ಯಡಿಯೂರಪ್ಪ ಕಿವಿಕಚ್ಚಿದ ಶೋಭಾ: ರೇಣುಕಾ ಅತಂತ್ರ
ಬೆಂಗಳೂರು, ಮಾರ್ಚ್30: ಅತ್ತ ರಣೋತ್ಸಾಹದಲ್ಲಿ ಬಿಜೆಪಿಗೆ ಗುಡ್ ಬೈ ಹೇಳಿದ್ದ ಮಾಜಿ ಅಬಕಾರಿ ಸಚಿವ ಎಂಪಿ ರೇಣುಕಾಚಾರ್ಯ ಅವರ ಪರಿಸ್ಥಿತಿ ಇಂದೇನಾಗಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಇಂದು ಬೆಂಗಳೂರಿಗೆ ಬಂದು ತಮ್ಮ ರಾಜಕೀಯ ಗುರು, ಕೆಜೆಪಿ ನಾಯಕ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿಯಾಗಬೇಕಿತ್ತು. ಆದರೆ ನಿನ್ನೆಯಿಂದಲೇ ರೇಣುಕಾ ಹೆಸರು ಎತ್ತಿದ್ದರೆ ಮುಳ್ಳು ತುಳಿದವರಂತೆ ಮುಖ ಮಾಡುತ್ತಿದ್ದ ಬಿಎಸ್‌ವೈ ಇಂದು ರೇಣುಕಾಗೆ ದರುಶನ ಭಾಗ್ಯ ನೀಡಿದಂತಿಲ್ಲ.
ಆದರೆ ಬಿಜೆಪಿಯಿಂದ ಈಗಾಗಲೇ ಉಚ್ಚಾಟನೆಗೊಂಡಿರುವ ಮಾಜಿ ಅಬಕಾರಿ ಸಚಿವ ರೇಣುಕಾಚಾರ್ಯ ಅವರು ನಿನ್ನೆ ಶುಕ್ರವಾರ ಸ್ವಕ್ಷೇತ್ರ ಹೊನ್ನಾಳಿಯಲ್ಲಿ ಕೆಜೆಪಿ ಸೇರುವ ನಿರ್ಧಾರವನ್ನು ಬಹಿರಂಗವಾಗಿ ಘೋಷಿಸಿದ್ದರು. [ಕೆಜೆಪಿಗೆ ರೇಣುಕಾಚಾರ್ಯ ಅಧಿಕೃತ ಸೇರ್ಪಡೆ]

ಶೋಭಾ ಕರಂದ್ಲಾಜೆ ಎಂಟ್ರಿ: ಈ ಮಧ್ಯೆ ಏನಾಗಿದೆ ಅಂದರೆ ರೇಣುಕಾಚಾರ್ಯ ಕೆಜೆಪಿ ಸೇರುವ ವಿಷಯದಲ್ಲಿ ಕೆಜೆಪಿ ನಾಯಕಿ ಶೋಭಾ ಕರಂದ್ಲಾಜೆ ಅವರು ಎಂಟ್ರಿ ಕೊಟ್ಟಿದ್ದಾರೆ. ಇದು ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಕುತೂಹಲ ಮತ್ತು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಈ ಮಧ್ಯೆ, ಪಿತೃ ಸಮಾನರಾದ ಯಡಿಯೂರಪ್ಪನವರು ನನ್ನನ್ನು ಕೆಜೆಪಿಗೆ ಸೇರಿಸಿಕೊಳ್ಳುವುದಕ್ಕೆ ಒಪ್ಪಿದ್ದಾರೆ. ಜತೆಗೆ ಹೊನ್ನಾಳಿಯಿಂದಲೇ ಸ್ಪರ್ಧಿಸುವಂತೆಯೂ ಸೂಚಿಸಿದ್ದಾರೆ. ಶೀಘ್ರವೇ ಯಡಿಯೂರಪ್ಪನವರನ್ನು ಭೇಟಿ ಮಾಡಿ ಕೆಜೆಪಿ ಸೇರ್ಪಡೆಗೆ ದಿನಾಂಕ ನಿಗದಿಪಡಿಸುವುದಾಗಿ ರೇಣುಕಾಚಾರ್ಯ ಹೇಳಿದ್ದಾರೆ.
ಶೋಭಾ ನಿಮ್ಮ ಆಗಮನಕ್ಕೆ ಕೊಕ್ಕೆ ಹಾಕಿದ್ದಾರಂತೆ ಎಂದು ಕೇಳಿದ್ದಕ್ಕೆ ಪ್ರತಿಕ್ರಿಯಿಸಿದ ರೇಣುಕಾಚಾರ್ಯ ಅವರು ಯಡಿಯೂರಪ್ಪನವರು ನಮ್ಮ ನಾಯಕರು. ಅವರು ಕೆಜೆಪಿಗೆ ಸೇರಿಕೋ ಎಂದು ಸೂಚಿಸಿದ್ದಾರೆ. ಇನ್ನು ಶೋಭಾ ಬಗ್ಗೆ ನಾನೇನೂ ಹೇಳುವುದಿಲ್ಲ ಎಂದಿದ್ದಾರೆ.
ಬಿಜೆಪಿಯಲ್ಲಿರುವ ಕೆಲವು ದುಷ್ಟ ಶಕ್ತಿಗಳು ನಾನು ಬಿಜೆಪಿಯಲ್ಲಿ ಉಳಿಯುವುದನ್ನು ಸಹಿಸುತ್ತಿರಲಿಲ್ಲ. ನೂತನ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿಗೆ ನನ್ನ ಬಗ್ಗೆ ದೂರು ನೀಡಿ, ನನ್ನನ್ನು ಉಚ್ಛಾಟಿಸುವಂತೆ ನೋಡಿಕೊಂಡಿದ್ದಾರೆ. ನನಗೆ ನೋಟಿಸ್ ಅನ್ನೂ ನೀಡದೆ ಜೋಶಿ ಉಚ್ಛಾಟಿಸಿದ್ದಾರೆ ಎಂದು ಮಾಜಿ ಸಚಿವ ರೇಣುಕಾಚಾರ್ಯ ತಿಳಿಸಿದ್ದಾರೆ
ರೇಣುಕಾಚಾರ್ಯನ್ನ ಸೇರಿಸ್ಕೋಬೇಡಿ ಎಂದ ಶೋಭಾ: ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಅವರ ಮಂತ್ರಿಮಂಡಲದಿಂದ ತಮ್ಮನ್ನು ತೆಗೆದುಹಾಕಿಸಲು ರೇಣುಕಾಚಾರ್ಯ ಮಸಲತ್ತು ನಡೆಸಿದ್ದರು ಎಂದು ಶೋಭಾ ಅಂದಿನಿಂದಲೂ ರೇಣುಕಾ ವಿರುದ್ಧ ಮುನಿಸಿಕೊಂಡಿದ್ದಾರೆ ಎನ್ನಲಾಗಿದೆ.
'ಜನಾರ್ದನ ರೆಡ್ಡಿ ಜತೆ ಸೇರಿ ಅವಯ್ಯ ನನ್ನನ್ನು ಸಂಪುಟದಿಂದ ಹೊರಗಾಗುವಂತೆ ಮಾಡಿದ್ದ. ಹಾಗಾಗಿ ರೇಣೂಕಾನನ್ನು ಪಕ್ಷದೊಳಕ್ಕೆ ಬಿಟ್ಟುಕೊಳ್ಳಬೇಡಿ' ಎಂದು ಹಳೆಯದ್ದನ್ನೆಲ್ಲಾ ಪ್ರಸ್ತಾಪಿಸಿ, ಶೋಭಾ ಅವರು ಶುಕ್ರವಾರ ಸಾಯಂಕಾಲ ಯಡಿಯೂರಪ್ಪನವರ ಕಿವಿ ಕಚ್ಚಿದ್ದಾರೆ ಎಂದು ಮೂಲಗಳು ತಿಳಿಸಿವೆ.












Click it and Unblock the Notifications