ಐಸಿಎಸ್ಇ ಇಂಗ್ಲೀಷ್ ಪರೀಕ್ಷೆ ಪೇಪರ್ ಲೀಕ್

ಇಂಡಿಯನ್ ಕೌನ್ಸಿಲ್ ಆಫ್ ಸೆಕಂಡರಿ ಎಜುಕೇಷನ್ ನ ಮುಖ್ಯ ಕಾರ್ಯನಿರ್ವಾಹಕ ಹಾಗೂ ಕಾರ್ಯದರ್ಶಿ ಜೆರ್ರಿ ಆರಾಥೂನ್ ಅವರು ಪೇಪರ್ ಲೀಕ್ ಆಗಿರುವುದನ್ನು ಖಚಿತಪಡಿಸಿದ್ದು, ಲಕ್ನೋ ಶಾಲೆಯ ಪ್ರಿನ್ಸಿಪಾಲ್ ಹಾಗೂ ಪರೀಕ್ಷೆ ಮೇಲ್ವಿಚಾರಕರನ್ನು ದೂಷಿಸಿದ್ದಾರೆ. ಪರೀಕ್ಷೆ ಮುಂದೂಡಲ್ಪಟ್ಟಿದ್ದು ಮಾ.16,2013ರಂದು ನಡೆಸಲಾಗುತ್ತದೆ ಎಂದಿದ್ದಾರೆ.
ಆಗಿದ್ದೇನು?: ಲಕ್ನೋದ ಇಂದಿರಾನಗರದಲ್ಲಿರುವ ಸೈಂಟ್ ಡೊಮೆನಿಕ್ ಸಾವಿಯೋ ಸ್ಕೂಲ್ ನಲ್ಲಿ ಇಂಗ್ಲೀಷ್ ಪರೀಕ್ಷೆಗೂ ಮುನ್ನ ನಡೆದ ಇಂಗ್ಲೀಷ್ -1 ಪರೀಕ್ಷೆ ದಿನದಂದು ಇಂಗ್ಲೀಷ್ ಪತ್ರಿಕೆ ಬಂಡಲ್ ತೆಗೆದುಕೊಂಡು ಹೋಗಿದ್ದ ಪರೀಕ್ಷೆ ಮೇಲ್ವಿಚಾರಕರು, ಇಂಗ್ಲೀಷ್ -II ಪತ್ರಿಕೆಯನ್ನು ಹಂಚಿದ್ದಾರೆ.
ವೇಳಾಪಟ್ಟಿ : 2ನೇ ಪಿಯು ಪರೀಕ್ಷೆ | ಎಸ್ಎಸ್ಎಲ್ಸಿ | ಸಿಇಟಿ
ಇಂಗ್ಲೀಷ್ I ಬದಲು ಇಂಗ್ಲೀಷ್ -II ಪತ್ರಿಕೆ ಪಡೆದ ವಿದ್ಯಾರ್ಥಿಗಳು ಒಂದೆರಡು ಬಾರಿ ಪ್ರಶ್ನೆ ಪತ್ರಿಕೆ ಮೇಲೆ ಕಣ್ಣಾಡಿಸಿದ್ದಾರೆ. ಕೆಲವರು ವಿಷಯ ಗೊತ್ತಾದರೂ ತಕ್ಷಣವೇ ತಿಳಿಸದೆ ನಿಧಾನವಾಗಿ ಮೇಲ್ವಿಚಾರಕರಿಗೆ ತಿಳಿಸಿದ್ದಾರೆ. ಮೇಲ್ವಿಚಾರಕನಿಗೆ ತನ್ನ ತಪ್ಪಿನ ಅರಿವಾಗುವುದರೊಳಗೆ ವಿಷಯ ಊರು ಬಿಟ್ಟು ದೇಶದೆಲ್ಲೆಡೆ ಹಬ್ಬಿದೆ.
ISC ಹಾಗೂ ICSE ನಿಯಮದ ಪ್ರಕಾರ ಪರೀಕ್ಷೆ ನಡೆಯುವ ಶಾಲೆಯಲ್ಲೇ ಪ್ರಶ್ನೆಪ್ರತಿಕೆ ಪ್ರತಿ ಇರಿಸಲಾಗುತ್ತದೆ. ಪರೀಕ್ಷೆ ಮೇಲ್ವಿಚಾರಕ ಹಾಗೂ ಪ್ರಿನ್ಸಿಪಲ್ ಮಾತ್ರ ಪತ್ರಿಕೆ ಇರುವ ಪೆಟ್ಟಿಗೆ ತೆರೆಯಲು ಸಾಧ್ಯ. ಪರೀಕ್ಷೆ ದಿನ ಇವರಿಬ್ಬರು ಪ್ರಶ್ನೆ ಪತ್ರಿಕೆಯನ್ನು ಕೂಲಂಕುಷವಾಗಿ ಪರೀಕ್ಷಿಸುತ್ತಾರೆ. ಆದರೆ, ಪಠ್ಯ ವಿಷಯದ ಬಗ್ಗೆ ಅರಿವಿಲ್ಲದ, ಪಿಟಿ ಟೀಚರ್ ಅಥವಾ ನಾಮ ನಿರ್ದೇಶಿತ ಶಿಕ್ಷಕರನ್ನು ಮೇಲ್ವಿಚಾರಕರಾಗಿ ನೇಮಿಸಿದಾಗ ಈ ರೀತಿ ಪ್ರಮಾದವಾಗುವುದು ಮಾಮೂಲಿ ಎನ್ನಲಾಗಿದೆ.
ಪ್ರಸಕ್ತ ವರ್ಷ ಸುಮಾರು 63,189 ವಿದ್ಯಾರ್ಥಿಗಳು ದೇಶದಾದ್ಯಂತ ಪರೀಕ್ಷೆ ಬರೆಯುತ್ತಿದ್ದಾರೆ. ಪ್ರಶ್ನೆ ಪತ್ರಿಕೆ ನಕಲಾದರೆ, ಮತ್ತೆ ಪ್ರಶ್ನೆ ಪತ್ರಿಕೆ ರೂಪಿಸಿ, ಮುದ್ರಿಸಿ ಅಯಾ ಶಾಲೆಗಳಿಗೆ ಕಳಿಸಬೇಕಾಗುತ್ತದೆ. ಇದು ಭಾರಿ ಮೊತ್ತವನ್ನು ಬೇಡುವುದಂತೂ ಸತ್ಯ.












Click it and Unblock the Notifications