ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಈಶ್ವರಪ್ಪ ರಾಜೀನಾಮೆ

ಗುರುವಾರ ಬೆಳಗ್ಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತದಾನ ಮಾಡಿದ ನಂತರವೂ ರಾಜೀನಾಮೆ ಬಗ್ಗೆ ಯಾವುದೇ ಸೂಚನೆ ನೀಡದಿದ್ದ ಈಶ್ವರಪ್ಪ ಸಂಜೆ ತಮ್ಮ ರಾಜೀನಾಮೆ ಪತ್ರವನ್ನು ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಅವರಿಗೆ ಫ್ಯಾಕ್ಸ್ ಮೂಲಕ ರವಾನಿಸಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆ ನೂತನ ಅಧ್ಯಕ್ಷರ ನೇತೃತ್ವದಲ್ಲಿ ನಡೆಯಲಿದ್ದು, ಎರಡು ದಿನದಲ್ಲಿ ನೂತನ ಅಧ್ಯಕ್ಷರ ನೇಮಕವಾಗುವ ಸಾಧ್ಯತೆ ಇದೆ.
ರಾಜೀನಾಮೆ ನೀಡಿದ ನಂತರ ಸುದ್ದಿಗೋಷ್ಠಿ ನಡೆಸಿದ ಕೆ.ಎಸ್.ಈಶ್ವರಪ್ಪ (ಕೌಡಿಕಿ ಶರಣಪ್ಪ ಈಶ್ವರಪ್ಪ) ಉಪ ಮುಖ್ಯಮಂತ್ರಿ ಹುದ್ದೆ ಮತ್ತು ರಾಜ್ಯಾಧ್ಯಕ್ಷ ಸ್ಥಾನ ಎರಡು ಹುದ್ದೆ ನಿಭಾಯಿಸಲು ಕಷ್ಟವಾಗುತ್ತಿತ್ತು ಆದ್ದರಿಂದ ರಾಜೀನಾಮೆ ನೀಡುತ್ತಿರುವುದಾಗಿ ಹೇಳಿದರು.
ನೂತನ ಅಧ್ಯಕ್ಷರ ನೇಮಕ ಕುರಿತಂತೆ ಚರ್ಚಿಸಲು ಬಿಜೆಪಿ ವರಿಷ್ಠ ಅರುಣ್ ಜೇಟ್ಲಿ ಇನ್ನೆರಡು ದಿನದಲ್ಲಿ ಆಗಮಿಸಲಿದ್ದು ನಂತರ ಹೊಸ ಅಧ್ಯಕ್ಷರ ನೇಮಕವಾಗುವ ಸಾಧ್ಯತೆ ಇದೆ.
ಆಕಾಂಕ್ಷಿಗಳಾರು ? ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ಈಶ್ವರಪ್ಪ ರಾಜೀನಾಮೆ ನೀಡುತ್ತಿದ್ದಂತೆ ಬಿಜೆಪಿಯಲ್ಲಿ ಬಿರುಸಿನ ಚಟುವಟಿಕೆ ಪ್ರಾರಂಭವಾಗಿದೆ. ಅಧ್ಯಕ್ಷ ಹುದ್ದೆ ರೇಸ್ ನಲ್ಲಿರುವ ನಾಯಕರು ತೆರೆಮರೆಯ ಚಟುವಟಿಕೆ ಪ್ರಾರಂಭಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಸಚಿವ ಗೋವಿಂದ ಎಂ.ಕಾರಜೋಳ, ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ನಳೀನ್ ಕುಮಾರ್ ಕಟೀಲ್, ಧಾರವಾಡ ಸಂಸದ ಪ್ರಹ್ಲಾದ್ ಜೋಷಿ, ಉಪ ಮುಖ್ಯಮಂತ್ರಿ ಆರ್.ಅಶೋಕ್ ಮುಂತಾದವರು ಅಧ್ಯಕ್ಷ ಗಾದಿಯ ರೇಸ್ ನಲ್ಲಿದ್ದಾರೆ. ಇವರಲ್ಲೊಬ್ಬರಿಗೆ ರಾಜ್ಯಾಧ್ಯಕ್ಷ ಪಟ್ಟ ಸಿಗುತ್ತಾ? ಅಥವಾ ಅವರ್ನ್ ಬಿಟ್, ಇವರ್ನ್ ಬಿಟ್ ಮತ್ತಾರಿಗಾದರೂ ಒಲಿಯುತ್ತಾ? (ಬಹುಮುಖ ಪ್ರತಿಭೆಯ ಈಶ್ವರಪ್ಪ)












Click it and Unblock the Notifications