ಬಿಜೆಪಿ ಅಧ್ಯಕ್ಷರಾಗಿ ಪ್ರಹ್ಲಾದ್ ಜೋಷಿ ನೇಮಕ

ಗುರುವಾರ ಮಧ್ಯಾಹ್ನ ನವದೆಹಲಿಯ ಕರ್ನಾಟಕ ಭವನದಲ್ಲಿ ರಾಜ್ಯದ ಬಿಜೆಪಿ ಸಂಸದರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ ಕುಮಾರ್ ನೇತೃತ್ವದಲ್ಲಿ ಸಭೆ ಸೇರಿ, ಪ್ರಹ್ಲಾದ್ ಜೋಷಿ ಅವರ ಹೆಸರನ್ನು ಅಂತಿಮಗೊಳಿಸಿದ್ದರು. ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ಸಭೆಯ ತೀರ್ಮಾನ ತಿಳಿಸಿದ್ದರು. ನಂತರ ತಮ್ಮ ನಿವಾಸದಲ್ಲಿ ರಾಜನಾಥ್ ಸಿಂಗ್ ಜೋಷಿ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿರುದಾಗಿ ಪ್ರಕಟಿಸಿದ್ದಾರೆ.
ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಸಂಸದ ನಳೀನ್ ಕುಮಾರ್ ಕಟೀಲ್ ಅವರ ಹೆಸರು ಪ್ರಬಲವಾಗಿ ಕೇಳಿಬಂದಿತ್ತು. ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಮತ್ತೊಮ್ಮೆ ಅಧ್ಯಕ್ಷರಾಗಿ ಆಯ್ಕೆಯಾಗಲಿದ್ದಾರೆ ಎಂಬ ಮಾತುಗಳು ಕೇಳಿಬಂದಿತ್ತು. ಗುರುವಾರ ಎಲ್ಲಾ ವಿವಾದಗಳಿಗೆ ತೆರೆ ಬಿದ್ದಿದ್ದು ಪ್ರಹ್ಲಾದ್ ಜೋಷಿ ಆಯ್ಕೆಯಾಗಿದ್ದಾರೆ.
ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಂತ ಕುಮಾರ್ ಅವರ ಬಣ ಬಿಜೆಪಿ ವರಿಷ್ಠರ ಮೇಲೆ ಪ್ರಹ್ಲಾದ್ ಜೋಷಿ ಅವರನ್ನು ರಾಜ್ಯಾಧ್ಯಕ್ಷರಾಗಿ ನೇಮಕ ಮಾಡುವಂತೆ ಹೆಚ್ಚಿನ ಒತ್ತಡ ಹೇರಿತ್ತು ಎಂದು ತಿಳಿದುಬಂದಿದೆ. ರಾಜ್ಯ ವಿಧಾನಸಭೆ ಚುನಾವಣೆ ದಿನಾಂಕವು ಪ್ರಕಟಗೊಂಡಿರುವುದರಿಂದ ತಕ್ಷಣ ರಾಜ್ಯಾಧ್ಯಕ್ಷರನ್ನು ನೇಮಕಮಾಡಿ ವರಿಷ್ಠರು ಆದೇಶ ಹೊರಡಿಸಿದ್ದಾರೆ.
ಮಾ.7ರಂದು ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಗಿದ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರಿಂದಾಗಿ ಬಿಜೆಪಿ ಅಧ್ಯಕ್ಷರ ಹುದ್ದೆ ತೆರವಾಗಿತ್ತು. ಮಾ.9ರಂದು ಬೆಂಗಳೂರಿನಲ್ಲಿ ನಡೆದ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ರಾಜ್ಯಾಧ್ಯಕ್ಷರ ಹುದ್ದೆ ಬಗ್ಗೆ ಯಾವುದೇ ಒಮ್ಮತ ಮೂಡಿರಲಿಲ್ಲ.
ಕೋರ್ ಕಮಿಟಿ ಸಭೆಯಲ್ಲಿ ಭಾಗವಹಿಸಿದ್ದ ಬಿಜೆಪಿ ವರಿಷ್ಠ ಅರುಣ್ ಜೇಟ್ಲಿ ಮತ್ತು ಧರ್ಮೇಂದ್ರ ಪ್ರಧಾನ್ ಸಭೆಯ ವಿವರಗಳನ್ನು ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಅವರಿಗೆ ನೀಡಿ ಅಂತಿಮ ನಿರ್ಧಾರವನ್ನು ಅವರ ಹೆಗಲಿಗೆ ವರ್ಗಾಯಿಸಿದ್ದರು. ರಾಜ್ಯ ಚುನಾವಣೆ ಘೋಷಣೆಯಾಗಿದ್ದರಿಂದ ತಕ್ಷಣ ರಾಜ್ಯಾಧ್ಯಕ್ಷರನ್ನು ಆಯ್ಕೆ ಮಾಡಿ ರಾಜನಾಥ್ ಸಿಂಗ್ ಆದೇಶ ಹೊರಡಿಸಿದ್ದಾರೆ.
ಉತ್ತರ ಕರ್ನಾಟಕಕ್ಕೆ ಆದ್ಯತೆ : ಧಾರವಾಡದ ಸಂಸದ ಪ್ರಹ್ಲಾದ್ ಜೋಷಿ ಅವರ ಪೂರ್ಣ ಹೆಸರು ಪ್ರಹ್ಲಾದ್ ವೆಂಕಟೇಶ ಜೋಷಿ. ವೆಂಕಟೇಶ್ ಜೋಷಿ ಮತ್ತು ಮಾಲತಿ ಜೋಷಿ ಅವರ ಪುತ್ರರಾದ ಇವರು ಬಿಎ ಪದವಿ ಪಡೆದಿದ್ದಾರೆ. 2004ರಲ್ಲಿ 14ನೇ ಲೋಕಸಭೆ ಚುನಾವಣೆಯಲ್ಲಿ ಧಾರವಾಢ ಕ್ಷೇತ್ರದಿಂದ ಜೋಷಿಯವರು ಬಿಜೆಪಿಯಿಂದ ಆಯ್ಕೆಯಾದರು.
ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಸಹ ಉತ್ತರ ಕರ್ನಾಟಕ ಮೂಲದವರು. ಬಿಜೆಪಿ ಅಧ್ಯಕ್ಷ ಸ್ಥಾನವು ಉತ್ತರ ಕರ್ನಾಟಕದ ಪಾಲಾಗಿದೆ. ಮುಂದಿನ ಚುಣಾವಣೆಯಲ್ಲಿ ಉತ್ತರ ಕರ್ನಾಟಕದ ಮತದಾರರನ್ನು ಸೆಳೆಯಲು ಬಿಜೆಪಿ ಇಂತಹ ತಂತ್ರ ರೂಪಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ರಾಜ್ಯ ಚುನಾವಣೆ ಎದುರಾಗಿರುವುದರಿಂದ ಪ್ರಹ್ಲಾದ್ ಜೋಷಿ ಅವರ ಮುಂದೆ ಹಲವಾರು ಸವಾಲುಗಳಿವೆ.
ರಾಜ್ಯಾಧ್ಯಕ್ಷರನ್ನು ಘೋಷಿಸುವ ಮೂಲಕ ಬಿಜೆಪಿ ರಾಜ್ಯ ವಿಧಾನಸಭೆ ಚುನಾವಣೆಗೆ ತಯಾರಿ ಆರಂಭಿಸಿದೆ. ಆಡಳಿತಾರೂಢ ಪಕ್ಷವಾಗಿರುವುದರಿಂದ ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಪುನಃ ಅಧಿಕಾರಕ್ಕೆ ತರಲು ನಾಯಕರು ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಮಾ.23ರಂದು ರಾಜ್ಯ ಚುನಾವಣಾ ಸಮಿತಿ ಸಭೆ ನಡೆಯಲಿದ್ದು, ಅಂದು 224 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿ ಕೇಂದ್ರ ಚುನಾವಣಾ ಸಮಿತಿಗೆ ಕಳುಹಿಸಿ ಕೊಡಲು ನಾಯಕರು ತೀರ್ಮಾನಿಸಿದ್ದಾರೆ. (ರಾಜ್ಯ ಚುನಾವಣಾ ವೇಳಾಪಟ್ಟಿ)
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡ












Click it and Unblock the Notifications