ಸಂಸದೀಯ ಮಂಡಳಿಗೆ ಮೋದಿ ನೇಮಕ

ಬಿಜೆಪಿ ಸಂಸದೀಯ ಮಂಡಳಿ ಪುನಾರಚನೆ ಕುರಿತು ಭಾನುವಾರ ಬೆಳಗ್ಗೆ ಪಕ್ಷದ ಅಧ್ಯಕ್ಷ ರಾಜನಾಥ್ ಸಿಂಗ್ ಅಧಿಕೃತ ಆದೇಶ ಹೊರಡಿಸಿದ್ದಾರೆ. ಶನಿವಾರ ಬಿಜೆಪಿ ಸಂದದೀಯ ಮಂಡಳಿ ಅಭ್ಯರ್ಥಿಗಳ ಪಟ್ಟಿ ಅಂತಿವಾಗಿತ್ತು, ನರೇಂದ್ರ ಮೋದಿ ಮತ್ತು ಗುಜರಾತ್ ನ ಮಾಜಿ ಗೃಹ ಸಚಿವ ಅಮಿತ್ ಶಾ ಮತ್ತು ಕರ್ನಾಟಕ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಪುನಾರಚನೆಯಾದ ಸಂಸದೀಯ ಮಂಡಳಿಯಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆರು ವರ್ಷಗಳ ಬಳಿಕ ಮೋದಿ ಸಂಸದೀಯ ಮಂಡಳಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಮೋದಿ ಅವರನ್ನು ಸಂಸದೀಯ ಮಂಡಳಿಗೆ ಸೇರಿಸಿಕೊಳ್ಳಲು ವರಿಷ್ಠರು ಹಸಿರು ನಿಶಾನೆ ತೋರಿಸಿದ್ದರು. ಸಂಸದೀಯ ಮಂಡಳಿ ಸ್ಥಾನ ಪಡೆಯುವ ಮೂಲಕ ಪ್ರಧಾನಿ ಪಟ್ಟಕ್ಕೆ ಮೋದಿ ಮತ್ತಷ್ಟು ಹತ್ತಿರವಾಗಿದ್ದಾರೆ. ಬಿಜೆಪಿಯ ಫೈರ್ ಬ್ರಾಂಡ್ ನಾಯಕ ವರುಣ್ ಗಾಂಧಿ ಮತ್ತು ಅಮಿತ್ ಶಾ ಸಹ ಸಂಸದೀಯ ಮಂಡಳಿಯ ಪ್ರಧಾನ ಕಾರ್ಯದರ್ಶಿಗಳಾಗಿ ಸ್ಥಾನ ಪಡೆದಿದ್ದಾರೆ. ಬಿಜೆಪಿ ಪ್ರಧಾನ ಕಾರ್ಯರ್ಶಿಯಾಗಿದ್ದ ಸಂಸದ ಅನಂತ್ ಕುಮಾರ್ ಅವರನ್ನು ಮುಂದುವರೆಸಲಾಗಿದೆ.
2014ರ ಲೋಕಸಭಾ ಚುನಾವಣೆ ದೃಷ್ಠಿಯಲ್ಲಿಟ್ಟುಕೊಂಡು ಸಂಸದೀಯ ಮಂಡಳಿ ಪುನಾರಚನೆ ಮಾಡಲು ಚಿಂತನೆ ನಡೆಸಲಾಗಿತ್ತು. ಇತ್ತೀಚೆಗೆ ನಡೆದ ಪಕ್ಷದ ಚಿಂತನಾ ಶಿಬಿರದಲ್ಲಿ ಪಕ್ಷದ ಅಧ್ಯಕ್ಷ ರಾಜನಾಥ್ ಸಿಂಗ್ ಅವರಿಗೆ ಈ ಜವಾಬ್ದಾರಿ ವಹಿಸಿ, ಪ್ರಧಾನ ಕಾರ್ಯದರ್ಶಿ ಅನಂತ ಕುಮಾರ್ ನಿರ್ಣಯ ಮಂಡಿಸಿದ್ದರು.
ಸಂಸದೀಯ ಮಂಡಳಿಯ ಪುನಾರಚನೆ ಕುರಿತಂತೆ ಪಕ್ಷದ ಹಿರಿಯ ನಾಯಕ ಎಲ್.ಕೆ.ಅಡ್ವಾಣಿಯವರೊಡನೆ ಮಾತುಕತೆ ನಡೆಸಿದ ನಂತರ ರಾಜನಾಥ್ ಸಿಂಗ್ ಮಂಡಳಿಗೆ ಹೊಸ ಸದಸ್ಯರನ್ನು ನೇಮಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದರು.
ಪ್ರಸ್ತುತ ಸಂಸದೀಯ ಮಂಡಳಿಯಲ್ಲಿ 11 ಸದಸ್ಯರಿದ್ದು, ಮೋದಿ ಮತ್ತು ಅಮಿತ್ ಶಾ ಸೇರ್ಪಡೆಗಾಗಿ ಇಬ್ಬರು ಸದಸ್ಯರು ಪದತ್ಯಾಗ ಮಾಡಿದ್ದಾರೆ. ಭಾನುವಾರ ಬೆಳಗ್ಗೆ ಸಂಸದೀಯ ಮಂಡಳಿ ಈ ಬಗ್ಗೆ ಅಧಿಕೃತ ಆದೇಶ ಹೊರಡಿಸಿದ್ದು, ಸಂದದೀಯ ಮಂಡಳಿಯಿಂದ ಯಶವಂತ್ ಸಿನ್ಹಾ ಮತ್ತು ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಕೈ ಬಿಡಲಾಗಿದೆ.
ಸಂಸದೀಯ ಮಂಡಳಿ ನಂತರ 200 ಸದಸ್ಯರ ರಾಷ್ಟ್ರೀಯ ಕಾರ್ಯಕಾರಣಿಯನ್ನು ಪುನಾರಚಿಸಲು ರಾಜನಾಥ್ ಸಿಂಗ್ ಆಸಕ್ತಿ ತೋರಿದ್ದಾರೆ ಎಂದು ತಿಳಿದುಬಂದಿದೆ. ಮುಂದಿನ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟಿಕೊಂಡು ಬಿಜೆಪಿ ಪಕ್ಷದ ಆಂತರಿಕವಲಯದಲ್ಲಿ ಹಲವಾರು ಬದಲಾವಣೆಗಳನ್ನು ಮಾಡುತ್ತಿದೆ.
ಗೌಡರು ದೆಹಲಿಗೆ : ನಿರೀಕ್ಷೆಯಂತೆ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ರಾಷ್ಟ್ರೀಯ ರಾಜಕಾರಣಕ್ಕೆ ತೆರಳಿದ್ದಾರೆ. ರಾಷ್ಟ್ರೀಯ ಉಪಾಧ್ಯಕ್ಷರಾಗಿ ಸದಾನಂದ ಗೌಡರು ಆಯ್ಕೆಗೊಂಡಿದ್ದಾರೆ. ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ಅನಂತ ಕುಮಾರ್ ಮುಂದುವರೆದಿದ್ದಾರೆ. ಇದರಿಂದ ಕರ್ನಾಟಕ ಇಬ್ಬರು ಸಂಸದೀಯ ಮಂಡಳಿಯಲ್ಲಿ ಸ್ಥಾನ ಪಡೆದಿದ್ದಾರೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications