ನರೇಂದ್ರ ಮೋದಿ ಮ್ಯಾಜಿಕ್ ಕರ್ನಾಟಕದಲ್ಲಿ ನಡೆಯುವುದೇ?
ಬೆಂಗಳೂರು, ಮಾ.23: ಗುಜರಾತಿನ ಯಶಸ್ವೀ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಕರ್ನಾಟಕದಲ್ಲಿ ಬಿಜೆಪಿ ಸರಕಾರವನ್ನು ಮತ್ತೆ ಆಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಬಲ್ಲರಾ? ಶಿಖರವನ್ನು ತಲುಪಿರುವ ನರೇಂದ್ರ ಮೋದಿ ಪಾತಾಳದಲ್ಲಿರುವ ಬಿಜೆಪಿಗೆ ಆಪದ್ಬಾಂಧವರಾಗಿ ಕೈಹಿಡಿಯಲಿದ್ದಾರಾ? ಎಂಬುದು ಕರ್ನಾಟಕ ರಾಜ್ಯದ ರಾಜಕೀಯದಲ್ಲಿ ಕುತೂಹಲ ಎಬ್ಬಿಸಿದೆ.
ಮೋದಿ ಈ ಬಾರಿ ಚುನಾವಣೆ ಪ್ರಚಾರಕ್ಕೆ ಬಂದುಹೋಗುತ್ತೇನೆ ಎಂದು ಹೇಳಿರುವುದರಿಂದ ಕರ್ನಾಟಕ ಬಿಜೆಪಿ ಮಂದಿ ಪುಳಕಿತಗೊಂಡಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಅವರೊಬ್ಬರೇ ನಮ್ಮನ್ನು ಕೈಹಿಡಿದು ಮುನ್ನಡೆಸುವವರು. ಅವರೇ ಸ್ಟಾರ್ ಕಾಂಪೇನರ್ ಎಂಬುದು ಇಲ್ಲಿನ ಬಿಜೆಪಿ ಕಾರ್ಯಕರ್ತರ ದೃಢ ವಿಶ್ವಾಸ.

ಹಾಗೆ ನೋಡಿದರೆ ಕಳೆದ ಚುನಾವಣೆಯಲ್ಲೂ ಮೋದಿ, ಪ್ರಚಾರಕ್ಕೆಂದು ಕರ್ನಾಟಕಕ್ಕೆ ಬಂದುಹೋಗಿದ್ದರು. ಆದರೆ ಬಿಜೆಪಿ ಆಶಿಸಿದಷ್ಟು ಫಲ ನೀಡಿರಲಿಲ್ಲ ಆಗಿನ ಮೋದಿ ಭೇಟಿ. ಆದರೆ ಈಗಿನ ಮೋದಿಯೇ ಬೇರೆ. ಮತ್ತು ಈಗಿನ ಕರ್ನಾಟಕ ಬಿಜೆಪಿಯ ಪರಿಸ್ಥಿತಿಯೇ ಬೇರೆ.
ಆಗ ಅಂದರೆ ಕರ್ನಾಟಕದ ಬಿಜೆಪಿ ಬಗ್ಗೆ ಜನಕ್ಕೆ ಅಪಾರವಾದ ಭರವಸೆಯಿತ್ತು. ಬಿಜೆಪಿ ಅಂದರೆ ಪ್ರೀತಿ-ವಿಶ್ವಾಸವಿತ್ತು. ಬಿಜೆಪಿ ಮಂದಿಯನ್ನು ತಮ್ಮ ಮನೆ/ಮನಗಳಿಗೆ ಬಿಟ್ಟುಕೊಂಡಿದ್ದರು. ಆದರೆ ಪರಿಸ್ಥಿತಿ ಈಗ ಹಾಗಿಲ್ಲ. ಹಗರಣಗಳು ಅವರನ್ನು ಹೈರಾಣಗೊಳಿಸಿವೆ. ಬಿಜೆಪಿ ಮಂದಿ ರೋಡಿಗೆ ಬಂದರೆಂದರೆ ಆತಂಕದಿಂದ ಬಾಗಿಲು ಹಾಕಿಕೊಂಡುಬಿಡುತ್ತಾರೆ ಜನ. ಅದಕ್ಕೆ ಕಾರಣಗಳು ಬಿಜೆಪಿ ಮಂದಿಗೆ ಚೆನ್ನಾಗಿ ಗೊತ್ತು. ಮಾಡಿದ್ದುಣ್ಣೋ ಮಹಾರಾಯ.
ಇನ್ನು ಈಗಿನ ಮೋದಿ ಹಿಂದೆಂದಿಗಿಂತ ಹೆಚ್ಚು ಶಕ್ತರಾಗಿದ್ದಾರೆ. ಆದರೆ ಇಲ್ಲಿ ಗುಜರಾತ್ ಪವಾಡ ಸದೃಶಗೊಳಿಸಲು ಸಾಧ್ಯವಿಲ್ಲ. ಇಲ್ಲಿನ ಬಿಜೆಪಿಯ ದೃಶ್ಯಾವಳಿಗಳೇ ಬೇರೆ. ಅಲ್ಲಿ ನಾಲ್ಕನೆಯ ಬಾರಿಗೂ ಮೋದಿ ಒಬ್ಬರೇ ಮುಖ್ಯಮಂತ್ರಿಯಾಗಿದ್ದಾರೆ... ಇಲ್ಲಿ ಒಂದೇ ಅವಧಿಯಲ್ಲಿ ಮೂರ್ನಾಲ್ಕು ಮಂದಿ ಬಂದು ಹೋಗಿದ್ದಾರೆ.
ಬಂದವರೆಲ್ಲ ಪಕ್ಷವನ್ನು ಹೀನಾಯ ಸ್ಥಿತಿಗೆ ಕೊಂಡೊಯ್ದ ಶ್ರೇಯಸ್ಸು ಹೊಂದಿರುವವರೇ. ಆದರೆ ಮೋದಿಯದ್ದು ಹಾಗಲ್ಲ. ಕೆಲ ಕ್ಷೇತ್ರಗಳಲ್ಲಿ ವಿಶ್ವಕ್ಕೂ ಮಾದರಿಯಾಗುವಂತೆ ತಮ್ಮ ರಾಜ್ಯವನ್ನು ಅಭಿವರ್ಧಿಸಿದ್ದಾರೆ. ಇಲ್ಲೇನಿದೆ? ಬರೀ ಭ್ರಷ್ಟಾಚಾರ ಭ್ರಷ್ಟಾಚಾರ ಭ್ರಷ್ಟಾಚಾರ! ಇನ್ನು ಬಿಜೆಪಿ ಮಂದಿ ಗುತ್ತಿಗೆ ಪಡೆದಿರುವ 'ಹಿಂದುತ್ವ ಅಜೇಂಡಾ' ಸಹ ಸವಕಲು ನಾಣ್ಯವಾಗಿದೆ. ಭಯೋತ್ಪಾದನೆ, ದೇಶ ರಕ್ಷಣೆ ವಿಷಯಗಳು ರಾಜ್ಯದಲ್ಲಿ ಬ್ಯಾಕ್ ಫೈರ್ ಆಗಿವೆ.
ಪ್ರಚಾರದ ವೇಳೆ ವಿರೋಧ ಪಕ್ಷಗಳು ಬಿಜೆಪಿ ಭ್ರಷ್ಟಾಚಾರವನ್ನು ಹರಾಜಿಗಿಟ್ಟರೆ ಅದರ ವಿರುದ್ಧ ಹೋರಾಡುವ ಚೈತನ್ಯವೂ ರಾಜ್ಯ ಬಿಜೆಪಿ ಮಂದಿಯಲ್ಲಿ ಉಳಿದಿಲ್ಲ. ವಿರೋಧ ಪಕ್ಷದವರು ಕಡುಭ್ರಷ್ಟರು ಅನ್ನುವ ಮೊದಲೇ ಹೌದು ನಮ್ಮಿಂದ ತಪ್ಪಾಗಿದೆ. ಕ್ಷಮಿಸಿ ಎಂಬುದು ಬಿಜೆಪಿಯ ಆರ್ತನಾದವಾಗಿದೆ.
ಒಂದು ರೀತಿಯಲ್ಲಿ ಮೋದಿ ಅವರಿಗೂ ಇದು ಸವಾಲಿದ್ದಾಗಿದೆ. ಕರ್ನಾಟಕದ ಮತದಾರರನ್ನು ಬಿಜೆಪಿಯತ್ತ ಮುಖ ಮಾಡಿಸುವುದು ಅವರ ತಾಕತ್ತಿನ ಪ್ರಶ್ನೆ. ನೋಡಬೇಕು, ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಏಪ್ರಿಲ್ 17ರ ನಂತರ ಏನಾಗುವುದೋ !?
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications