ಶಿವಮೊಗ್ಗದಲ್ಲಿ ಈ ಬಾರಿ ಜಿದ್ದಾಜಿದ್ದಿನ ಹೋರಾಟ

ಉಪ ಮುಖ್ಯಮಂತ್ರಿ ಈಶ್ವರಪ್ಪ ಅವರ ಸ್ವ ಕ್ಷೇತ್ರವಾದ ಶಿವಮೊಗ್ಗ ನಗರದಲ್ಲಿ ಅವರ ವಿರುದ್ಧ ಸ್ಪರ್ಧಿಸಲು, ಕಾಂಗ್ರೆಸ್ ನಾಯಕರ ಪೈಪೋಟಿ ಆರಂಭವಾಗಿದೆ. ಯಡಿಯೂರಪ್ಪ ಆಪ್ತರಾಗಿದ್ದು, ಕಾಂಗ್ರೆಸ್ ಸೇರಿರುವ ವಕೀಲ ದಿವಾಕರ್ ಮತ್ತು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಕುಮಾರ್ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.
ಈ ಇಬ್ಬರು ನಾಯಕರನ್ನು ಜಾತಿ ಲೆಕ್ಕಾಚಾರದ ಮೇಲೆ ನೋಡುವುದಾದರೆ ಬ್ರಾಹ್ಮಣರು. ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಬ್ರಾಹ್ಮಣರ ಪ್ರಾಬಲ್ಯ ತಕ್ಕಮಟ್ಟಿಗೆ ಇದೆ. ಇವರಿಗೆ ಪ್ರತಿಸ್ಪರ್ಧಿಯಾಗಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಶ್ರೀಕಾಂತ್ ಅವರು ಕಣಕ್ಕಿಳಿಯಲಿದ್ದಾರೆ. ಕೆಜೆಪಿಯಿಂದ ಯಡಿಯೂರಪ್ಪ ಪುತ್ರ ರಾಘವೇಂದ್ರ ಈಶ್ವರಪ್ಪ ವಿರುದ್ಧ ಸ್ಪರ್ಧಿಸುತ್ತಾರೆ ಎಂಬ ಉಹಾಪೋಹಗಳು ಹರಿದಾಡುತ್ತಿವೆ.
ಶಿಕಾರಿಪುರ : ಯಡಿಯೂರಪ್ಪ ಸ್ವ ಕ್ಷೇತ್ರ ಶಿಕಾರಿಪುರದಲ್ಲಿ ಅವರ ವಿರುದ್ಧ ಯಾರು ಸ್ಪರ್ಧಿಸಲಿದ್ದಾರೆ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಕಳೆದ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಶೇಖರಪ್ಪ ಕೆಜೆಪಿ ಸೇರಿದ್ದಾರೆ. ಯಡಿಯೂರಪ್ಪ ವಿರುದ್ಧ ಸ್ಪರ್ಧಿಸುವ ಬಿಜೆಪಿ ಹುರಿಯಾಳು ಪದ್ಮನಾಭ ಭಟ್ ಎಂದು ಚಿಂತನೆ ನಡೆದಿದೆ ಇನ್ನೂ ಅಂತಿಮವಾಗಿಲ್ಲ. ಕಾಂಗ್ರೆಸ್ ಅಭ್ಯರ್ಥಿಯಾಗಿ ಶಾಂತ ವೀರಪ್ಪ ಗೌಡ ಮತ್ತು ನಗರದ ಮಹದೇವಪ್ಪ ಹೆಸರುಗಳು ಕೇಳಿಬರುತ್ತಿವೆ. ಯಾರಿಗೆ ಟಿಕೆಟ್ ಎಂಬುದು ತೀರ್ಮಾನವಾಗಿಲ್ಲ.
ಸಾಗರ : ಬಿಜೆಪಿ ಹಿಡಿತದಲ್ಲಿರುವ ಕ್ಷೇತ್ರದಲ್ಲಿ ಹಾಲಿ ಬೇಳೂರು ಗೋಪಾಲಕೃಷ್ಣ ಶಾಸಕರು. ಬಿಜೆಪಿ ತೊರೆದು ಬೇರೆ ಪಕ್ಷದ ಕೈ' ಹಿಡಿಯಲಿದ್ದಾರೆ ಎಂಬುದು ಸದ್ಯದ ಸುದ್ದಿ. ಆದರೆ, ಯಾವ ಪಕ್ಷ ಸೇರಲಿದ್ದಾರೆ ಎಂಬುದು ದೇವರಿಗೂ ತಿಳಿದಂತಿಲ್ಲ. ಬೇಳೂರು ಪಕ್ಷ ಬಿಟ್ಟರೆ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಶುಭಾ ಕೃಷ್ಣಮೂರ್ತಿ ಅವರಿಗೆ ಟಿಕೆಟ್ ನೀಡಲು ಬಿಜೆಪಿ ಚಿಂತನೆ ನಡೆಸಿದೆ. ಹಿರಿಯ ಕಾಂಗ್ರೆಸ್ ಮುಖಂಡ ಕಾಗೋಡು ತಿಮ್ಮಪ್ಪ ಸಾಗದಲ್ಲಿ ಈ ಬಾರಿ ಗೆಲುವು ಸಾಧಿಸುವ ಉತ್ಸಾಹದಲ್ಲಿದ್ದಾರೆ. ಕಾಗೋಡು ಅವರ ಎದುರು ಸಮರ್ಥ ಅಭ್ಯರ್ಥಿ ನಿಲ್ಲಿಸಬೇಕು ಎಂದು ಜೆಡಿಎಸ್ ಮತ್ತು ಕೆಜೆಪಿ ಸಿದ್ಧತೆ ಆರಂಭಿಸಿವೆ.
ತೀರ್ಥಹಳ್ಳಿ : ಕಾಂಗ್ರೆಸ್ ಹಿಡಿತದಲ್ಲಿರುವ ಕ್ಷೇತ್ರದಲ್ಲಿ ಹಾಲಿ ಕಿಮ್ಮನೆ ರತ್ನಾಕರ್ ಶಾಸಕರು. ಬಿಜೆಪಿಯ ಆರಗ ಜ್ಞಾನೇಂದ್ರ ಅವರಿಗೆ ಕಳೆದ ಚುನಾವಣೆಯಲ್ಲಿ ಸೋಲುಣಿಸಿರುವ ರತ್ನಾಕರ್ ಗೆ ಈ ಬಾರಿ ಗೆಲುವು ಅಷ್ಟು ಸುಲಭವಾಗಿಲ್ಲ. ಕ್ಷೇತ್ರದಲ್ಲಿ ಕೆಜೆಪಿ ಅಭ್ಯರ್ಥಿಯಾಗಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಸ್ಪರ್ಧಿಸಲಿದ್ದಾರೆ ಎಂಬುದು ಖಚಿತ. ಜೆಡಿಎಸ್ ಮದನ್ ಎಂಬ ಅಭ್ಯರ್ಥಿಯನ್ನು ಸಿದ್ದವಾಗಿಟ್ಟಿದೆ. ಕ್ಷೇತ್ರದ ಈ ಬಾರಿಯ ಚುನಾವಣೆಯಲ್ಲಿ ಗೆಲುವಿಗಾಗಿ ತೀವ್ರ ಪೈಪೋಟಿ ಖಂಡಿತ.
ಸೊರಬ : ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಮಾಜಿ ಸಚಿವ ಹರತಾಳು ಹಾಲಪ್ಪ ಕೆಜೆಪಿ ಸೇರಿದ್ದಾರೆ. ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಪುತ್ರ ಕುಮಾರ್ ಬಂಗಾರಪ್ಪ ಕಾಂಗ್ರೆಸ್ ಅಭ್ಯರ್ಥಿಯಾಗಿ ಹಾಲಪ್ಪ ಅವರ ಎದುರಾಳಿ. ಕಳೆದ ಬಾರಿ ಸೋತಿದ್ದ ಕುಮಾರ್ ಬಂಗಾರಪ್ಪ ಈ ಬಾರಿ ಗೆಲುವಿನ ವಿಶ್ವಾಸದಲ್ಲಿದ್ದಾರೆ. ಇವರ ನಡುವೆ ಬಿಜೆಪಿ ಅಭ್ಯರ್ಥಿ ಯಾರು ಎಂಬುದು ಖಚಿತವಾಗಿಲ್ಲ.
ಭದ್ರಾವತಿ : ಕೇವಲ ವೈಯಕ್ತಿಕ ಹೋರಾಟ ನಡೆಯುವ ಭದ್ರಾವತಿ ಕ್ಷೇತ್ರ ಕೈವಶದಲ್ಲಿದೆ. ಹಾಲಿ ಶಾಸಕ ಬಿ.ಕೆ.ಸಂಗಮೇಶ್ ಮತ್ತು ಜೆಡಿಎಸ್ ನ ಅಪ್ಪಾಜಿ ಗೌಡ ನಡುವೆ ತ್ರೀವ್ರ ಸ್ಪರ್ಧೆ ಖಚಿತ. ಕಾಂಗ್ರೆಸ್ ಟಿಕೆಟ್ ಗೆ ಸ್ಥಳೀಯರಾದ ಡೈಲಾಗ್ ಕಿಂಗ್ ಸಿ.ಎಂ.ಇಬ್ರಾಹಿಂ ಪ್ರಯತ್ನ ನಡೆಸಿದ್ದಾರೆ. ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಠೇವಣಿ ಕಳೆದುಕೊಂಡಿದ್ದ ಆಯನೂರು ಮಂಜುನಾಥ್ ಗೆ ಬಿಜೆಪಿ ಮಣೆ ಹಾಕದಿರಲು ತೀರ್ಮಾನಿಸಿದೆ. ಹೊಸ ಮುಖಗಳ ಹುಡುಕಾಟ ನಡೆದಿದೆ ಯಾರಿಗೆ ಟಿಕೆಟ್ ನೀಡುತ್ತಾರೆ ಎಂಬುದು ಇನ್ನು ನಿಗೂಢ.
ಶಿವಮೊಗ್ಗ ಗ್ರಾಮಾಂತರ : 2008 ರ ಚುನಾವಣೆಯಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಹಾಲಿ ಬಿಜೆಪಿಯ ಕೆ.ಜಿ.ಕುಮಾರಸ್ವಾಮಿ ಶಾಸಕರು. ಇವರ ಮೇಲೆ ಯಾವುದೇ ಭ್ರಷ್ಟಾಚಾರದ ಆರೋಪಗಳಿಲ್ಲ. ಮುಂದಿನ ಚುನಾವಣೆಯಲ್ಲಿ ಇವರಿಗೆ ಕಮಲದ ಟಿಕೆಟ್ ಖಾತ್ರಿಯಾಗಿದೆ. ಉಳಿದ ಪಕ್ಷಗಳ ಸ್ಪರ್ಧಾಳುಗಳು ಯಾರು ? ಎನ್ನುವುದು ಶಿವಮೊಗ್ಗದ ಜನರಿಗೆ ಗೊತ್ತು.(ರಾಜ್ಯ ಚುನಾವಣಾ ವೇಳಾಪಟ್ಟಿ ನೋಡಿ)
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications