ತೀರ್ಥಹಳ್ಳಿ ಕಾಲೇಜಿನಲ್ಲಿ ಲವರ್ಸ್ ದುರಂತ

ಪದವಿ ಕಾಲೇಜಿನ ವಿದ್ಯಾರ್ಥಿನಿ ಕೋಣಂದೂರು ನಿವಾಸಿ 20 ವರ್ಷದ ಸೋನಂಳನ್ನು ಅಭಿಷೇಕ್ ಎಂಬಾತ ಇರಿದು ಕೊಂದಿದ್ದಾನೆ. ನಂತರ ತಾನೂ ಕೂಡ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಹುಂಚದಕಟ್ಟೆಯ ನಿವಾಸಿ ಅಭಿಷೇಕ್ ಬಿಕಾಂ ವಿದ್ಯಾರ್ಥಿನಿ ಸೋನಂಳನ್ನು ವಿಪರೀತವಾಗಿ ಪ್ರೀತಿಸುತ್ತಿದ್ದ. ತನ್ನ ಪ್ರೀತಿಯನ್ನು ಸೋನಂಗೆ ನಿವೇದನೆ ಕೂಡಾ ಮಾಡಿದ್ದ. ಆದರೆ, ಅಭಿಷೇಕ್ ಹುಚ್ಚು ಪ್ರೀತಿಯನ್ನು ಸೋನಂ ನಿರಾಕರಿಸಿದ್ದಳು. ಇದರಿಂದ ಅಭಿಷೇಕ್ ಹತಾಶನಾಗಿದ್ದ. ತನಗೆ ಸಿಗದವಳು ಬೇರೆ ಯಾರಿಗೂ ಸಿಗಬಾರದು ಎಂದು ಹೇಳಿ ಆಕೆಯನ್ನು ಮುಗಿಸಲು ಮುಂದಾದ.
ಕಾಲೇಜಿನಿಂದ ಸೋನಂ ಮನೆಗೆ ತೆರಳುತ್ತಿದ್ದಾಗ ದಿಢೀರ್ ದಾಳಿ ನಡೆಸಿದ ಅಭಿಷೇಕ್, ಆಕೆಗೆ ಚಾಕುವಿನಿಂದ ಮನ ಬಂದಂತೆ ಚುಚ್ಚಿದ್ದಾನೆ. ಸೋನಂ ವಿಲವಿಲನೆ ಒದ್ದಾಡುವುದನ್ನು ಕಂಡು ಅಲ್ಲಿಂದ ಪರಾರಿಯಾಗಿದ್ದಾನೆ. ಜೀವನ್ಮರಣದ ಹೋರಾಟ ನಡೆಸಿದ್ದ ಸೋನಂಳನ್ನು ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ, ಮಾರ್ಗಮಧ್ಯೆ ಉಡುಪಿಯ ಹೆಬ್ರಿ ಬಳಿ ಸೋನಂ ಸಾವನ್ನಪ್ಪಿದ್ದಾಳೆ ಎಂದು ತಿಳಿದು ಬಂದಿದೆ.
ಪ್ರಿಯತಮೆಯನ್ನು ಕೊಂದ ಅಭಿಷೇಕ್ ವಿಷ ಸೇವನೆ ಮಾಡಿ ಚಾಕುವಿನಿಂದ ಚುಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಗಂಭೀರ ಸ್ಥಿತಿಯಲ್ಲಿರುವ ಅಭಿಷೇಕ್ನನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ತೀರ್ಥಹಳ್ಳಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಶಿವಮೊಗ್ಗದ ರಂಗನಾಥ್ ಎಂಬುವರ ಪುತ್ರಿ ಸ್ವಾತಿ ಎಂಬ ಇಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. 21 ವರ್ಷ ವಯಸ್ಸಿನ ಸ್ವಾತಿ, ಮಂಗಳೂರಿನ ಪಿಎ ಕಾಲೇಜ್ ಅಫ್ ಇಂಜಿನಿಯರಿಂಗ್ ನಲ್ಲಿ ಅಂತಿಮ ವರ್ಷದ ಎಲೆಕ್ಟ್ರಾನಿಕ್ಸ್ ಹಾಗೂ ಕಮ್ಯೂನಿಕೇಷನ್ ವಿಭಾಗದ ವಿದ್ಯಾರ್ಥಿನಿಯಾಗಿದ್ದಳು. ಗುರುವಾರ ಸಂಜೆ ತನ್ನ ಹಾಸ್ಟೆಲ್ ಕೋಣೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾಳೆ.
ಇತ್ತೀಚಿನ ಪರೀಕ್ಷೆಗಳಲ್ಲಿ ಕಳಪೆ ಮಾರ್ಕ್ಸ್ ತೆಗೆದಿದ್ದಕ್ಕೆ ಸ್ವಾತಿ ಮನನೊಂದಿದ್ದಳು. ಡೆತ್ ನೋಟ್ ನಲ್ಲಿ ಕೂಡಾ ಈ ಬಗ್ಗೆ ವಿಷಾದ ವ್ಯಕ್ತಪಡಿಸಿ ಗೋಳು ತೋಡಿಕೊಂಡಿದ್ದಾಳೆ. ಸ್ವಾತಿಗೆ 8 ತಿಂಗಳ ಹಿಂದೆ ವೆಂಕಟೇಶ್ ಎಂಬುವರ ಜೊತೆ ಮದುವೆಯಾಗಿತ್ತು ಎನ್ನಲಾಗಿದೆ. ಕೋಣಾಜೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.












Click it and Unblock the Notifications