ಮೇ 3ರೊಳಗೆ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ

ಮಂಗಳವಾರದಿಂದ ಮೌಲ್ಯಮಾಪನ ಆರಂಭವಾಗಿದ್ದು, ಮೇ 3ಕ್ಕೆ ಮೊದಲೇ ಫಲಿತಾಂಶ ಹೊರಬರುವ ಸಂಭವನೀಯತೆ ಇದೆ ಎಂದು ಕರ್ನಾಟಕ ಪಿಯು ಮಂಡಳಿಯ ಅಧಿಕಾರಿಗಳು ಒನ್ಇಂಡಿಯಾಕ್ಕೆ ತಿಳಿಸಿದರು. ಪರೀಕ್ಷೆ ಫಲಿತಾಂಶ ಎಂದಿನಂತೆ ಒನ್ಇಂಡಿಯಾ ವೆಬ್ ಸೈಟುಗಳಲ್ಲಿ ಪ್ರಕಟವಾಗಲಿದೆ.
ಒಟ್ಟು 18 ಸಾವಿರ ಶಿಕ್ಷಕರು ಮೌಲ್ಯಮಾಪನಕ್ಕೆ ಹಾಜರಾಗಿದ್ದು, 17 ಕೇಂದ್ರಗಳಲ್ಲಿ ಮೌಲ್ಯಮಾಪನ ನಡೆಯುತ್ತಿದೆ. ಕಳೆದ ವರ್ಷ ಮೌಲ್ಯಮಾಪನವನ್ನು ಉಪನ್ಯಾಸಕರು ಬಹಿಷ್ಕರಿಸಿದ್ದರಿಂದ ಫಲಿತಾಂಶ ಮಾತ್ರವಲ್ಲ ಸಿಇಟಿ ಪರೀಕ್ಷೆಗಳು ಕೂಡ ಮುಂದೂಡಲ್ಪಟ್ಟಿದ್ದವು ಮತ್ತು ವಿದ್ಯಾರ್ಥಿಗಳನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದ್ದವು. ಮೌಲ್ಯಮಾಪಕರು ಮುಂದಿಟ್ಟಿದ್ದ ಬೇಡಿಕೆಗಳು ಇನ್ನೂ ಹಾಗೇ ಇವೆ.
ಮೌಲ್ಯಮಾಪನದ ಬಗ್ಗೆ ವಾದ ವಿವಾದ ಬೇಡಿಕೆಗಳೇನೇ ಇರಲಿ, ಈ ವರ್ಷ ಗಣಿತ ಪರೀಕ್ಷೆ ತುಂಬಾ ಕಠಿಣವಾಗಿದ್ದರಿಂದ ಮೌಲ್ಯಮಾಪಕರು ಅಂಕಗಳನ್ನು ಉದಾರವಾಗಿ ನೀಡಬೇಕೆಂದು ಓದುಗರನೇಕರು ಹೇಳುತ್ತಿದ್ದಾರೆ.
ಈ ವರ್ಷ ಮಾರ್ಚ್ 13ರಿಂದ ಪರೀಕ್ಷೆಗಳು ಪ್ರಾರಂಭವಾಗಿ ಮಾರ್ಚ್ 28ರಂದು ಮುಕ್ತಾಯಗೊಂಡಿದ್ದವು. ಈ ಬಾರಿ ಒಟ್ಟು 6.13 ಲಕ್ಷ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಪರೀಕ್ಷೆಗೆ ಕುಳಿತಿದ್ದರು. ರಾಜ್ಯದ ರಾಜಕಾರಣಿಗಳ ರಾಜಕೀಯ ಭವಿಷ್ಯ ಪ್ರಕಟವಾಗುವ (ಮೇ 5 ಚುನಾವಣೆ, ಮೇ 8 ಫಲಿತಾಂಶ) ಮುನ್ನವೇ ರಾಜ್ಯದ ವಿದ್ಯಾರ್ಥಿ ವಿದ್ಯಾರ್ಥಿನಿಯರ ಭವಿಷ್ಯ ನಿರ್ಧಾರವಾಗಲಿದೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications