ಏಪ್ರಿಲ್ ನಲ್ಲಿ ಬೆಂಗಳೂರಿಗೆ ಮೋದಿ ಬರ್ತಾರೆ

ಮಂಗಳವಾರ ಸಿಎಂ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ, ಸ್ಥಳೀಯ ಸಂಸ್ಥೆಗಳ ಫಲಿತಾಂಶದ ಕುರಿತು ನಡೆದ ಆತ್ಮಾವಲೋಕನ ಸಭೆಯ ಬಳಿಕ ನರೇಂದ್ರ ಮೋದಿಯವರನ್ನು ಕರೆಸುವ ಕುರಿತು ಅಂತಿಮ ನಿರ್ಣಯ ಕೈಗೊಳ್ಳಲಾಗಿದೆ.
ಏಪ್ರಿಲ್ ಮೊದಲ ವಾರದಲ್ಲಿ ಬೆಂಗಳೂರಿಗೆ ಆಗಮಿಸಲು ನರೇಂದ್ರ ಮೋದಿ ಈಗಾಗಲೇ ಸಮಯ ನೀಡಿದ್ದಾರೆ ಎನ್ನುತ್ತಿವೆ ಪಕ್ಷದ ಉನ್ನತ ಮೂಲಗಳು. ಆದರೆ, ಸಮಾವೇಶದ ದಿನಾಂಕ, ಸ್ಥಳ ಮಾತ್ರ ನಿಗದಿಯಾಗಿಲ್ಲ. ಇಂದು ಅಥವ ನಾಳೆ ಬಿಜೆಪಿ ಕಚೇರಿಯಲ್ಲಿ ನಡೆಯುವ ಸಭೆಯಲ್ಲಿ ಈ ಬಗ್ಗೆ ಅಂತಿಮ ಘೋಷಣೆ ಹೊರಬೀಳುವ ಸಂಭವವಿದೆ.
ಮಾ.16 ಮತ್ತು 17ರಂದು ವಿಧಾನಸಭೆ ಚುನಾವಣೆ ತಯಾರಿ ಸಭೆ ನಡೆಯಲಿದ್ದು, ಅದರಲ್ಲಿ ಸಮಾವೇಶವನ್ನು ಯಶಸ್ವಿಯಾಗಿ ಸಂಘಟಿಸುವ ಕುರಿತು ವಿವರವಾದ ಚರ್ಚೆ ನಡೆಯುಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಚುನಾವಣೆ ತಯಾರಿ ಸಭೆಗೂ ಮುನ್ನವೆ ಬಿಜೆಪಿಯ ರಾಜ್ಯಾಧ್ಯಕ್ಷರ ಹೆಸರು ಘೋಷಣೆಯಾಗುವ ಸಾಧ್ಯತೆ ಇದೆ.
ರಥಯಾತ್ರೆ ದಿನಾಂಕ ನಿಗದಿ : ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ರಾಜ್ಯದ 224 ಕ್ಷೇತ್ರಗಳಲ್ಲೂ ಸರ್ಕಾರದ ಸಾಧನೆಯನ್ನು ಜನರಿಗೆ ತಿಳಿಸಲು ರಥಯಾತ್ರೆ ನಡೆಸುವ ಬಗ್ಗೆ ಹಿಂದೆ ಚರ್ಚಿಸಲಾಗಿತ್ತು. ಮಾ.16ರಂದು ನಡೆಯುವ ಚುನಾವಣಾ ಸಮಿತಿ ಸಭೆಯಲ್ಲಿ ರಥಯಾತ್ರೆಯ ಅಂತಿಮ ರೂಪುರೇಷೆ ಮತ್ತು ದಿನಾಂಕಗಳು ಪ್ರಕಟಗೊಳ್ಳುವ ನಿರೀಕ್ಷೆ ಇದೆ.
ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ಬಗ್ಗೆ ಚರ್ಚಿಸಲು ಬೆಂಗಳೂರಿಗೆ ಆಗಮಿಸಿದ್ದ ಬಿಜೆಪಿ ವರಿಷ್ಠ ಅರುಣ್ ಜೇಟ್ಲಿ, ರಾಜೀನಾಮೆ ನೀಡಿ ಕೆಜೆಪಿ ಸೇರಿರುವ ಶಾಸಕರ ಸ್ಥಾನಗಳಿಗೆ ಸೂಕ್ತ ಅಭ್ಯರ್ಥಿಗಳನ್ನು ಹುಡುಕುವಂತೆ ರಾಜ್ಯದ ನಾಯಕರಿಗೆ ಸೂಚಿಸಿದ್ದು, ಚುನಾವಣಾ ಸಮಿತಿ ಸಭೆಯಲ್ಲಿ ಕೆಲವು ಅಭ್ಯರ್ಥಿಗಳ ಪಟ್ಟಿ ತಯಾರಾಗುವ ಸಂಭವವಿದೆ.
ಒಟ್ಟಾರೆ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದ ಕಹಿ ನೆನಪನ್ನು ಮರೆಯಲು ಬಿಜೆಪಿ ತಕ್ಷಣ ವಿಧಾನಸಭೆ ಚುನಾವಣೆ ಸಿದ್ಧತೆ ಆರಂಭಿಸಿದೆ. ಮುಂದಿನ ಚುನಾವಣೆಯನ್ನು ಗೆಲ್ಲುವ ಉತ್ಸಾಹದಲ್ಲಿರುವ ಬಿಜೆಪಿ ಚುನಾವಣೆಗೆ ಎಂತಹ ಕಾರ್ಯತಂತ್ರ ರೂಪಿಸುತ್ತದೆ ಕಾದು ನೋಡಬೇಕು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications