ಮಚ್ಚಿನಿಂದ ಯುವಕನನ್ನು ಕೊಚ್ಚಿ ಬರ್ಬರ ಹತ್ಯೆ

ಕೆಜಿ ಹಳ್ಳಿಯ ನಾಗವಾರ ಮುಖ್ಯರಸ್ತೆಯಲ್ಲಿ ಮಂಗಳವಾರ ಬೆಳಗ್ಗೆ 10 ಗಂಟೆ ಸುಮಾರಿಗೆ 20 ವರ್ಷ ವಯಸ್ಸಿನ ಯಾಸಿನ್ ತನ್ನ ಅಣ್ಣನ ಜೊತೆ ಬಸ್ ಗಾಗಿ ಕಾಯುತ್ತಾ ನಿಂತಿದ್ದ. ಏಕಾಏಕಿ ನಾಲ್ವರು ದುಷ್ಕರ್ಮಿಗಳಿದ್ದ ತಂಡ ಮಚ್ಚು ಲಾಂಗುಗಳಿಂದ ಮನ ಬಂದಂತೆ ಯಾಸಿನ್ ಮೇಲೆ ಹಲ್ಲೆ ಮಾಡಿದೆ. ಯಾಸಿನ್ ಅಣ್ಣ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಇಬ್ಬರು ಯಾವುದೋ ಕೇಸ್ ಸಂಬಂಧವಾಗಿ ಕೋರ್ಟಿನ ಕಡೆಗೆ ಹೊರಟ್ಟಿದ್ದರು ಎಂದು ತಿಳಿದು ಬಂದಿದೆ.
ತೀವ್ರವಾಗಿ ಗಾಯಗೊಂಡ ಯಾಸಿನ್ ನನ್ನು ಅಂಬೇಡ್ಕರ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲು ಯತ್ನಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ತೀವ್ರ ರಕ್ತಸ್ರಾವದಿಂದ ಯಾಸಿನ್ ಮೃತಪಟ್ಟಿದ್ದಾನೆ. ಕೊಲೆಗೆ ಹಳೆ ವೈಷಮ್ಯ ಕಾರಣ ಇರಬಹುದು ಎಂದು ಕೆಜೆ ಹಳ್ಳಿ ಪೊಲೀಸರು ಶಂಕಿಸಿದ್ದಾರೆ.
ಇದಾದ ಕೆಲವೇ ಹೊತ್ತಿನಲ್ಲಿ ಡಿಜೆ ಹಳ್ಳಿಯ ಮುಖ್ಯರಸ್ತೆಯ ಎಲ್ ಆರ್ ಬಂಡೆ ಬಳಿ ಕೋಳಿ/ಮಟನ್ ಅಂಗಡಿ ಮಾಲೀಕ 24 ವರ್ಷದ ಇರ್ಫಾನ್ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ ಕೊಚ್ಚಿ ಹಾಕಿದ್ದಾರೆ. ಇರ್ಫಾನ್ ನನ್ನು ಕೂಡಾ ಅಂಬೇಡ್ಕರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಬದುಕುಳಿಯುವ ಸಾಧ್ಯತೆಯಿದೆ ಎಂದು ವೈದ್ಯರು ಹೇಳಿದ್ದಾರೆ.
ಎರಡು ಘಟನೆ ನಡೆದ ಸ್ಥಳಕ್ಕೆ ಡಿಸಿಪಿ ಕೃಷ್ಣ ಭಟ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೆಜಿ ಹಳ್ಳಿ ಹಾಗೂ ಡಿಜೆ ಹಳ್ಳಿಯಲ್ಲಿ ಉಂಟಾಗಿದ್ದ ಬಿಗುವಿನ ವಾತಾವರಣವನ್ನು ತಿಳಿಗೊಳಿಸಿದ್ದಾರೆ. ಎರಡು ಕಡೆ ಒಂದೇ ತಂಡ ಕೃತ್ಯ ಎಸಗಿರುವ ಸಾಧ್ಯತೆಯಿದೆ. ಅದೃಷ್ಟವಶಾತ್ ಇರ್ಫಾನ್ ಬದುಕುಳಿಯುವ ಸಾಧ್ಯತೆಯಿದ್ದು, ದುಷ್ಕರ್ಮಿಗಳ ಬಗ್ಗೆ ಸುಳಿವು ಸಿಕ್ಕ ಮೇಲೆ ಮುಂದಿನ ಕಾರ್ಯಾಚರಣೆ ನಡೆಸಲಾಗುತ್ತದೆ ಎಂದು ಡಿಸಿಪಿ ಕೃಷ್ಣ ಭಟ್ ಹೇಳಿದ್ದಾರೆ.












Click it and Unblock the Notifications