ಸಚಿವ ಸಂಪುಟ ಸಭೆಯ ಮುಖ್ಯಾಂಶಗಳು

ಮಂಗಳವಾರ ಸಂಜೆ ವಿಧಾನಸೌಧಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ, ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಬಜೆಟ್ ನಲ್ಲಿ ಘೋಷಿಸಿದ್ದ ಕಡು ಬಡವರಿಗೆ 2 ರೂ.ಗೆ ಅಕ್ಕಿ ನೀಡುವ ಯೋಜನೆ ಈ ತಿಂಗಳಿನಿಂದಲೇ ಜಾರಿಗೆ ಬರುವಂತೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿತು. ಈ ಯೋಜನೆಯಿಂದ ರಾಜ್ಯದ ಸುಮಾರು 88.5 ಲಕ್ಷ ಕುಟುಂಬಗಳಿಗೆ ಅನುಕೂಲವಾಗಲಿದೆ.
ಸಚಿವ ಸಂಪುಟ ಸಭೆಯ ನಂತರ ಪತ್ರಿಕಾಗೋಷ್ಠಿ ನಡೆಸಿದ ಪ್ರಾಧಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ, ರಾಜ್ಯದ 38 ಸಾವಿರ ಮುಜರಾಯಿ ದೇವಸ್ಥಾನಗಳಿಗೆ ನೀಡಲಾಗುತ್ತಿದ್ದ ವಾರ್ಷಿಕ ತಸ್ತಿಕ್ ಹಣವನ್ನು 12ರಿಂದ 24 ಸಾವಿರ ರೂ.ಗಳಿಗೆ ಏರಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ. ಸಂಪುಟ ಸಭೆಯಲ್ಲಿ ಘೋಷಿಸಲಾದ ನೂತನ ಯೋಜನೆಗಳನ್ನು ಜಾರಿಗೊಳಿಸಲು ಸರ್ಕಾರದ ಬೊಕ್ಕಸಕ್ಕೆ ಒಟ್ಟು 161 ಕೋಟಿ ಹೆಚ್ಚುವರಿ ನಷ್ಟ ಉಂಟಾಗಲಿದೆ.
ಸಂಪುಟದ ಪ್ರಮುಖ ತೀರ್ಮಾನಗಳು...
* ಬೆಂಗಳೂರಿನಲ್ಲಿ 25.5ಕೋಟಿ ವೆಚ್ಚದಲ್ಲಿ ಕಿತ್ತೂರು ಚೆನ್ನಮ್ಮ ಮೇಲ್ಸೆತುವೆ ನಿರ್ಮಾಣ
* ಮೈಸೂರು ಹೊರವರ್ತುಲ ರಸ್ತೆಯನ್ನು 6 ಪಥದ ರಸ್ತೆಯಾಗಿ ಪರಿವರ್ತನೆ
* ಗ್ರಾಮ ಪಂಚಾಯಿತಿಗಳ ಮಟ್ಟದ ಗ್ರಂಥಾಲಯಗಳ ಮೇಲ್ವಿಚಾರಕರ ವೇತನ 2,500 ರಿಂದ 5,500 ರೂ.ಗೆ ಏರಿಕೆ.
ರಾಜ್ಯದಲ್ಲಿ ಒಟ್ಟು 6815 ಮೇಲ್ವಿಚಾರಕರಿದ್ದಾರೆ.
* ಚಿಕ್ಕಮಗಳೂರಿನಲ್ಲಿ ವೈದಯಕೀಯ ಕಾಲೇಜು, ಆಯನೂರು ಮತ್ತು ವಿರಾಜಪೇಟೆಯಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ನಿರ್ಮಾಣ
* ಚಿಕ್ಕಬಳ್ಳಾಪುರ ಪಟ್ಟಣದಲ್ಲಿ ರೈಲ್ವೆ ಜಾಗದ ಅನಧಿಕೃತ ಒತ್ತುವರಿ ತೆರವುಗೊಳಿಸಿ, ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸುವುದು.
* ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗಾಗಿ 8 ಮುರಾರ್ಜಿ ದೇಸಾಯಿ ವಸತಿ ಶಾಲೆಗಳ ಸ್ಥಾಪನೆ. 67 ಕೋಟಿ ರೂ.ವೆಚ್ಚ.
* ಮಡಿಕೇರಿಯ ಜನರಲ್ ತಿಮ್ಮಯ್ಯ ಅವರ ಮನೆಯನ್ನು 5.5 ಕೋಟಿ ರೂ.ವೆಚ್ಚದಲ್ಲಿ ಸ್ಮಾರಕವಾಗಿ ಪರಿವರ್ತಿಸುವುದು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications