ಸ್ಥಳೀಯವಾಗಿ ಅನ್ಯ ಪಕ್ಷ ಜತೆ ಕೈಜೋಡಿಸಬೇಡಿ

ಆನೆ ಬಲದ ಪರಮೇಶಿಗೆ ಫುಲ್ ಮಾರ್ಕ್ಸ್:
ಹೊಸ ಹುಮ್ಮಸ್ಸು/ಉತ್ಸಾಹದೊಂದಿಗೆ ಸ್ಥಳೀಯ ಫಲಿತಾಂಶವನ್ನು ಹೆಗಲಿಗೇರಿಸಿಕೊಂಡು ಮಂಗಳವಾರ ಸಂಜೆಯೇ ದೆಹಲಿ ತಲುಪಿಕೊಂಡು, ಹೈಕಮಾಂಡ್ ಸಮಕ್ಷಮದಲ್ಲಿ ಎಲ್ಲ ವಿವರ/ಪ್ರವರ ಒಪ್ಪಿಸಿದ ಕೆಪಿಸಿಸಿ ಅಧ್ಯಕ್ಷ ಡಾ ಪರಮೇಶ್ವರ್ ಬಗ್ಗೆ ಹೈಕಮಾಂಡ್ ಮೆಚ್ಚುಗೆ ಸೂಚಿಸಿದೆ.
ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಶೇಕಡಾವಾರು ಮತಗಳಿಕೆಯಲ್ಲಿ ಕಾಂಗ್ರೆಸ್ ಅಗ್ರಸ್ಥಾನ ಪಡೆದುಕೊಂಡಿದೆ. ಇದು ಪಕ್ಷದ ಪರವಾಗಿದ್ದರೆ, ಕೇಂದ್ರದ ಹಾಲಿ ಮಂತ್ರಿಗಳೂ ಸೇರಿದಂತೆ ಪ್ರಮುಖ ನಾಯಕರುಗಳು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ನಿರೀಕ್ಷಿತ ಸಾಧನೆ ಮಾಡದಿರುವುದು ಡಾ. ಪರಮೇಶ್ವರ್ ಅವರಿಗೆ ಹಿತಕರವೆನಿಸಿದೆ.
'ಅದ್ಸರಿ, ಕೆಲವು ಕಡೆ ಅನ್ಯ ಪಕ್ಷಗಳ ಜತೆ ಕೈ ಜೋಡಿಸುವ ಅನಿವಾರ್ಯತೆ ಎದುರಾಗಿದೆ' ಎಂದು ಡಾ ಪರಮೇಶ್ವರ್ ಅವರು ರಾಜ್ಯದ ಉಸ್ತುವಾರಿ ಹೊತ್ತಿರುವ ಮಧುಸೂದನ ಮಿಸ್ತ್ರಿ ಅವರನ್ನು ಕೇಳಲಾಗಿ... 'ತೆಪ್ಪಗೆ ಜನ ಏನು ಹೇಳಿದ್ದಾರೋ ಅಷ್ಟನ್ನೇ ಮಾಡಿ. ಸ್ಥಳೀಯವಾಗಿ ಯಾರು ಜತೆಯೂ ಕೈಜೋಡಿಸುವ ಉಮೇದು ಬೇಡ. ಸಿಂಪಲ್ ಮೆಜಾರಿಟಿಯೂ ಸಿಕ್ಕಿಲ್ಲ ಎನ್ನುವ ಕಡೆ ಸಿಂಪಲ್ಲಾಗಿ ಪ್ರತಿಪಕ್ಷದ ಸಾಲಿನಲ್ಲಿಯೇ ಕುಳಿತುಕೊಳ್ಳಿ' ಎಂದು ಹೇಳಿಕಳಿಸಿದ್ದಾರೆ.
208 ಸ್ಥಳೀಯ ಸಂಸ್ಥೆ ಚುನಾವಣೆಗಳ ಪೈಕಿ 96 ಸಂಸ್ಥೆಗಳ ಫಲಿತಾಂಶ ಅತಂತ್ರವಾಗಿದೆ. ಇದಲ್ಲದೆ 778 ಸ್ಥಾನಗಳಲ್ಲಿ ಪಕ್ಷೇತರರು ಗೆದ್ದುಕೊಂಡಿದ್ದಾರೆ. ಇದು ಕಾಂಗ್ರೆಸ್ಸಿಗೆ ಸ್ವಲ್ಪ ಇರುಸುಮುರುಸು ತಂದಿದೆ. ಅಧಿಕಾರ ಹಿಡಿಯಲು ಅನ್ಯ ಪಕ್ಷಗಳತ್ತ ಕೈ ಚಾಚಬೇಕಿದೆ.
ಮೂಲಗಳ ಪ್ರಕಾರ ಪರಮೇಶ್ವರ್ ಅವರು ಇಂದು ಬುಧವಾರ ಸಂಜೆ ವೇಳೆಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಅವರನ್ನು ಭೇಟಿ ಮಾಡುವ ಸಾಧ್ಯತೆಯಿದೆ. ಆಗ ಮುಂದೆ ವಿಧಾಸನಭೆ ಚುನಾವಣೆ ಅಂಗವಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅವರ ಸಲಹೆ ಪಡೆಯಲಿದ್ದಾರೆ ಎನ್ನಲಾಗಿದೆ.
ಬೇಲಿ ಮೇಲಿರುವವರ ಭವಿಷ್ಯವೇನು?
ಬಿಜೆಪಿಯ ಮಾಜಿ ಸಚಿವರು, ಶಾಸಕರು ಹಾಗೂ ಪಕ್ಷೇತರರು ಸೇರಿದಂತೆ ಕಾಂಗ್ರೆಸ್ ಸೇರಲು ತುದಿಗಾಲ ಮೇಲೆ ನಿಂತಿರುವ 18 ಮಂದಿಯು ಕಾಂಗ್ರೆಸ್ ಪಕ್ಷ ಸೇರ್ಪಡೆ ಕುರಿತು ಪರಮೇಶ್ವರ್ ಹೈಕಮಾಂಡ್ ಜತೆ ಚರ್ಚೆ ನಡೆಸಲಿದ್ದಾರೆ. ಕೆಪಿಸಿಸಿ ಕಳುಹಿಸಿದ್ದ ಈ 18 ಮಂದಿಯ ಪಟ್ಟಿಗೆ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ತಡೆಯೊಡ್ಡಿದ್ದಾರೆ ಎಂಬುದು ಗಮನಾರ್ಹ.
ಒಟ್ಟಿನಲ್ಲಿ, ಹೊಸ ಅಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಇತರೆ ಪಕ್ಷಗಳ ಶಾಸಕರಿಗೆ ಮಣೆ ಹಾಕುತ್ತದೋ, ಕೈ ಬಿಡುತ್ತದೋ ಎಂಬುದು ಕುತೂಹಲಕಾರಿಯಾಗಿದೆ.












Click it and Unblock the Notifications