ಹಾಲಾಡಿ ಶೆಟ್ಟಿ ಬೆನ್ನ ಹಿಂದೆ ತೆನೆ ಹೊತ್ತ ಮಹಿಳೆ

ಕುಂದಾಪುರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಈ ಬಾರಿಯ ವಿಧಾನಸಭಾ ಚುನಾವಣೆ ಯಲ್ಲಿ ಬೆಂಬಲಿಸಲು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ನಿರ್ಧರಿಸಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ನೆನ್ನೆ ಇನ್ನೂ ಬಿಎಸ್ ಆರ್ ಕಾಂಗ್ರೆಸ್ ಪಕ್ಷದ ಜೊತೆ ಸಂಭಾವ್ಯ ಮೈತ್ರಿ ಮುರಿದುಬಿದ್ದ ಹಿನ್ನೆಲೆಯಲ್ಲಿ ಬೇರೆ ಯಾರೊಟ್ಟಿಗೂ ಜೆಡಿಎಸ್ ಕೈ ಜೊಡಿಸುವುದು ಕಷ್ಟ ಎನ್ನಲಾಗಿತ್ತು.
ಈಗಾಗಲೇ ತಾನು ಮೂರು ಬಾರಿ ಪ್ರತಿನಿಧಿಸಿದ ಬಿಜೆಪಿ ಪಕ್ಷವನ್ನು ತೊರೆದಿರುವ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಈ ಬಾರಿ ಪಕ್ಷೇತರರಾಗಿ ಕುಂದಾಪುರದಿಂದ ಸ್ಪರ್ಧಿಸುವ ನಿರ್ಧಾರವನ್ನು ಪ್ರಕಟಿಸಿದ್ದು, ಪಕ್ಷದ ವತಿಯಿಂದ ಯಾವುದೇ ಸ್ಪರ್ಧಿಯನ್ನು ನಿಲ್ಲಿಸದೇ ಹಾಲಾಡಿಯವರನ್ನು ಬೆಂಬಲಿಸುವುದಾಗಿ ಕುಮಾರಸ್ವಾಮಿ ಹಾಗೂ ಪಕ್ಷದ ಜಿಲ್ಲಾ ನಾಯಕರು ಘೋಷಿಸಿದ್ದಾರೆ. ಪಕ್ಷದ ಈ ನಿರ್ಧಾರವನ್ನು ಕುಂದಾಪುರದ ಹಿರಿಯ ಜೆಡಿಎಸ್ ನಾಯಕರು ಸ್ವಾಗತಿಸಿದ್ದು, ಕ್ಷೇತ್ರದ ಎಲ್ಲಾ ಜೆಡಿಎಸ್ ಕಾರ್ಯಕರ್ತರು ಹಾಲಾಡಿಯವರ ಗೆಲುವಿಗಾಗಿ ಶ್ರಮಿಸುವುದಾಗಿ ತಿಳಿಸಿದ್ದಾರೆ.
ಜೆಡಿಎಸ್‌ನ ತಾಲೂಕು ಅಧ್ಯಕ್ಷ ಮಂಜಯ್ಯ ಶೆಟ್ಟಿ, ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಅಡಿಗ, ಜಗದೀಶ ಯಡಿಯಾಳ, ಮೋಹನಚಂದ್ರ ಕಾಳಾವರ್ಕರ್ ಮುಂತಾದವರು ಪಕ್ಷದ ನಿಲುವನ್ನು ಹೇಳಿಕೆಯಲ್ಲಿ ಸ್ವಾಗತಿಸಿದ್ದಾರೆ.
ಹಾಲಾಡಿ ಅವರ ಗೆಲುವು ಖಚಿತ ಎಂಬುದು ಜೆಡಿಎಸ್ ಲೆಕ್ಕಾಚಾರ, ಮುಂದೊಂದು ದಿನ ಪಕ್ಷ ಅಧಿಕಾರ ಹಿಡಿಯಲು ಶಾಸಕರ ಕೊರತೆ ಎದುರಿಸಿದರೆ ಹಾಲಾಡಿಯಂಥವರು ಖಂಡಿತ ಸಹಾಯಕ್ಕೆ ಬರುತ್ತಾರೆ ಎಂಬುದು ಕುಮಾರಸ್ವಾಮಿ ಲೆಕ್ಕಾಚಾರ. ಅಲ್ಲದೆ, ಈ ಬಾರಿ ಕರಾವಳಿ ಭಾಗದಲ್ಲೂ ಜೆಡಿಎಸ್ ಸ್ವಲ್ಪಮಟ್ಟಿಗೆ ಅಲೆ ಎಬ್ಬಿಸಿದೆ.
2008ರಲ್ಲಿ ಬಳ್ಳಾರಿ ಗ್ರಾಮಾಂತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಬಿ.ಶ್ರೀರಾಮುಲು ಅವರಿಗೂ ಇದೇ ರೀತಿ ಜೆಡಿಎಸ್ ನೆರವು ನೀಡಿತ್ತು.ಈಗ ಬಿಜೆಪಿಯ ರೆಬೆಲ್ ಗಳನ್ನು ಒಟ್ಟು ಹಾಕುವುದರಲ್ಲಿ ಜೆಡಿಎಸ್ ಮಗ್ನವಾಗಿದೆ ಎಂಬುದರಲ್ಲಿ ಯಾವ ಸಂಶಯವೂ ಇಲ್ಲ.
1999ರಲ್ಲಿ ರಾಜಕೀಯ ಜೀವನ ಆರಂಭಿಸಿದ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಕಾಂಗ್ರೆಸ್ ಪ್ರಭಾವಿ ನಾಯಕ ಪ್ರತಾಪಚಂದ್ರ ಶೆಟ್ಟಿ ಅವರನ್ನು ಸೋಲಿಸಿದರು. 2004ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ಶೆಟ್ಟಿ ಅವರನ್ನು ಹಾಗೂ 2008ರನ್ನು ಕೆ ಜಯಪ್ರಕಾಶ್ ಹೆಗ್ಡೆ ಅವರನ್ನು 25,083 ಅಂತರದಿಂದ ಸೋಲಿಸಿ ಹ್ಯಾಟ್ರೆಕ್ ಸಾಧಿಸಿದರು. ಹಾಲಾಡಿ ಅವರು 1,24,716 ಮತ ಗಳಿಸಿದ್ದರು.
ಹಾಲಾಡಿ ಅವರ ಶಕ್ತಿ, ಜನ ಮನ್ನಣೆ ಗಮಸಿರುವ ಪ್ರಮುಖ ಪಕ್ಷಗಳು ಸೂಕ್ತ ಅಭ್ಯರ್ಥಿ ನಿಲ್ಲಿಸಲು ಆಗದೆ ಪರದಾಡುತ್ತಿದೆ. ಕ್ಷೇತ್ರದಲ್ಲಿ ಹಾಲಾಡಿ ಅಲೆ ತೇಲುತ್ತಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ತೆರೆಮರೆ ಮೈತ್ರಿ ಮಾಡಿಕೊಂಡು ಒಟ್ಟಿಗೆ ಒಬ್ಬ ಅಭ್ಯರ್ಥಿಯನ್ನು ನಿಲ್ಲಿಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications