ಯುಪಿಎಸ್ಸಿ ಜನ ವಿರೋಧಿ ನಿಯಮಕ್ಕೆ ಬ್ರೇಕ್
ನವದೆಹಲಿ, ಮಾ.15: ಕೇಂದ್ರ ಲೋಕಸೇವಾ ಆಯೋಗ(ಯು.ಪಿ.ಎಸ್.ಸಿ) ಇತ್ತೀಚೆಗೆ ಯು.ಪಿ.ಎಸ್.ಸಿ ಪರೀಕ್ಷೆಯ ನಿಯಮಗಳಿಗೆ ಮಾಡಿರುವ ತಿದ್ದುಪಡಿಗಳು ಹಿಂದಿಯೇತರ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಇಚ್ಛಿಸುವ ಅಭ್ಯರ್ಥಿಗಳಿಗೆ ತೊಡಕು ಉಂಟಾಗಿತ್ತು. ನರೇಂದ್ರ ಮೋದಿ ಸೇರಿದಂತೆ ಪ್ರಮುಖ ನಾಯಕರು ಯುಪಿಎ ವಿರುದ್ಧ ತಿರುಗಿಬಿದ್ದ ಪರಿಣಾಮ ನಿಯಾಮಾವಳಿಗೆ ತಾತಾಲ್ಕಿಕ ಬ್ರೇಕ್ ಹಾಕಲಾಗಿದೆ.
ಪ್ರಾದೇಶಿಕ ಭಾಷೆ ಕಡೆಗಣಿಸಿರುವ ಯುಪಿಎ ಕ್ರಮವನ್ನು ವಿರೋಧಿಸಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರು ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪತ್ರ ಬರೆದಿದ್ದರು. ಡಿಎಂಕೆ, ಶಿವಸೇನೆ ಹಾಗೂ ಬಿಜೆಪಿ ಕೂಡಾ ಯುಪಿಎ ಕ್ರಮವನ್ನು ಖಂಡಿಸಿದ್ದವು. ಶುಕ್ರವಾರ ಸಂಸತ್ತಿನಲ್ಲಿ ಭಾರಿ ಕೋಲಾಹಲ ಉಂಟಾಗಿತ್ತು.

ಪ್ರತಿಭಟನೆಗೆ ಮಣಿದ ಕೇಂದ್ರ ಸರ್ಕಾರ ಕೇಂದ್ರ ಲೋಕಸೇವಾ ಆಯೋಗದ ನಿಯಮಾವಳಿಗಳಿಗೆ ತಡೆ ನೀಡಿದೆ. ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಕೇಂದ್ರ ಸಚಿವ ನಾರಾಯಣಸ್ವಾಮಿ ಅವರು, ಪರೀಕ್ಷಾ ವಿಧಾನ ಮತ್ತು ನೂತನ ನಿಯಾವಳಿಗಳ ಕುರಿತು ಉತ್ತರ ಭಾರತದ ರಾಜ್ಯಗಳು ಸೇರಿದಂತೆ ಹಲವು ರಾಜ್ಯಗಳು ವಿರೋಧ ವ್ಯಕ್ತಪಡಿಸುತ್ತಿವೆ. ಹೀಗಾಗಿ ನೂತನ ನಿಯಮಾವಳಿಗೆ ತಾತ್ಕಾಲಿಕ ತಡೆ ನೀಡಲಾಗುತ್ತಿದೆ ಎಂದರು
ಲೋಕಸಭೆಯಲ್ಲಿ ಯುಪಿಎಸ್‌ಸಿ ಪರೀಕ್ಷೆಯ ನೂತನ ನಿಯಮಾವಳಿಗಳ ಕುರಿತು ತೀವ್ರ ಆಕ್ಷೇಪ ವ್ಯಕ್ತವಾಯಿತು. ಎಸ್‌ಪಿ ಮತ್ತು ಆರ್‌ಜೆಡಿ ಪಕ್ಷಗಳು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಪ್ರತಿಭಟನೆಗೆ ಶಿವಸೇನಾ, ಡಿಎಂಕೆ, ಜೆಡಿ(ಯು) ಪಕ್ಷಗಳು ಕೈ ಜೋಡಿಸಿದ ಹಿನ್ನಲೆಯಲ್ಲಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿತು. ಸದಸ್ಯರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಂತೆಯೇ ಸ್ಪೀಕರ್ ಮೀರಾ ಕುಮಾರ್ ಅವರು ಸದನವನ್ನು ಒಂದು ಗಂಟೆ ಮುಂದೂಡಿದರು.
ಇಂಗ್ಲೀಶ್ ಅಥವಾ ಹಿಂದಿಯೇತರ ಭಾಷೆಯಲ್ಲಿ ಪರೀಕ್ಷೆ ಬರೆಯಲು ಕನಿಷ್ಟವೆಂದರೆ ಇಪ್ಪತ್ತೈದು ಅಭ್ಯರ್ಥಿಗಳು ಸಿದ್ದವಿದ್ದರೆ ಮಾತ್ರ ಆ ಭಾಷೆಯಲ್ಲಿ ಪರೀಕ್ಷೆಯನ್ನು ನಡೆಸಲಾಗುತ್ತದೆ. ಇಲ್ಲವಾದರೆ ಅಭ್ಯರ್ಥಿಗಳು ಅನಿವಾರ್ಯವಾಗಿ ಇಂಗ್ಲಿಶ್ ಅಥವಾ ಹಿಂದಿಯಲ್ಲೇ ಪರೀಕ್ಷೆ ಬರೆಯಬೇಕು. ಹಿಂದಿ ಭಾಷಿಕರಿಗೆ ಈ ನಿಯಮ ಅನ್ವಯಿಸದೇ ಇರುವುದು, ಭಾಷೆಯ ಆಧಾರದ ಮೇಲೆ ನಡೆಸಲಾಗುತ್ತಿರುವ ತಾರತಮ್ಯವನ್ನು ಎತ್ತಿ ತೋರಿಸುತ್ತಿತ್ತು.
ಭಾರತೀಯ ಭಾಷೆಗಳ ಜ್ಞಾನ ಪರೀಕ್ಷಿಸುವ ಪ್ರಶ್ನೆ ಪತ್ರಿಕೆಯನ್ನು ತೆಗೆದು ಹಾಕಲಾಗಿದೆ. ಐಚ್ಛಿಕ ವಿಷಯಗಳನ್ನು 2 ರಿಂದ 1 ಪಠ್ಯ ವಿಷಯಕ್ಕೆ ಇಳಿಸಲಾಗಿದೆ. ಸಾಮಾನ್ಯ ಪಠ್ಯ ವಿಷಯಗಳನ್ನು ನಾಲ್ಕಕ್ಕೇರಿಸಲಾಗಿದೆ. ಪ್ರತಿ ಪೇಪರ್ 250 ಅಂಕಗಳನ್ನು ಹೊಂದಿರುತ್ತದೆ. ಒಂದು ಐಚ್ಛಿಕ ವಿಷಯ ಎರಡು ಪೇಪರ್ ಹೊಂದಿದ್ದು ಒಟ್ಟು 500 ಅಂಕಗಳಿರುತ್ತದೆ. ಇಂಗ್ಲೀಷ್ 100 ಅಂಕಗಳ ಪರೀಕ್ಷೆಯಾಗಿದ್ದು, ಪ್ರಬಂಧ ರಚನೆ 200 ಅಂಕಗಳ ಪರೀಕ್ಷೆಯಾಗಿದೆ.












Click it and Unblock the Notifications