ಶಿವಮೊಗ್ಗ ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಹುಡುಕಾಟ

ಈಶ್ವರಪ್ಪ ಪ್ರತಿನಿಧಿಸುವ ಶಿವಮೊಗ್ಗ ನಗರ ಮತ್ತು ಆರಗ ಜ್ಞಾನೇಂದ್ರ ಸ್ಪರ್ಧಿಸುವ ತೀರ್ಥಹಳ್ಳಿ ಕ್ಷೇತ್ರ ಹೊರತು ಪಡಿಸಿದರೆ ಉಳಿದ ಕ್ಷೇತ್ರಗಳಲ್ಲಿ ಬಿಜೆಪಿಗೆ ಅಭ್ಯರ್ಥಿಗಳ ಕೊರತೆ ಕಾಡುತ್ತಿದೆ. ಏಳು ತಾಲೂಕುಗಳಿರುವ ಜಿಲ್ಲೆಯಲ್ಲಿ ಇದುವರೆಗೆ ಕೇವಲ ಇಬ್ಬರು ಅಭ್ಯರ್ಥಿಗಳನ್ನು ಮಾತ್ರ ಅಂತಿಮಗೊಳಿಸಲಾಗಿದೆ.
ಬಿಜೆಪಿ ಮತ್ತು ಕೆಜೆಪಿ ನಡುವಿನ ಸ್ಪರ್ಧೆ, ಅಭ್ಯರ್ಥಿಗಳಿಗೆ ಮುಂದಿನ ಚುನಾವಣೆ ಗೆಲ್ಲುವ ಶಕ್ತಿ ಇಲ್ಲದಿರುವುದು ಜಿಲ್ಲೆಯಲ್ಲಿ ಬಿಜೆಪಿಗೆ ಇಂತಹ ಪರಿಸ್ಥಿತಿ ತಂದೊಡ್ಡಿದೆ. ಜಿಲ್ಲೆಯಲ್ಲಿ ಹಾಲಿ ಐವರು ಬಿಜೆಪಿ ಶಾಸಕರಿದ್ದಾರೆ. ಅವರಲ್ಲಿ ಬಿ.ಎಸ್.ಯಡಿಯೂರಪ್ಪ, ಹರತಾಳು ಹಾಲಪ್ಪ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ.
ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಬಿಜೆಪಿ ಬಿಡುವುದಾಗಿ ಘೋಷಿಸಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಶಾಸಕ ಕೆ.ಜಿ.ಕುಮಾರಸ್ವಾಮಿ ಮುಂದಿನ ಚುನಾವಣೆ ಗೆಲ್ಲುವುದಿಲ್ಲ ಎಂಬುದು ಜಿಲ್ಲೆಯ ನಾಯಕರಿಗೆ ಖಾತ್ರಿಯಾಗಿದೆ. ಈ ಎಲ್ಲಾ ಕ್ಷೇತ್ರಗಳಿಗೆ ನೂತನ ಅಭ್ಯರ್ಥಿಗಳನ್ನು ಹುಡುಕುವ ಅನಿವಾರ್ಯತೆ ಎದುರಾಗಿದೆ.
ಭದ್ರಾವತಿ ತಾಲೂಕಿನಲ್ಲಿ ಕಳೆದ ಬಾರಿ ಸ್ಪರ್ಧಿಸಿದ್ದ ಆಯನೂರು ಮಂಜುನಾಥ್ ಠೇವಣಿ ಕಳೆದುಕೊಂಡಿದ್ದರು ಆದ್ದರಿಂದ ಈ ಬಾರಿ ಅವರಿಗೆ ಟಿಕೆಟ್ ನೀಡುವುದು ಅನುಮಾನವಾಗಿದೆ. ಜಿಲ್ಲೆಯ ಅಭ್ಯರ್ಥಿಗಳ ಕೊರತೆಯಿಂದ ಬಿಜೆಪಿ ಎರಡನೇ ಹಂತದ ನಾಯಕರಿಗೆ ಚುನಾವಣೆ ನಿಲ್ಲಲು ತಯಾರಾಗಿ ಎಂಬ ಸಂದೇಶವನ್ನು ಜಿಲ್ಲಾ ಬಿಜೆಪಿ ರವಾನಿಸಿದೆ.
ಕಳೆದ ಬಾರಿಯ ಚುನಾವಣೆಯಲ್ಲಿ ಯಡಿಯೂರಪ್ಪ ನೇತೃತ್ವವಿದ್ದು, ಕೇವಲ 5 ಸ್ಥಾನಗಳನ್ನು ಗಳಿಸಿದ್ದ ಬಿಜೆಪಿಗೆ ಈ ಬಾರಿ ಸ್ವಂತ ಬಲದ ಮೇಲೆ ಚುನಾವಣೆ ಎದುರಿಸುವುದು ಸಂಕಷ್ಟ ತಂದೊಡ್ಡಿದೆ. ಸಾಗರ ಕ್ಷೇತ್ರದಲ್ಲಿ ಬೇಳೂರು ಗೋಪಾಲಕೃಷ್ಣ ಪಕ್ಷ ತೊರೆದರೆ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಶುಭಾ ಕೃಷ್ಣಮೂರ್ತಿ ಅವರನ್ನು ಕಣಕ್ಕಿಳಿಸಲು ಬಿಜೆಪಿ ನಿರ್ಧರಿಸಿದೆ.
ಇದುವರೆಗೂ ಈಶ್ವರಪ್ಪ ಮತ್ತು ಆರಗ ಜ್ಞಾನೇಂದ್ರ ಅವರುಗಳಿಗೆ ಟಿಕೆಟ್ ದೊರಕುವುದು ಖಚಿತವಾಗಿದೆ. ಉಳಿದಂತೆ ಶಿಕಾರಿಪುರದಲ್ಲಿ ಯಡಿಯೂರಪ್ಪ ವಿರುದ್ಧ ಸ್ಪರ್ಧಿಸಬಲ್ಲ ಅಭ್ಯರ್ಥಿ, ಸೊರಬ, ಭದ್ರಾವತಿ ಮತ್ತು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಬಿಜೆಪಿ ಪಕ್ಷಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ವಿಧಾನಸಭೆ ಚುನಾವಣೆಗೆ ಎರಡು ತಿಂಗಳ ಕಾಲಾವಕಾಶವಿದ್ದು, ಬೆಜೆಪಿ ಸೂಕ್ತ ಅಭ್ಯರ್ಥಿಗಳ ಆಯ್ಕೆಗೆ ಕಸರತ್ತು ನಡೆಸಿದೆ. ಈ ಬಾರಿಯ ವಿಧಾನಸಭೆ ಚುನಾವಣೆ ಶಿವಮೊಗ್ಗ ಜಿಲ್ಲೆಯಲ್ಲಿ ಕೆಜೆಪಿ ಮತ್ತು ಬಿಜೆಪಿ ನಡುವಿನ ಸ್ಪರ್ಧೆಗೆ ಸಾಕ್ಷಿಯಾಗಲಿದ್ದು, ಬಿಜೆಪಿ ಯಾವ ತಂತ್ರ ಅನುಸರಿಸುತ್ತದೆ ಕಾದು ನೋಡಬೇಕು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ











Click it and Unblock the Notifications