ಕಾಂಗ್ರೆಸ್ ನಾಯಕರಿಗೆ ಬಂಡಾಯದ ಬಿಸಿ

ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿರುವ ಸಿ.ಎಸ್.ಪುಟ್ಟೇಗೌಡ, ಚಿತ್ರ ನಿರ್ಮಾಪಕರಾದ ಕೆ.ಮಂಜು ಮತ್ತು ಮುನಿರತ್ನ, ಮಾಜಿ ಸಂಸದೆ ತೇಜಸ್ವಿನಿ ಅವರಿಗೆ ಟಿಕೆಟ್ ನೀಡಬಾರದು ಎಂದು ಬೆಂಗಳೂರಿನ ಕೆಪಿಸಿಸಿ ಕಚೇರಿ ಮತ್ತು ದೆಹಲಿಯ ಸೋನಿಯಾಗಾಂಧಿ ನಿವಾಸದೆದುರು ಸೋಮವಾರ ಪ್ರತಿಭಟನೆಗಳು ನಡೆದವು.
ಶ್ರವಣಬೆಳಗೊಳದಿಂದ ಆಗಮಿಸಿದ ನೂರಾರು ಕಾರ್ಯಕರ್ತರು ಕೆಪಿಸಿಸಿ ಕಚೇರಿ ಮುಂದೆ ಸಿ.ಎಸ್.ಪುಟ್ಟೇಗೌಡ ಅವರಿಗೆ ಟಿಕೆಟ್ ನೀಡದೆ ಸ್ಥಳೀಯ ಕಾರ್ಯಕರ್ತರಿಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಿದರು. ಕಾರ್ಯಕರ್ನೊಬ್ಬ ಆತ್ಮಾಹುತಿಗೆ ಪ್ರಯತ್ನಿಸಿದ ತಕ್ಷಣ ಪೊಲೀಸರು ಆತನನ್ನು ತಡೆದರು.
ರಾಜರಾಜೇಶ್ವರಿ ಕ್ಷೇತ್ರದಿಂದ ಚಿತ್ರ ನಿರ್ಮಾಪಕ ಮುನಿರತ್ನ ಅವರಿಗೆ ಟಿಕೆಟ್ ನೀಡಬಾರದು ಎಂದು ಒತ್ತಾಯಿಸಿ ನೂರಾರು ಕಾರ್ಯಕರ್ತರು ಕೆಪಿಸಿಸಿ ಕಚೇರಿ ಮುಂದೆ ಜಮಾಯಿಸಿ ನಾಯಕರ ವಿರುದ್ಧ ಘೋಷಣೆ ಕೂಗಿದರು. ಕಾಂಗ್ರೆಸ್ ಮುಖಂಡ ಬಿ.ಎಲ್.ಶಂಕರ್ ಪ್ರತಿಭಟನಾಕಾರರ ದೂರನ್ನು ಪಡೆದು ಅವರನ್ನು ಕಳುಹಿಸಿಕೊಟ್ಟರು.
ದೆಹಲಿಯಲ್ಲೂ ಬಂಡಾಯ : ಗೊಟ್ಟಿಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಕುಮಾರ್ ನೇತೃತ್ವದಲ್ಲಿ ಕಾರ್ಯಕರ್ತರು ಮಾಜಿ ಸಂಸದೆ ತೇಜಸ್ವಿನಿ ಶ್ರೀರಮೇಶ್ ಅವರಿಗೆ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಟಿಕೆಟ್ ನೀಡದಂತೆ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ನಿವಾಸದ ಮುಂದೆ ಪ್ರತಿಭಟನೆ ನಡೆಸಿದರು.
ದಕ್ಷಿಣ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿರುವ ತೇಜಸ್ವಿನಿ ಅವರಿಗೆ ಟಿಕೆಟ್ ದೊರೆಯುವುದು ಬಹುತೇಕ ಖಚಿತವಾಗಿದೆ. ಬೆಂಗಳೂರಿಗೆ ಆಗಮಿಸಿದ್ದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಮದುಸೂಧನ್ ಮಿಸ್ತ್ರೀ ಅವರಿಗೂ ತೇಜಸ್ವಿನಿ ಅವರಿಗೆ ಟಿಕೆಟ್ ನೀಡದಂತೆ ಕಾರ್ಯಕರ್ತರು ಮನವಿ ಮಾಡಿದ್ದರು.
ತೇಜಸ್ವಿನಿ ಕಾರ್ಯಕರ್ತರನ್ನು ಕಡೆಗಣಿಸುತ್ತಾರೆ. ಅಲ್ಲದೇ ಅವರು ಸ್ಥಳೀಯರಲ್ಲ. ಸ್ಥಳೀಯ ಬಿಬಿಎಂಪಿ ಸದಸ್ಯರಿಗೆ ಟಿಕೆಟ್ ನೀಡಿ ಎಂದು ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಟಿಕೆಟ್ ನೀಡದಂತೆ ಸೋನಿಯಾ ನಿವಾಸದ ಮುಂದೆ ಪ್ರತಿಭಟನೆ ನಡೆಸಿರುವುದು ಇದೇ ಮೊದಲು ಎಂದು ಹೇಳಲಾಗುತ್ತಿದೆ.
ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ತುಮಕೂರು ಪ್ರವಾಸದಲ್ಲಿದ್ದರು. ವಿಪಕ್ಷ ನಾಯಕ ಸಿದ್ದರಾಮಯ್ಯ ಅನಾರೋಗ್ಯದ ಕಾರಣ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು. ಅದ್ದರಿಂದ ಬೆಂಗಳೂರಿನಲ್ಲಿ ಕಾರ್ಯಕರ್ತರ ಒತ್ತಾಯಗಳಿಗೆ ಯಾವುದೇ ಭರವಸೆ ದೊರಕಿಲ್ಲ. ಆದ್ದರಿಂದ ಇಂದು ಪ್ರತಿಭಟನೆ ನಡೆಯುವ ಸಾಧ್ಯತೆ ಇದೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ











Click it and Unblock the Notifications