ನಾಡಿನ ನಂಜು ತೊಲಗಿಸಲು ಕೆಜೆಪಿ ಸ್ಥಾಪನೆ: ಬಿಎಸ್ ವೈ
ನಂಜನಗೂಡು, ಮಾ.24: ಅತ್ತ ದಕ್ಷಿಣ ಭಾರತದ ದೊಡ್ಡ ಜಾತ್ರೆ ನಡೆಯುತ್ತಿದ್ದರೆ ಇತ್ತ ಕೆಜೆಪಿಯಲ್ಲಿ ಜನಜಾತ್ರೆ ಕಂಡು ಬಂದಿತ್ತು. ಹಕೀಂ ನಂಜುಂಡಸ್ವಾಮಿ ಎಲ್ಲಾ ಬಗೆಯ ರೋಗಗಳನ್ನು ತೊಲಗಿಸುವಂತೆ ನಾಡಿನ ಕಷ್ಟ ಕಾರ್ಪಣ್ಯಗಳನ್ನು ತೊಲಗಿಸಲು ಕೆಜೆಪಿ ಸ್ಥಾಪಿಸಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸಾರಿದ್ದಾರೆ.
ಕೆಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾದ ಮೇಲೆ ನಿಗದಿಯಂತೆ ನಂಜನಗೂಡಿನಲ್ಲಿ ಕೆಜೆಪಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ನಾನು ಪ್ರಾದೇಶಿಕ ಪಕ್ಷ ಸ್ಥಾಪಿಸಿರುವುದು ಮತ್ತೆ ಮುಖ್ಯ ಮಂತ್ರಿಯಾಗಬೇಕೆಂಬ ಉದ್ದೇಶದಿಂದಲ್ಲ. ರಾಜ್ಯದ ನೆಲ-ಜಲ, ಭಾಷೆ, ಸಂಪತ್ತು ರಕ್ಷಣೆ ಹಾಗೂ ಯುವ ಪೀಳಿಗೆಯ ಭವಿಷ್ಯದ ದೃಷ್ಟಿಯಿಂದ ಕೆಜೆಪಿ ಪಕ್ಷ ಸ್ಥಾಪಿಸಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಿದರು.,

ಇದಕ್ಕೂ ಮುನ್ನ ಶನಿವಾರ(ಮಾ.23)ಹುಲ್ಲಹಳ್ಳಿ ರಸ್ತೆಯಲ್ಲಿರುವ ಮಹದೇಶ್ವರ ಲೇಔಟ್‌ನಲ್ಲಿ ಹಮ್ಮಿಕೊಂಡಿದ್ದ ಕೆಜೆಪಿ ಪಕ್ಷದ ಕಾರ್ಯಕರ್ತರ ಹಾಗೂ ಚುನಾವಣಾ ಸಿದ್ಧತಾ ಸಭೆಯನ್ನು ಯಡಿಯೂರಪ್ಪ ಉದ್ಘಾಟಿಸಿದರು.
ನಂಜನಗೂಡು ಪುಣ್ಯ ಕ್ಷೇತ್ರದಿಂದ ಪ್ರಚಾರ ಆರಂಭಿಸಿದ್ದೇನೆ. ಪಕ್ಷಕ್ಕೆ ಅಭೂತಪೂರ್ವ ಗೆಲುವು ಸಿಗುವ ವಿಶ್ವಾಸವಿದೆ ಎಂದರು. 1999ರಲ್ಲಿ ಸಂಕಲ್ಪ ಯಾತ್ರೆಯನ್ನು ಇಲ್ಲಿಂದಲೇ ಪ್ರಾರಂಭಿಸಿದ್ದೆ. 2008ರ ವಿಧಾನಸಭಾ ಚುನಾವಣೆಯಲ್ಲಿ ಶ್ರೀ ಕಂಠೇಶ್ವರನಿಗೆ ಪೂಜೆ ಸಲ್ಲಿಸುವ ಮೂಲಕ ಪ್ರಚಾರ ಆರಂಭಿಸಿದ್ದೆ. ಇದರಿಂದಲೇ 110 ಸ್ಥಾನಗಳನ್ನು ಪಡೆಯಲು ಸಾಧ್ಯವಾಗಿತ್ತು.
2013 ರ ಚುನಾವಣೆಗೂ ಮುನ್ನ ಇಂದು ಶ್ರೀ ನಂಜುಂಡೇಶ್ವರನಿಗೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದು ರಣರಂಗಕ್ಕೆ ಇಳಿಯುತ್ತಿದ್ದೇನೆ. ನಂಜನಗೂಡು ಕ್ಷೇತ್ರದ ಈಗಿನ ಕೆಜೆಪಿ ಅಭ್ಯರ್ಥಿ ಎಸ್. ಮಹದೇವಯ್ಯ ಕಳೆದ ಬಾರಿ ಚುನಾವಣೆಯಲ್ಲಿ ಕಡಿಮೆ ಅಂತರದಿಂದ ಸೋತಿದ್ದಾರೆ. ಈ ಬಾರಿ ಅವರು ಭಾರಿ ಮತಗಳ ಅಂತರದಿಂದ ಗೆಲ್ಲಲೇಬೇಕು ಎಂದು ಯಡಿಯೂರಪ್ಪ ಹೇಳಿದರು.
ವರುಣಾ ಕ್ಷೇತ್ರದ ಅಭ್ಯರ್ಥಿ ಕಾ.ಪು. ಸಿದ್ದಲಿಂಗಸ್ವಾಮಿ ಮತ್ತು ನಂಜನಗೂಡು ಕ್ಷೇತ್ರದ ಅಭ್ಯರ್ಥಿ ಎಸ್. ಮಹದೇವಯ್ಯ ಕಣದಲ್ಲಿದ್ದರೂ ಈ ಕ್ಷೇತ್ರದಲ್ಲಿ ಬಿ.ಎಸ್.ಯಡಿಯೂರಪ್ಪನವರೇ ಸ್ಪರ್ಧಿಸಿದ್ದಾರೆ ಎಂದು ಭಾವಿಸಿ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಬೇಕೆಂದು ಕರೆ ನೀಡಿದರು.
ಅಸಮಾಧಾನದ ಹೊಗೆ: ನಂಜನಗೂಡು ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಎಸ್. ಮಹದೇವಯ್ಯರವರನ್ನು ಈ ಕ್ಷೇತ್ರದ ಅಭ್ಯರ್ಥಿಯೆಂದು ಘೋಷಣೆ ಮಾಡುತ್ತಿದ್ದಂತೆ ಮಾದಿಗ ಜನಾಂಗದ ರಾಜ್ಯ ಮುಖಂಡ ಹಾಗೂ ರಾಜ್ಯ ಕೆಜೆಪಿ ಉಪಾಧ್ಯಕ್ಷ ಡಾ.ಡಿ.ತಿಮ್ಮಯ್ಯರವರಿಗೆ ಟಿಕೆಟ್ ನೀಡದೇ ಇರುವುದಕ್ಕೆ ಎಡಗೈ ಜನಾಂಗದ ಪ್ರಮುಖರು ತೀವ್ರ ಅಸಮಾಧಾನ ಗೊಂಡಿದ್ದಾರೆ. ಪುರಸಭಾ ಮಾಜಿ ಸದಸ್ಯ ಅಶೋಕ್ ಪುರಂ ಸ್ವಾಮಿ, ಮಾದಿಗ ಜನಾಂಗದ ರಾಜ್ಯಾಧ್ಯಕ್ಷ ಎಡತೊರೆ ಲಿಂಗರಾಜು, ಉಪಾಧ್ಯಕ್ಷ ನಿಟ್ರೆ ಮಹದೇವು, ವಿ.ಕೆ.ಪಾಪಣ್ಣ, ಮಾಸ್ಟರ್ ಕಾಳಯ್ಯ ಸೇರಿದಂತೆ ಹಲವರು ಪಕ್ಷದಲ್ಲಿ ಎಡಗೈ ಸಮುದಾಯಕ್ಕೆ ನ್ಯಾಯ ಸಿಗುವ ನಿರೀಕ್ಷೆ ಹುಸಿಯಾಗಿದೆ ಎಂದಿದ್ದಾರೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications