ಪಟ್ಟಿ ಹಿಡಿದು ಅಜ್ಮೀರ್ ದರ್ಗಾಕ್ಕೆ ಹೊರಟ ಕುಮಾರಣ್ಣ
ಬೆಂಗಳೂರು, ಮಾ.25: ನಂಬಿಕೆಗಳು, ಮೂಢನಂಬಿಕೆಗಳು ಅವರವರದೇ ಸ್ವತ್ತು ಎಂದು ಮೊನ್ನೆಯಷ್ಟೇ ಬಾಲಿವುಡ್ ಸೆಲೆಬ್ರೆಟಿಗಳ ಬಗ್ಗೆ ಬರೆದಾಗ ಹೇಳಲಾಗಿತ್ತು. ಕತ್ರಿನಾ ಕೈಫ್ ಎಂಬ ಆಮದು ನಟಿಗೆ ಅಜ್ಮೀರ್ ದರ್ಗಾಕ್ಕೆ ಹೋಗಿಬಂದರೆ ಅದೃಷ್ಟ ಖುಲಾಯಿಸುತ್ತಂತೆ.
ಅಜ್ಮೀರ್ ದರ್ಗಾ ಕ್ಷೇತ್ರ ಮಹಿಮೆ: ಬರೀ ಒಬ್ಬ ಕತ್ರಿನಾ ಏಕೆ. ಅಜ್ಮೀರ್ ದರ್ಗಾಕ್ಕೆ ಎಲ್ಲೆಂಲ್ಲಿಂದಲೋ ಬಂದು ತಮ್ಮ ಇಷ್ಟಾರ್ಥಗಳು ಸಿದ್ಧಿಸಲಿ ಎಂದು ಮುಡಿ ಅರ್ಪಿಸುತ್ತಾರೆ. ಆ ಕ್ಷೇತ್ರ ಮಹಿಮೆಯೇ ಅಂತಹುದು.

ಈಗ ರಾಜ್ಯದಲ್ಲಿ ಚುನಾವಣೆ ಕಾಲ. ಕಣಕ್ಕಿಳಿಯುವ ಅಭ್ಯರ್ಥಿಗಳಿಗೆ ಒಳ್ಳೆಯದಾಗಲಿ ಎಂಬುದು ಪಕ್ಷದ ನಾಯಕರ ಆಶಯವಾಗಿರುತ್ತದೆ. ಹಾಗೆಂದೇ, ಭಾವಿ ಮುಖ್ಯಮಂತ್ರಿ ಎಂದೇ ಬಿಂಬಿತರಾದ ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಅವರೂ ತಮ್ಮ ಇಷ್ಟಾರ್ಥ ನೆರವೇರಲಿ ಎಂದು ಪ್ರಾರ್ಥಿಸಲು ದೂರದ ದರ್ಗಾಕ್ಕೆ ಇಂದು ಹೊರಟಿದ್ದಾರೆ.
ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಸಿದ್ದವಾಗಿದ್ದು, ಆ ಪಟ್ಟಿಯನ್ನು ದರ್ಗಾದಲ್ಲಿಟ್ಟು, ಅವರನ್ನೆಲ್ಲ ಗೆಲ್ಲಿಸು ತಂದೆ ಎಂದು ಪ್ರಾರ್ಥಿಸುವುದಾಗಿ ಕುಮಾರಣ್ಣ ಹೇಳಿದ್ದಾರೆ. ದರ್ಗಾದಲ್ಲಿ ಆಶೀರ್ವಾದ ಪಡೆದುಬಂದ ನಂತರ ಗುರುವಾರ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸುವುದಾಗಿಯೂ ಕುಮಾರಸ್ವಾಮಿ ತಿಳಿಸಿದ್ದಾರೆ.
ಕಾಂಗ್ರೆಸ್ಸಿನ ಸಿದ್ದರಾಮಯ್ಯನವರನ್ನು ಇಬ್ರಾಹಿಂ ಅವರು ಕರೆದೊಯ್ಯುವ ಪರಿಪಾಠವಿದ್ದರೆ ಕುಮಾರಸ್ವಾಮಿಯನ್ನು ಭೈಯ್ಯಾ ಜಮೀರ್ ಪಾಷಾ ಕರೆದುಕೊಂಡು ಹೋಗುತ್ತಿದ್ದಾರೆ. ಅಂದಹಾಗೆ ಟಿಕೆಟ್ ಪಟ್ಟಿಯಲ್ಲಿ ಜಮೀರ್ ಜತೆಗೆ ಅವರ ಸೋದರನ ಹೆಸರೂ ಕಾಣಿಸಿಕೊಂಡಿದೆ ಎನ್ನಲಾಗಿದೆ.
ಕುಮಾರಸ್ವಾಮಿ ಅವರು ಮುಸ್ಲಿಮರ ಅತ್ಯಂತ ಪವಿತ್ರ ಸ್ಥಳವಾದ ಅಜ್ಮೀರ್ ದರ್ಗಾಕ್ಕೆ ಹೋಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಚಾದರ ಅರ್ಪಿಸಿ ಬಂದಿದ್ದಾರೆ. ಕ್ರಿಸ್ತ ಶಕ 1142ರಲ್ಲಿ ಇರಾರಿನಲ್ಲಿ ಜನಿಸಿದ ಸೂಫಿ ಸಂತ ಹಜ್ರತ್ ಖ್ವಾಜಾ ಮೊಯಿನುದ್ದೀನ್ ಹಸನ್ ಛಿಸ್ತಿ ಅಜ್ಮೇರಿ ಇಲ್ಲಿನ ಧಾರ್ಮಿಕ ಗುರು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications