ಹೊಸ ಅಧ್ಯಕ್ಷರ ಜುಟ್ಟು ಜನಿವಾರ ಅನಂತ್ ಕೈಲಿರುತ್ತೆ

ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಯಾರಿಗೂ ಬೇಡದ ಹುದ್ದೆಯಾಗಿ ಅನೇಕ ತಿಂಗಳುಗಳಿಂದ ಮ್ಯೂಸಿಕಲ್ ಚೇರ್ ಆಟ ಆಡುತ್ತಲೇ ಇದೆ. ನನಗೆ ಬೇಡ ನನಗೆ ಬೇಡ ಎಂದು ಎಲ್ಲಾ ಟಾಪ್ ಕ್ಲಾಸ್ ನಾಯಕರು ಹೇಳುತ್ತಲೇ ಇದ್ದಾರೆ. ಸದಾನಂದ ಗೌಡರಿಗೆ ಎರಡನೇ ಬಾರಿಗೆ ಲಭ್ಯವಾಗಬೇಕಿದ್ದ ಕುರ್ಚಿಯನ್ನು ಕಾಣದ ಕೈಯೊಂದು ಪಕ್ಕಕ್ಕೆ ಸರಿಸಿದ್ದು, ವಿಷಯವನ್ನು ಇನ್ನಷ್ಟು ಜಟಿಲ ಗೊಳಿಸಿದೆ. [ಅಧ್ಯಕ್ಷ ಪಟ್ಟಕ್ಕೆ ಯಾರು ಹಿತವರು ಸಾಧ್ಯಾಸಾಧ್ಯತೆ ಬಗ್ಗೆ.]
ಗಾಳಿಸುದ್ದಿ, ಬ್ರೇಕಿಂಗ್ ನ್ಯೂಸ್ ಬಿಟ್ಟಾಕಿ: ಬಿಜೆಪಿ ರಾಜ್ಯಾಧ್ಯಕ್ಷರ ರೇಸ್‌ನಲ್ಲಿ ಸಂಸದ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ಸೇರಿಕೊಂಡಿದ್ದಾರೆ ಎಂಬ ಗಾಳಿಸುದ್ದಿ ರಾಜಕೀಯ ವಲಯದಲ್ಲೆ ಗಿರಕಿ ಹೊಡೆಯುತ್ತಿದ್ದು, ವಿಷಯ ಕೇಳಿಸಿಕೊಂಡ ಅನಂತ್ ಮುಖದಲ್ಲಿ ನಗೆ ಉಕ್ಕಿಸಿದೆಯಂತೆ. ಈಶ್ವರಪ್ಪ ಅವರು ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಶಾಕಿಂಗ್, ಬ್ರೇಕಿಂಗ್ ಆಗಿ ಮಾಧ್ಯಮಗಳಲ್ಲಿ ಬಂದರೂ ವಾರಗಳ ಹಿಂದೆಯೇ ಈ ಬಗ್ಗೆ ಸಂಸದ ಪ್ರಹ್ಲಾದ್ ಜೋಶಿ ಸುಳಿವು ನೀಡಿದ್ದರು.
ರಾಜ್ಯಾಧ್ಯಕ್ಷರ ಆಯ್ಕೆ ಗೊಂದಲದಲ್ಲಿ ಜಾತಿ ಲೆಕ್ಕಾಚಾರ ಎದುರಾಗಿರುವುದರಿಂದ ಅನಂತ್ ಕುಮಾರ್ ಅವರು ಆ ಸ್ಥಾನ ನನಗೆ ಬೇಡ ಎಂದಿದ್ದಾರೆ ಎಂಬ ಮಾಹಿತಿಯಿದೆ. ಆದರೆ, ಹೊಸ ಅಧ್ಯಕ್ಷ ಯಾರೇ ಆದರೂರು ಅವರ ಮೇಲಿನ ಹಿಡಿತ ಅನಂತ್ ಅವರ ಕೈಲಿರುತ್ತೆ. ಆಯ್ಕೆ ಬಗ್ಗೆ ಅನಂತ್ ಕುಮಾರ್ ಅವರು ಆರೆಸ್ಸೆಸ್ ಮುಖಂಡ ಸಂತೋಷ್ ಅವರ ಅಭಿಪ್ರಾಯದಂತೆ ನಡೆಯಲು ಅರುಣ್ ಜೇಟ್ಲಿ ಅವರು ಮಾನಸಿಕವಾಗಿ ಸಿದ್ಧತೆ ನಡೆಸಿಕೊಂಡು ಬರುತ್ತಿದ್ದಾರೆ.
ಹೀಗಾಗಿ ಚಹಾಕೂಟದಲ್ಲಿ ಚರ್ಚಿಸಲು ವಿಷಯವೇ ಇರುವುದಿಲ್ಲ. ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರ ಹೆಸರು ಪಟ್ಟಿಯಿಂದ ಜಾರಿದೆ. ಹಿಂದುಳಿದ ವರ್ಗದ ಅಭ್ಯರ್ಥಿಗೆ ಅಧ್ಯಕ್ಷ ಸ್ಥಾನ ನೀಡಬೇಕೆಂದು ಒತ್ತಡ ಬಂದ ಹಿನ್ನೆಲೆಯಲ್ಲಿ ಗೋವಿಂದ ಕಾರಜೋಳ ಅವರ ಹೆಸರು ಕೂಡ ಕೇಳಿಬಂದಿತ್ತು. ಕಾರಜೋಳ ಒಲ್ಲೆ ಎಂದಿದ್ದಾರೆ.
ಪ್ರಹ್ಲಾದ್ ಜೋಶಿ ಜೊತೆಯಲ್ಲಿ ದಕ್ಷಿಣ ಕನ್ನಡ ಸಂಸದ ನಳಿನಿ ಕುಮಾರ್ ಕಟೀಲು ಹೆಸರು ಕೇಳಿ ಬಂದಿತ್ತು. ಅದರೆ, ಮುಂಬರುವ ವಿಧಾನಸಭೆ ಚುನಾವಣೆ ಹಿತದೃಷ್ಟಿಯಿಂದ ಯಾವುದೇ ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ಹೊಂದಿರುವ ನಾಯಕನನ್ನು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಲು ಹೈಕಮಾಂಡ್ ಚಿಂತನೆ ನಡೆಸಿದೆ.
ಅನಂತ್‌ಕುಮಾರ್ ಈಗ ತಮ್ಮ ಉಮೇದುದಾರಿಕೆಯನ್ನು ತನ್ನ ಸಹದ್ಯೋಗಿ ಹೈಕಮಾಂಡ್ ನಾಯಕರ ಮುಂದೆಯೇ ಮಂಡಿಸಲಿದ್ದಾರೆ ಎಂಬ ಸುದ್ದಿ ಇದೆಯಾದರೂ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೇರಿದವರು ಮತ್ತೊಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಚಾಲೆಂಜ್ ಸ್ವೀಕರಿಸಬೇಕಾಗುತ್ತದೆ ಎಂಬ ಅಂಶ ಅನಂತ್ ಅವರನ್ನು ಹಿಂದೆ ಸರಿಯುವಂತೆ ಮಾಡಿದೆ. ತಾನು ಕೂರಲ್ಲ, ಸಮರ್ಥರನ್ನು ಕೂರಲಿಕ್ಕೆ ಬಿಡುವುದಿಲ್ಲ. ಒಟ್ಟಾರೆ ಥೈ ಥಕ ಥೈ ಕುಣಿತ ಆಡಿಸುವುದು ಅನಂತ್ ಅವರ ಸೂತ್ರಧಾರತನದ ಸಿದ್ಧಾಂತ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications