ಸಜ್ಜನ ಆಂಟನಿ ಸಾರಥ್ಯದಲ್ಲಿ ಕಾಂಗ್ರೆಸ್ ಟೀಂ ರೆಡಿ
ನವದೆಹಲಿ, ಮಾ.21: ರಾಜ್ಯ ವಿಧಾನಸಭೆ ಚುನಾವಣೆಗೆ ದಿನಾಂಕ ನಿಗದಿಯಾದ ಬೆನ್ನಲ್ಲೇ ಕಾಂಗ್ರೆಸ್ ಪಕ್ಷವು ಚುನಾವಣಾ ಉಸ್ತುವಾರಿ ತಂಡವನ್ನು ಸಜ್ಜುಗೊಳಿಸಿದೆ. ಇದಕ್ಕೆ ಕೇಂದ್ರ ಸಚಿವ, ನೆರೆಯ ಕೇರಳದ ಸಜ್ಜನ ಎಕೆ ಆಂಟನಿ ಅವರ ರಕ್ಷಣೆ ಸಿಕ್ಕಿದೆ.
ಸಮಿತಿಯು ಚುನಾವಣೆಗಾಗಿ ಅಭ್ಯರ್ಥಿಗಳ ಆಯ್ಕೆಯಿಂದ ಹಿಡಿದು ಪ್ರಣಾಳಿಕೆ ಸಿದ್ಧಪಡಿಸುವುದರವರೆಗೆ, ಚುನಾವಣೆಯ ಪ್ರತಿಯೊಂದು ಚಟುವಟಿಕೆಯ ಬಗ್ಗೆಯೂ ಮೇಲುಸ್ತುವಾರಿ ನೋಡಿಕೊಳ್ಳಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಕುತೂಹಲದ ಸಂಗತಿಯೆಂದರೆ ರಾಜ್ಯದ ವಯೋವೃದ್ಧ ನಾಯಕ ಎಸ್ಎಂ ಕೃಷ್ಣ ಅವರ (ಬಹುಶಃ ಅವರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು) ಹೆಗಲಿಗೆ ಚುನಾವಣಾ ನೊಗ ಹೊರೆಸಿಲ್ಲ. ಅದೇ ರೀತಿ ರಾಜ್ಯವನ್ನು ಪ್ರತಿನಿಧಿಸಿರುವ ಕೇಂದ್ರದ ಹಾಲಿ ಸಚಿವರ ಪೈಕಿ ಯಾರೊಬ್ಬರೂ Team Congress ನಲ್ಲಿ ಕಾಣಿಸಿಕೊಂಡಿಲ್ಲ.
ಕೇಂದ್ರ ಚುನಾವಣಾ ಸಮಿತಿಯಲ್ಲಿದ್ದ ರಾಜ್ಯ ಉಸ್ತುವಾರಿ ಮಧುಸೂದನ ಮಿಸ್ತ್ರಿ ಅವರೂ ತಂಡದಲ್ಲಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮಾತ್ರ ರಾಜ್ಯದ ಪರವಾಗಿ ಸಮಿತಿಯಲ್ಲಿದ್ದಾರೆ. ಎಕೆ ಆ್ಯಂಟನಿ (2005ರಲ್ಲಿ), ವಯಲಾರ್ ರವಿ (2003ರಲ್ಲಿ) ಹಾಗೂ ಅಂಬಿಕಾ ಸೋನಿ (2001)ರಲ್ಲಿ ರಾಜ್ಯದ ಉಸ್ತುವಾರಿ ಹೊತ್ತಿದ್ದರು ಎಂಬುದು ಗಮನಾರ್ಹ.
ಚುನಾವಣೆ ಸಿದ್ಧತೆ ಕುರಿತು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರೊಂದಿಗೆ ಚರ್ಚಿಸಲು ರಾಜ್ಯ ಕಾಂಗ್ರೆಸ್ ನಾಯಕರು ಬುಧವಾರ ದೆಹಲಿ ತಲುಪುವುದಕ್ಕೂ ಮುನ್ನವೇ ಎಕೆ ಆ್ಯಂಟನಿ ನೇತೃತ್ವದ ಸಮಿತಿ ರಚನೆಯ ಘೋಷಣೆ ಹೊರಬಿದ್ದಿದೆ.
ತಂಡದಲ್ಲಿ ಎಕೆ ಅಂಟನಿ ಅವರಿಗೆ ವಯಲಾರ್ ರವಿ, ಅಂಬಿಕಾ ಸೋನಿ ಅವರೂ ಸಾಥ್ ನೀಡಲಿದ್ದಾರೆ. ಜತೆಗೆ, ಇತ್ತೀಚೆಗಷ್ಟೇ ರಚನೆಯಾದ ಕೇಂದ್ರ ಚುನಾವಣಾ ಪರಿಶೀಲನಾ ಸಮಿತಿಯಲ್ಲಿದ್ದ ಲೂಸಿನ್ಹೋ ಫೆಲೆರೋ ಹಾಗೂ ಜಿತೇಂದರ್ ಸಿಂಗ್ ಸಮಿತಿಯಲ್ಲಿದ್ದಾರೆ.
ಈ ನಡುವೆ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್‌ಆರ್ ಪಾಟೀಲ್ ಬುಧವಾರ ಸಂಜೆ ದೆಹಲಿ ಸೇರಿದ್ದಾರೆ. ಈ ನಾಯಕರು ಇಂದು ಗುರುವಾರ ಮಧ್ಯಾಹ್ನ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಪಕ್ಷದ ಚುನಾವಣಾ ಸಿದ್ಧತೆ, ಸಂಭವನೀಯ ಅಭ್ಯರ್ಥಿಗಳ ಪಟ್ಟಿ, ಅನ್ಯಪಕ್ಷೀಯರ ಸೇರ್ಪಡೆ ಸೇರಿದಂತೆ ಚುನಾವಣೆಗೆ ಸಂಬಂಧಿಸಿದ ಪ್ರತಿಯೊಂದು ವಿಚಾರದ ಬಗ್ಗೆಯೂ ರಾಹುಲ್ ಅವರೊಂದಿಗೆ ಚರ್ಚಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications