ಕೇಂದ್ರಕ್ಕೆ ನೀಡಿದ್ದ ಬೆಂಬಲ ವಾಪಸ್ : ಡಿಎಂಕೆ

M Karunanidhi
ಚೆನ್ನೈ, ಮಾ.19 : ಕೇಂದ್ರ ಯುಪಿಎ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆಯುವುದಾಗಿ ಡಿಎಂಕೆ ವರಿಷ್ಠ ಎಂ.ಕರುಣಾನಿಧಿ ಘೋಷಿಸಿದ್ದಾರೆ. ಯುಪಿಎ ಸರ್ಕಾರಕ್ಕೆ ಬೆಂಬಲ ನೀಡಿರುವ ಡಿಎಂಕೆ ಪಕ್ಷದ ಸಂಸದರು ಇಂದು ಅಥವ ನಾಳೆ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಲಿದ್ದಾರೆ ಎಂದು ಕರುಣಾನಿಧಿ ಹೇಳಿದ್ದಾರೆ.

ಲೋಕಸಭೆಯಲ್ಲಿ ಡಿಎಂಕೆ ಪಕ್ಷಕ್ಕೆ ಸೇರಿದ 18 ಮಂದಿ ಸಂಸದರಿದ್ದಾರೆ, ಇವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದರೆ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರ ಯುಪಿಎ ಸರ್ಕಾರ ಇಕ್ಕಟ್ಟಿಗೆ ಸಿಲುಕುವ ಸಂಭವವಿದೆ.

ಮಂಗಳವಾರ ಬೆಳಗ್ಗೆ ಚೆನ್ನೈನಲ್ಲಿ ಪ್ರತಿಕಾಗೋಷ್ಠಿ ನಡೆಸಿದ ಡಿಎಂಕೆ ನಾಯಕ ಎಂ.ಕರುಣಾನಿಧಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಮಿತಿಯಲ್ಲಿ ಶ್ರೀಲಂಕಾ ವಿರುದ್ಧ ಮಂಡಿಸಲಿರುವ ಗೊತ್ತುವಳಿಯನ್ನು ಕೇಂದ್ರ ಸರ್ಕಾರ ಬೆಂಬಲಿಸುತ್ತಿಲ್ಲ.

ಆದ್ದರಿಂದ ಸರ್ಕಾರಕ್ಕೆ ನೀಡಿರುವ ಬೆಂಬಲ ವಾಪಸ್ ಪಡೆಯುವುದಾಗಿ ಘೋಷಿಸಿದರು. ಕೇಂದ್ರ ಸರ್ಕಾರದಲ್ಲಿನ ಡಿಎಂಕೆಯ ಐವರು ಸಚಿವರು ತಮ್ಮ ಸ್ಥಾನಗಳಿಗೆ ಶೀಘ್ರದಲ್ಲೇ ರಾಜೀನಾಮೆ ನೀಡಲಿದ್ದಾರೆ ಎಂದು ತಿಳಿಸಿದರು.

ಯುಪಿಎ ಸರ್ಕಾರಕ್ಕೆ ಡಿಎಂಕೆ ಬಾಹ್ಯ ಬೆಂಬಲವನ್ನು ನೀಡುವುದಿಲ್ಲ. ಯುಪಿಎ ಸರ್ಕಾರಕ್ಕೆ ಬೆಂಬಲ ನೀಡಿದರೆ ತಮಿಳುನಾಡಿನ ಹಿತಾಸಕ್ತಿಗೆ ಧಕ್ಕೆ ಉಂಟಾಗಲಿದೆ. ಕೇಂದ್ರ ಸರ್ಕಾರದಲ್ಲಿ ಡಿಎಂಕೆಯ ಒಬ್ಬರು ಕ್ಯಾಬಿನೆಟ್ ದರ್ಜೆ ಸಚಿವರು ಮತ್ತು ನಾಲ್ಕು ಮಂದಿ ರಾಜ್ಯ ಸಚಿವರಿದ್ದಾರೆ. ಎಲ್ಲರೂ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಲಿದ್ದಾರೆ ಎಂದು ಅವರು ಹೇಳಿದರು.

ಯುಪಿಎ ಸರ್ಕಾರಕ್ಕೆ ನೀಡಿರುವ ಬೆಂಬಲ ವಾಪಸ್ ಪಡೆಯದಂತೆ ಮಾ.18ರಂದು ಕೇಂದ್ರ ಸಚಿವರಾದ ಪಿ.ಚಿದಂಬರಂ, ಎ.ಕೆ.ಆಂಟನಿ ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದರು. ಆದರೆ, ಈ ಮಾತುಕತೆಯೂ ಒಮ್ಮತ ಮೂಡದ ಕಾರಣ ಮುರಿದು ಬಿದ್ದಿತ್ತು.

ಅಮೆರಿಕಾ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಮಿತಿಯಲ್ಲಿ ಶ್ರೀಲಂಕಾದಲ್ಲಿ ನಡೆದ ತಮಿಳರ ಹತ್ಯೆ ಖಂಡಿಸಿ, ಜಿನೀವಾದಲ್ಲಿ ಮಾರ್ಚ್ 22ರಂದು ನಿರ್ಣಯ ಕೈಗೊಳ್ಳಲಿದೆ. ಈ ನಿರ್ಣಯದ ಪರವಾಗಿ ಮತ ಹಾಕುವಂತೆ ಡಿಎಂಕೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿತ್ತು. ಕೇಂದ್ರ ಸರ್ಕಾರ ನಿರ್ಣಯ ಪರ ಅಥವ ವಿರುದ್ಧವಾಗಿ ಮತದಾನ ಮಾಡುವ ಬಗ್ಗೆ ಇನ್ನೂ ನಿರ್ಧಾರ ಪ್ರಕಟಿಸಿಲ್ಲ.

ಕಾಂಗ್ರೆಸ್ ನಾಯಕರ ತುರ್ತುಸಭೆ : ಡಿಎಂಕೆ ಯುಪಿಎ ಸರ್ಕಾರಕ್ಕೆ ನೀಡಿರುವ ಬಾಹ್ಯ ಬೆಂಬಲ ವಾಪಸ್ ಪಡೆಯುವ ನಿರ್ಧಾರ ಪ್ರಕಟಿಸಿದ್ದರಿಂದ ನವದೆಹಲಿಯಲ್ಲಿ ಕಾಂಗ್ರೆಸ್ ನಾಯಕರು ತುರ್ತು ಸಭೆ ಸೇರಿದ್ದಾರೆ.

ಸರ್ವ ಪಕ್ಷಗಳ ಜೊತೆ ಚರ್ಚೆ : ಶ್ರೀಲಂಕಾ ವಿರುದ್ಧ ಮಂಡಿಸುವ ನಿರ್ಣಯದ ಪರ ಅಥವ ವಿರುದ್ಧವಾಗಿ ಮತದಾನ ಮಾಡುವ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಸರ್ವಪಕ್ಷಗಳ ಜೊತೆ ಚರ್ಚಿಸಿ ಅಂತಿಮ ನಿರ್ಣಯ ಕೈಗೊಳ್ಳುವುದಾಗಿ ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಹೇಳಿದ್ದಾರೆ.

ಕೇಂದ್ರ ಸರ್ಕಾರದ ಅಂತ್ಯ ಕಾಲ : ಕೇಂದ್ರ ಯುಪಿಎ ಸರ್ಕಾರಕ್ಕೆ ಡಿಎಂಕೆ ನೀಡಿರುವ ಬೆಂಬಲ ವಾಪಸ್ ಪಡೆದ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ ಕುಮಾರ್, ಭ್ರಷ್ಟಾಚಾರದಲ್ಲಿ ಮುಳುಗಿರುವ ಕೇಂದ್ರ ಸರ್ಕಾರದ ಅಂತ್ಯದ ಕಾಲ ಸನ್ನಿಹಿತವಾಗಿದೆ ಎಂದು ಹೇಳಿದ್ದಾರೆ.

ಲೋಕಸಭೆಯಲ್ಲಿ ವಿವಿಧ ಪಕ್ಷಗಳ ಬಲಾಬಲ

ಕಾಂಗ್ರೆಸ್ -202
ಎನ್ ಸಿಪಿ -9
ಆರ್ ಎಲ್ ಡಿ - 5
ಡಿಎಂಕೆ - 18
ಇತರೆ - 16

ಬಾಹ್ಯ ಬೆಂಬಲ ನೀಡಿರುವ ಪಕ್ಷಗಳು

ಸಮಾಜವಾದಿ ಪಕ್ಷ - 22
ಬಿಎಸ್ ಪಿ - 21
ಆರ್ ಜೆಡಿ - 3
ಜೆಡಿಎಸ್ - 3

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+