ಕೈ ಹಿಡಿಯಲು ಆನಂದ್ ಸಿಂಗ್ ಸಿದ್ಧತೆ

ಬಳ್ಳಾರಿಯಲ್ಲಿ ಬುಧವಾರ ಸಂಜೆ ಮಾತನಾಡಿದ ಆನಂದ್ ಸಿಂಗ್, ಬಿಜೆಪಿ ತೊರೆಯುವುದು ಖಚಿತ. ಕಾಂಗ್ರೆಸ್ ನಿಂದ ವಿಜಯನಗರ ಕ್ಷೇತ್ರದ ಅಭ್ಯರ್ಥಿಯಾಗಿಯೇ ಸ್ಪರ್ಥಿಸುತ್ತೇನೆ ಎಂದರು. ಕಾಂಗ್ರೆಸ್ ಟಿಕೆಟ್ ದೊರೆಯದಿದ್ದರೆ ಪಕ್ಷೇತರನಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.
ಜಗದೀಶ್ ಶೆಟ್ಟರ್ ಸಚಿವ ಸಂಪುಟದಲ್ಲಿ ಬಳ್ಳಾರಿ ಭಾಗದ ಸಚಿವರಾಗಿ ಉಳಿದುಕೊಂಡಿರುವುದು ಆನಂದ್ ಸಿಂಗ್ ಮಾತ್ರ. ಕೆಲವು ದಿನಗಳ ಹಿಂದೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಆನಂದ್ ಸಿಂಗ್ ಮಾತನಾಡುತ್ತಿದ್ದರು. ನಂತರ ಶ್ರೀರಾಮುಲು ನೇತೃತ್ವದ ಬಿಎಸ್ಆರ್ ಕಾಂಗ್ರೆಸ್ ಸೇರುತ್ತಾರೆ ಎಂಬ ಸುದ್ದಿಯೂ ಹರಡಿತ್ತು.
ನಾನು ಬಿಜೆಪಿ ತೊರೆಯುವುದಿಲ್ಲ ಎಂದು ಹೇಳಿಕೆ ನೀಡಿದ್ದ ಆನಂದ್ ಸಿಂಗ್ ಕಾಂಗ್ರೆಸ್ ಸೇರುವ ನಿರ್ಧಾರಕ್ಕೆ ಕಾರಣವೇನು ಎಂದು ತಿಳಿದುಬಂದಿಲ್ಲ. ಸಚಿವ ಸಂಪುಟದಲ್ಲಿ ಗಣಿಧಣಿಗಳ ಪ್ರಭಾವವಿದ್ದಾಗ ಇವರಿಗೂ ಸಾಕಷ್ಟು ಗೌರವಿತ್ತು. ಈಗ ಗಣಿಧಣಿಗಳ ಸಾಮ್ರಾಜ್ಯ ಛಿದ್ರವಾಗಿದೆ.
ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿಯೂ ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯ ಒಬ್ಬ ಅಭ್ಯರ್ಥಿಯು ಜಯಗಳಿಸಿಲ್ಲ. ಬಿಜೆಪಿ ಜಿಲ್ಲೆಯಲ್ಲಿ ತನ್ನ ಅಸ್ತಿತ್ವ ಕಳೆದುಕೊಳ್ಳುವ ಭೀತಿಯಲ್ಲಿದೆ. ಇವುಗಳ ಸೂಚನೆ ಅರಿತು ಆನಂದ್ ಸಿಂಗ್ ಕೈ ಹಿಡಿಯಲು ಪ್ರಯತ್ನಿಸುತ್ತಿರಬಹುದು ಎಂದು ತಿಳಿದುಬಂದಿದೆ.
ಬಳ್ಳಾರಿಯಲ್ಲಿ ಮುದುಡುತ್ತಿರುವ ಕಮಲ : ಗಣಿಧಣಿಗಳಿಂದ ಬಳ್ಳಾರಿಯಲ್ಲಿ ನೆಲೆ ಕಂಡುಕೊಂಡಿದ್ದ ಬಿಜೆಪಿ ಜಿಲ್ಲೆಯಲ್ಲಿ ತನ್ನ ಪ್ರಭಾವ ಕಳೆದುಕೊಳ್ಳುತ್ತಾ ಸಾಗುತ್ತಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ಸೋಲು, ಬಳ್ಳಾರಿಯಲ್ಲಿ ಬಿಎಸ್ಆರ್ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಪಕ್ಷಗಳ ನಡುವೆ ಬಿಜೆಪಿಯ ಕಮಲ ಮುದುಡುತ್ತಿದೆ.
ಜಿಲ್ಲೆಯ ಬಿಜೆಪಿಗೆ ಏಕೈಕ ಆಸರೆಯಾಗಿದ್ದ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಬಿಜೆಪಿ ಬಿಡುವ ಮಾತನಾಡುತ್ತಿದ್ದಾರೆ. ಅವರು ಬಿಜೆಪಿ ತೊರೆದರೆ ಜಿಲ್ಲೆಯಲ್ಲಿ ಬಿಜೆಪಿ ಅಸ್ತಿತ್ವ ಕಳೆದುಕೊಳ್ಳುವುದು ಖಂಡಿತ. ಕೆಎಂಎಫ್ ಅಧ್ಯಕ್ಷ ಸೋಮಶೇಖರ ರೆಡ್ಡಿ ಮತ್ತು ಕಂಪ್ಲಿಯ ಸುರೇಶ್ ಬಾಬು ಹಾಲಿ ಬಿಜೆಪಿ ಶಾಸಕರಾಗಿದ್ದರೂ, ಬಿಎಸ್ಆರ್ ಕಾಂಗ್ರೆಸ್ ನೊಂದಿಗೆ ಗುರುತಿಸಿಕೊಂಡಿದ್ದಾರೆ.
ಮುಂದಿನ ಚುನಾವಣೆಗೆ ಉಭಯನಾಯಕರು ಬಿಜೆಪಿಯಿಂದ ಸ್ಪರ್ಧಿಸುವುದು ಅನುಮಾನ. ಹರಪನಹಳ್ಳಿ ಶಾಸಕ, ಮಾಜಿ ಸಚಿವ ಕರುಣಾಕರ ರೆಡ್ಡಿ ಮುಂದಿನ ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧಿಸಿದರೂ ಅವರು ದಾವಣಗೆರೆ ಜಿಲ್ಲೆಗೆ ಸೇರುತ್ತಾರೆ. ಆದ್ದರಿಂದ ಬಳ್ಳಾರಿಯಲ್ಲಿ ಬಿಜೆಪಿಗೆ ದೊಡ್ಡ ಸವಾಲು ಎದುರಾಗಲಿದೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications