ಬಿಎಸ್ವೈ ಇನ್ನು ವಿಧಾನಸೌಧಕ್ಕೆ ಬರೋಲ್ಲ ಬಿಡಿ: ಈಶ್ವರಪ್ಪ

ನಗರ ಸಂಸ್ಥೆ ಚುನಾವಣೆಯಲ್ಲಿ ಕೆಜೆಪಿ ಎಲ್ಲೆಡೆ ಖಾತೆ ತೆರೆಯದಿದ್ದರೂ ಆ ಪಕ್ಷದ ನಾಯಕರು ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದ್ದಾರೆ ಎಂದು ಯಡಿಯೂರಪ್ಪ ಹೆಸರು ಹೇಳದೆಯೇ ಈಶ್ವರಪ್ಪ ಲೇವಡಿ ಮಾಡಿದ್ದಾರೆ.
ಕೆಜೆಪಿಯ ಶಕ್ತಿ ಏನೆಂಬುದು ಆ ಪಕ್ಷದ ನಾಯಕರ ಅರಿವಿಗೆ ಬಂದಿದೆ. ನನ್ನಿಂದಲೇ ಬಿಜೆಪಿ ಎನ್ನುವವರು ತಮ್ಮ ಕೆಜೆಪಿ ಸ್ಥಿತಿ ಬಗ್ಗೆ ಚಿಂತನೆ ನಡೆಸಬೇಕಾಗಿದೆ. ಕೆಜೆಪಿ ನಾಯಕರು ಮುಂದಿನ ಚುನಾವಣೆಯಲ್ಲಿ ತಮ್ಮ ಪಕ್ಷ ವಿಧಾನಸೌಧದ ಮೂರನೇ ಮಹಡಿಗೆ ಹೋಗುವುದು ನಿಶ್ಚಿತ ಎಂಬ ಹೇಳಿಕೆಯನ್ನು ನೀಡುತ್ತಿದ್ದರು. ಆದರೆ ಇದೀಗ ಆ ಪಕ್ಷದ ಶಕ್ತಿ ಏನೆಂಬುದು ಗೊತ್ತಾಗಿದೆ ಎಂದು ಮಾರ್ಮಿಕವಾಗಿ ನುಡಿದರು.
ವಿಧಾನಸಭಾ ಚುನಾವಣೆಯಲ್ಲಿ ಯಾರೊಂದಿಗೂ ಮೈತ್ರಿ ಮಾಡಿಕೊಳ್ಳದೆ, ಎಲ್ಲಾ ಕ್ಷೇತ್ರಗಳಲ್ಲೂ ಸ್ಪರ್ಧಿಸುತ್ತೇವೆ. ನಮ್ಮಲ್ಲಿ ಸಂಘಟನೆ ಇರುವುದರಿಂದ ಗೆಲ್ಲಲು ಕಾರ್ಯತಂತ್ರ ರೂಪಿಸುತ್ತೇವೆ. ಮಾ. 15, 16 ರಂದು ಬಿಜೆಪಿ ಸಂಸದರು, ಶಾಸಕರ ಹಾಗೂ ಜಿಲ್ಲಾ ಪ್ರಮುಖರ ಸಭೆಯನ್ನು ಬೆಂಗಳೂರಿನಲ್ಲಿ ನಡೆಸಲಾಗುತ್ತದೆ. ಅಲ್ಲಿ ಜಿಲ್ಲೆಗಳ ಅಭಿವೃದ್ಧಿ ಕಾರ್ಯ ಹಾಗೂ ಪಕ್ಷದ ಸಂಘಟನೆ ಬಗ್ಗೆ ಚರ್ಚೆ ನಡೆಸುತ್ತೇವೆ ಎಂದು ತಿಳಿಸಿದರು.
ಕಳೆದ 2007ರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ 1140 ಸ್ಥಾನ ಪಡೆದಿದ್ದರೆ, ಜೆಡಿಎಸ್1500 ಹಾಗೂ ಕಾಂಗ್ರೆಸ್ 1600 ಸ್ಥಾನ ಗಳಿಸಿತ್ತು. ಆದರೆ 2008ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರವನ್ನು ಪಡೆದಿದೆ. ಅದೇ ರೀತಿ ಈ ಬಾರಿಯ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಎರಡನೇ ಸ್ಥಾನದಲ್ಲಿದ್ದರೂ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಏರುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಅವರು ವಿಶ್ಲೇಷಿಸಿದ್ದಾರೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications