲಸವಾಗಿದೆ.
ಇನ್ನು ಕೆಲ ಅಭ್ಯರ್ಥಿಗಳು ನಾಮಪತ್ರಿಕೆ ಸಲ್ಲಿಕೆ ಅಷ್ಟೇ ಅಲ್ಲ. ಮುಂದೆ, ಚುನಾವಣೆಯಲ್ಲಿ ಗೆಲ್ಲುವಂತಹ ಮಹೂರ್ತವನ್ನು ನಿಗದಿಪಡಿಸಿ ಎಂದು ಅಲವತ್ತುಕೊಳ್ಳುತ್ತಿದ್ದಾರೆ. ಆದರೆ ಒಂದಂತೂ ಸತ್ಯ. ನಾಮಪತ್ರಿಕೆ ಸಲ್ಲಿಕೆಗೆ ಕೊನೆಯ ದಿನವಾದ ಏಪ್ರಿಲ್ 17 ಯಾವುದೇ ಅಭ್ಯರ್ಥಿಗೇ ಆಗಲಿ ಪ್ರಶಸ್ತ್ಯವಾಗಿಲ್ಲ ಎಂದು ಬಹಳಷ್ಟು ಜ್ಯೋತಿಷಿಗಳು ಈಗಾಗಲೇ ಘಂಟಾಘೋಷಬಾಗಿ ಹೇಳಿದ್ದಾರೆ.
ಶನಿವಾರ ಏ. 13 ತೃತೀಯ ಅತ್ಯಂತ ಪ್ರಶಸ್ತ, ಆದರೆ:
ಏಪ್ರಿಲ್ 10ರಿಂದ 17ರವರೆಗೆ ಏಳೂ ದಿನಗಳು ಸೂರ್ಯನ ಆರೋಹಣ ಕಾಲವಾಗಿದೆ. ಶನಿವಾರ ಏಪ್ರಿಲ್ 13 ತೃತೀಯ ದಿನ ಅತ್ಯಂತ ಪ್ರಶಸ್ತವಾಗಿದೆ. ಅಂದಿನ ಕೃತಿಕಾ ನಕ್ಷತ್ರವೂ ಶುಭ ಕಾರ್ಯಕ್ಕೆ ಪೂರಕವಾಗಿದೆ. ಆದರೆ ಅದು ''ಶನಿ''ವಾರ ಎಂದು ಬಹಳಷ್ಟು ಅಭ್ಯರ್ಥಿಗಳು ಹಿಂದೇಟು ಹಾಕುತ್ತಿದ್ದಾರೆ.
ಅದು ಬಿಟ್ಟರೆ ಏಪ್ರಿಲ್ 15 ಸಹ ಅತ್ಯಂತ ಪ್ರಶಸ್ತವಾಗಿದೆ. ಹಾಗೆಯೇ, ಏಪ್ರಿಲ್ 12 ಶುಕ್ರವಾರ ಬಿದಿಗೆ ಸಹ ಓಕೆ. ಇನ್ನು, ಏಪ್ರಿಲ್ 15 ಪಂಚಮಿ. ಅದೂ ಒಳ್ಳೆಯ ದಿನವೇ. ಏಪ್ರಿಲ್ 11 ಯುಗಾದಿ ರಜೆ. (Pic Courtesy: www.astrogems.com)












Click it and Unblock the Notifications