ಉಗ್ರರ ದಾಳಿ : ಮಂಡ್ಯದ ಯೋಧ ಸೇರಿ ಐವರ ಹತ್ಯೆ

ಶ್ರೀನಗರದ ಬೇಮಿನಾ ಪ್ರದೇಶದಲ್ಲಿರುವ ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (ಸಿಆರ್‌ಪಿಎಫ್) ಮೇಲೆ ಉಗ್ರರ ತಂಡ ಗುಂಡಿನ ದಾಳಿ ನಡೆಸಿದೆ. ಉಗ್ರರು ಕ್ರಿಕೆಟ್ ಕಿಟ್ ನಲ್ಲಿ ಶಸ್ತ್ರಾಸ್ತ್ರ ಅಡಗಿಸಿಟ್ಟುಕೊಂಡಿದ್ದರು ಎಂದು ತಿಳಿದುಬಂದಿದೆ. ಭದ್ರತಾ ಸಿಬ್ಬಂದಿಯ ಮೇಲೆ ಗ್ರೇನೇಡ್ ಗಳನ್ನೂ ಎಸೆದಿದ್ದಾರೆ. ಈ ದಾಳಿಯಲ್ಲಿ 7 ಜನ ಭಾರತೀಯ ಭದ್ರತಾ ಸಿಬ್ಬಂದಿಗಳು ಗಾಯಗೊಂಡಿದ್ದಾರೆ.
ಈ ಪ್ರದೇಶದಲ್ಲಿ ಪೊಲೀಸ್ ಪಬ್ಲಿಕ್ ಶಾಲೆ ಸೇರಿದಂತೆ ಅನೇಕ ಪ್ರಮುಖ ಭದ್ರತಾ ತರಬೇತಿ ಸಂಸ್ಥೆಗಳು ನೆಲೆಯೂರಿವೆ. ದಾಳಿ ನಡೆದ ಸಮಯದಲ್ಲಿ ಶಾಲೆಯಲ್ಲಿ ಮಕ್ಕಳಿರಲಿಲ್ಲ. ಆದರೆ, ಹೊರಗಡೆ ಕೆಲ ಮಕ್ಕಳು ಆಟವಾಡುತ್ತಿದ್ದರು. ಸುಮಾರು 20 ನಿಮಿಷಗಳ ಕಾಲ ನಡೆದ ದಾಳಿಯಲ್ಲಿ ಯಾವುದೇ ಮಕ್ಕಳು ಗಾಯಗೊಂಡಿಲ್ಲ.
ಮಂಡ್ಯದ ಯೋಧನ ಹತ್ಯೆ : ಈ ಹತ್ಯಾಕಾಂಡದಲ್ಲಿ ಮಂಡ್ಯ ಮೂಲದ ಯೋಧ ಸತೀಶ್ ಎಂಬುವವರು ಹತರಾಗಿದ್ದಾರೆ ಎಂದು ತಿಳಿದುಬಂದಿದೆ. ವೀರಮರಣವನ್ನು ಅಪ್ಪಿರುವ ಯೋಧ ಸತೀಶ್ ಅವರು ಕೆಆರ್ ಪೇಟೆಯ ನಿವಾಸಿಯಾಗಿರುವ ನಾರಾಯಣ ಶೆಟ್ಟಿ ಮತ್ತು ಸಾವಿತ್ರಮ್ಮ ಅವರ ಮಗ.
ಕಳೆದ ಕೆಲ ವರ್ಷಗಳಲ್ಲಿ ಭಾರತೀಯ ಭದ್ರತಾ ನೆಲೆಯ ಮೇಲೆ ನಡೆದ ಮೊದಲ ಪ್ರಮುಖ ಭಯೋತ್ಪಾದಕ ದಾಳಿ ಇದಾಗಿದೆ. ಕಳೆದ ಬಾರಿ 2010ರಲ್ಲಿ ಶ್ರೀನಗರದ ಲಾಲ್ ಚೌಕ್‌ನಲ್ಲಿರುವ ಸಿಆರ್‌ಪಿಎಫ್ ಕ್ಯಾಂಪ್ ಮೇಲೆ ಉಗ್ರರು ದಾಳಿ ನಡೆಸಿದ್ದರು. ಇಂದು ನಡೆದ ದಾಳಿಯ ಹೊಣೆಯನ್ನು ಯಾವ ಭಯೋತ್ಪಾದಕ ಸಂಘಟನೆ ಹೊತ್ತಿಲ್ಲ.
ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಈ ಕುರಿತು ವಿಧಾನಸಭೆಯಲ್ಲಿ, ಉಗ್ರರು ನಡೆಸಿದ ಆತ್ಮಾಹುತಿ ದಾಳಿಯಲ್ಲಿ 5 ಜನ ಸಿಆರ್‌ಪಿಎಫ್ ಭದ್ರತಾ ಸಿಬ್ಬಂದಿಗಳು ಹತ್ಯೆಯಾಗಿ, 4ರಿಂದ 5 ಜನ ಜವಾನರು ಗಾಯಗೊಂಡಿರುವುದನ್ನು ದೃಢಪಡಿಸಿ ಹೇಳಿಕೆ ನೀಡಿದ್ದಾರೆ.
ಪಾಕಿಸ್ತಾನದ ಕೈವಾಡ? : ಕ್ರಿಕೆಟ್ ದಿರಿಸಿನಲ್ಲಿ ಬಂದು ಐವರು ಜವಾನರನ್ನು ಹತ್ಯೆಗೈದ ಉಗ್ರರು ಪಾಕಿಸ್ತಾನದವರು ಇರಬಹುದು ಎಂದು ಕೇಂದ್ರ ಗೃಹ ಕಾರ್ಯದರ್ಶಿ ಆರ್.ಕೆ. ಸಿಂಗ್ ಅವರು ಅಭಿಪ್ರಾಯಪಟ್ಟಿದ್ದಾರೆ. ಗಡಿದಾಟಿ ಬಂದಿರುವ ಉಗ್ರರು ಮೇಲ್ನೋಟಕ್ಕೆ ಪಾಕಿಸ್ತಾನದವರೆಂದು ಗೊತ್ತಾಗಿದೆ ಎಂದು ಅವರು ಹೇಳಿದ್ದಾರೆ.












Click it and Unblock the Notifications