ನಾನೇ ಮುಖ್ಯಮಂತ್ರಿ ಘೋಷಣೆ ಬೇಡ : ಪೂಜಾರಿ

ಚುನಾವಣೆಗೂ ಮೊದಲೇ ನಾನೇ ಮುಖ್ಯಮಂತ್ರಿ ಎಂದು ಹೇಳಿಕೆ ನೀಡಬೇಡಿ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ಧನ ಪೂಜಾರಿ ಕಾಂಗ್ರೆಸ್ಸಿಗರಿಗೆ ಕಿವಿಮಾತು ಹೇಳಿದ್ದಾರೆ.
ಉಡುಪಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಜನಾರ್ಧನ ಪೂಜಾರಿ, ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಕಾಂಗ್ರೆಸ್ ಸಾಧನೆ ನೋಡಿದ ಬೆಂಗಳೂರಿನ ಕೆಲವು ನಾಯಕರು, ನಾನೇ ಮುಂದಿನ ಮುಖ್ಯಮಂತ್ರಿ ಎಂದು ಹೇಳಿಕೆ ನೀಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಮೊದಲು ಚುನಾವಣೆ ಘೋಷಣೆಯಾಗಲಿ ನಂತರ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಿ ಸ್ಪಷ್ಟ ಬಹುಮತದಿಂದ ಗೆಲುವು ಸಾಧಿಸಬೇಕು. ಗೆಲುವಿನ ಬಳಿಕ ಮುಖ್ಯಮಂತ್ರಿಯಾರು? ಎಂದು ನಿರ್ಧರಿಸಬೇಕು. ಆದರೆ, ಕೆಲವು ನಾಯಕರು ನಾನೇ ಮುಖ್ಯಮಂತ್ರಿ ಎಂದು ಹೊಸ ಪ್ಯಾಂಟು-ಸೂಟು ಹೊಲೆಸಿ ತಯಾರಾಗುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಚುನಾವಣೆಗೆ ಮೊದಲು ಮುಖ್ಯಮಂತ್ರಿ ಅಭ್ಯರ್ಥಿಯಾರು ಎಂದು ಘೋಷಿಸುವ ಸಂಪ್ರದಾಯ ಕಾಂಗ್ರೆಸ್ ಪಕ್ಷದಲ್ಲಿಲ್ಲ. ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಖ್ಯಮಂತ್ರಿ ಯಾರು ಎಂದು ಚರ್ಚಿಸಿ, ಹೈಕಮಾಂಡ್ ಒಪ್ಪಿಗೆ ಪಡೆದು ನಂತರ ನಿರ್ಧರಿಸುತ್ತೇವೆ.
ಪಕ್ಷದ ತತ್ವ ಸಿದ್ಧಾಂತ ತಿಳಿಯದೇ ಅನೇಕರು ನಾನೇ ಮುಖ್ಯಮಂತ್ರಿ ಎಂದು ಹೇಳಿಕೆ ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದರು. ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಮೈಸೂರಿನಲ್ಲಿ ನಾನೇ ಮುಂದಿನ ಸಿಎಂ ಎಂದು ಹೇಳಿಕೆ ನೀಡಿದ್ದರು.
ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ನನಗೂ ಮುಖ್ಯಮಂತ್ರಿಯಾಗುವ ಕಸಸಿದೆ ಎಂದು ಇತ್ತೀಚೆಗೆ ಹೇಳಿಕೆ ನೀಡಿದ್ದರು. ಇದರಿಂದ ಕೋಪಗೊಂಡಿರುವ ಜನಾರ್ಧನ ಪೂಜಾರಿ, ಬೆಂಗಳೂರು ನಾಯಕರೆ ನಾನೇ ಮುಖ್ಯಮಂತ್ರಿ ಎಂದು ಹೇಳಿಕೆ ನೀಡಬೇಡಿ ಎಂದು ಟಾಂಗ್ ನೀಡಿದ್ದಾರೆ.
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಪೂರ್ವ ಯಶಸ್ಸುಗಳಿಸಿದೆ. ಇದರಿಂದ ಪ್ರೇರಿತರಾದ ಜನಾರ್ಧನ ಪೂಜಾರಿ ಇಂತಹ ಹೇಳಿಕೆ ನೀಡಿದರೋ? ಅಥವ ಕಾಂಗ್ರೆಸ್ ನಾಯಕರಿಗೆ ಬುದ್ದಿವಾದ ಹೇಳಿದರೋ ಎಂಬುದು ಕುತೂಹಲ ಮೂಡಿಸಿದೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications