ಏ.5ಕ್ಕೆ ಮೊದಲ ಪಟ್ಟಿ ಬಿಡುಗಡೆ : ಸಿಎಂ ಶೆಟ್ಟರ್

ಏ.5ರಂದು 140 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗುವುದು ಖಚಿತ ಎಂದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಏ.4ರಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಬೆಂಗಳೂರಿಗೆ ಆಗಮಿಸಲಿದ್ದಾರೆ. 5ರಂದು ಪಟ್ಟಿ ಅಂತಿಮಗೊಳಿಸಲಾಗುವುದು ಎಂದರು.
ರಹಸ್ಯ ಸಭೆ :ಸಚಿವರಾದ ಬಾಲಚಂದ್ರ ಜಾರಕಿಹೊಳಿ, ಬಸವರಾಜ ಬೊಮ್ಮಾಯಿ, ಸಂಸದ ಸುರೇಶ್ ಅಂಗಡಿ ಮುಂತಾದವರು ಸಿಎಂ ಶೆಟ್ಟರ್ ಜೊತೆ ಮಂಗಳವಾರ ರಹಸ್ಯ ಸಭೆ ನಡೆಸಿ, ಟಿಕೆಟ್ ಹಂಚಿಕೆಯ ಕುರಿತು ಅಂತಿಮ ಹಂತದ ಸಭೆ ನಡೆಸಿದರು.
ಏ.8ರಿಂದ ಬಹಿರಂಗ ಪ್ರಚಾರ :ಏ.8ರಂದು ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ ಬೆಂಗಳೂರಿನಲ್ಲಿ ಮುಕ್ತಾಯವಾಗಲಿದೆ. ಈ ಸಮಾವೇಶದಲ್ಲೇ ಬಹಿರಂಗ ಚುನಾವಣಾ ಪ್ರಚಾರ ಕಾರ್ಯ ಆರಂಭಿಸಲು ಪಕ್ಷ ಮುಂದಾಗಿದೆ. ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ ಮುಂತಾದ ಪ್ರಮುಖ ನಾಯಕರು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
ಜೇಟ್ಲಿ ರಣತಂತ್ರ : ಬಿಜೆಪಿಯ ಟ್ರಬಲ್ ಶೂಟರ್, ರಾಷ್ಟ್ರೀಯ ನಾಯಕ ಅರುಣ್ ಜೇಟ್ಲಿ ಅವರ ಹೆಗಲಿಗೆ ರಾಜ್ಯದ ಚುನಾವಣಾ ರಣತಂತ್ರ ರೂಪಿಸುವ ಜವಾಬ್ದಾರಿ ವಹಿಸಲಾಗಿದೆ. ಏ.8ರಂದು ರಾಜ್ಯಕ್ಕೆ ಆಗಮಿಸಲಿರುವ ಜೇಟ್ಲಿ, ನಾಲ್ಕು ದಿನಗಳ ಕಾಲ ಬೆಂಗಳೂರಿನಲ್ಲೇ ವಾಸ್ತವ್ಯ ಹೂಡಲಿದ್ದು, ಪಕ್ಷದ ನಾಯಕರೊಂದಿಗೆ ಚರ್ಚಿಸಿ ಚುನಾವಣಾ ರಣತಂತ್ರ ರೂಪಿಸಲಿದ್ದಾರೆ.
ನಾಳೆ ಕೋರ್ ಕಮಿಟಿ ಸಭೆ : ಬಿಜೆಪಿಯ ಕೋರ್ ಕಮಿಟಿ ಸಭೆ ನಾಳೆ ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ನಡೆಯಲಿದೆ. ಟಿಕೆಟ್ ಹಂಚಿಕೆ, ಪ್ರಚಾರ ತಂತ್ರ ಮುಂತಾದವುಗಳ ಕುರಿತು ನಾಳಿನ ಸಭೆಯಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಂಭವವಿದೆ.
ಒಟ್ಟಾರೆ ಆಡಳಿತಾರೂಢ ಬಿಜೆಪಿ ಮುಂದಿನ ಚುನಾವಣೆಯಲ್ಲಿಯೂ ಅಧಿಕಾರದ ಗದ್ದುಗೆ ಏರುವ ಉತ್ಸಾಹದಲ್ಲಿದೆ. ಭ್ರಷ್ಟಾಚಾರ, ಶಾಸಕರ ರಾಜೀನಾಮೆ, ಪಕ್ಷದ ಆಂತರಿಕ ಜಗಳಗಳಿಂದ ಹೊರಬಂದು ಚುನಾವಣೆಯಲ್ಲಿ ಗೆಲುವು ಸಾಧಿಸಲು ಬಿಜೆಪಿ ಎಂತ್ರ ರೂಪಿಸಲಿದೆ ಎಂದು ಕಾದು ನೋಡಬೇಕು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications