ಬನ್ಸಾಲ್ ರೈಲು ಬಜೆಟ್ : ಯಾರು ಏನು ಹೇಳುತ್ತಾರೆ?
ನವದೆಹಲಿ, ಫೆ. 26 : ಕೇಂದ್ರ ರೈಲು ಸಚಿವ ಪವನ್ ಕುಮಾರ್ ಬನ್ಸಾಲ್ ಅವರು ಮಂಡಿಸಿರುವ ಚೊಚ್ಚಲ ರೈಲು ಬಜೆಟ್ಟಿಗೆ ವಿರೋಧ ಪಕ್ಷಗಳಿಂದ ಸಹಜವಾಗಿ ವಿರೋಧ ವ್ಯಕ್ತವಾಗಿದೆ ಮತ್ತು ಆಡಳಿತ ಪಕ್ಷದಿಂದ ಸಹಜವಾಗಿ ಶಭಾಸ್‌ಗಿರಿ ಬಂದಿದೆ.
ಬನ್ಸಾಲ್ ಅವರು ಮಂಡಿಸಿರುವ ರೈಲ್ವೆ ಮುಂಗಡಪತ್ರ ಅತ್ಯಂತರ ನಿರಾಶಾದಾಯಕ, ಮುಂದಿನ ವರ್ಷ 2014ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡೇ ಪವನ್ ಕುಮಾರ್ ಬನ್ಸಾಲ್ ಅವರು ರೈಲು ಬಜೆಟ್ ಮಂಡಿಸಿದ್ದಾರೆ ಎಂದು ವಿರೋಧ ಪಕ್ಷದ ಮುಖಂಡರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ರೈಲು ದರ ಹೆಚ್ಚಳ ಮಾಡದಿದ್ದರೇನಂತೆ ಸಾಗಾಣಿಕೆ ದರ ಹೆಚ್ಚು ಮಾಡಿರುವುದು ಹಣದುಬ್ಬರ ಹೆಚ್ಚುವಂತೆ ಮಾಡುತ್ತದೆ, ಶ್ರೀಸಾಮಾನ್ಯರ ಮೇಲೆಯೇ ಹೊರೆ ಬೀಳಲಿದೆ, ತುಂಬಾ ನಿರಾಶೆ ಮೂಡಿಸಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸೇರಿದಂತೆ ಹಲವಾರು ನಾಯಕರು ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ.
ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರನ್ನು ಸ್ಮರಿಸುತ್ತಲೇ ರೈಲು ಬಜೆಟ್ ಮಂಡನೆ ಆರಂಭಿಸಿದ ಪವನ್ ಕುಮಾರ್ ಬನ್ಸಾಲ್ ಅವರ ಮುಂಗಡಪತ್ರಕ್ಕೆ ಯಾರು ಏನು ಹೇಳಿದ್ದಾರೆ ನೋಡೋಣ. ಹಾಗೆಯೆ ಶ್ರೀಸಾಮಾನ್ಯರಾದ ನಿಮ್ಮ ವಸ್ತುನಿಷ್ಠ ಅಭಿಪ್ರಾಯವನ್ನೂ ತಿಳಿಸಿರಿ. [ರೈಲ್ವೆ ಬಜೆಟ್ : ಕರ್ನಾಟಕದ ಆಸೆ ನಿರಾಸೆ]

ಜಗದೀಶ್ ಶೆಟ್ಟರ್, ಕರ್ನಾಟಕದ ಮುಖ್ಯಮಂತ್ರಿ
ಕೇಂದ್ರದ ರೈಲ್ವೆ ಬಜೆಟ್ ಕರ್ನಾಟಕದ ಪಾಲಿಗೆ ತುಂಬಾ ನಿರಾಶಾದಾಯಕ. ರಾಜ್ಯದ ರೈಲ್ವೆ ಗುಣಮಟ್ಟ ಉತ್ತಮಪಡಿಸಲೆಂದು, ಹಣ ಹಂಚಿಕೆಯ ಆಧಾರದ ಮೇಲೆ ಅನೇಕ ಪ್ರಸ್ತಾವನೆಗಳನ್ನು ಕೇಂದ್ರಕ್ಕೆ ಸಲ್ಲಿಸಲಾಗಿತ್ತು. ರೈಲ್ವೆ ಸಚಿವರು ಅವನ್ನು ಪರಿಗಣಿಸಿಯೇ ಇಲ್ಲ.

ಜಯಲಲಿತಾ, ತಮಿಳುನಾಡು ಮುಖ್ಯಮಂತ್ರಿ
ರೈಲ್ವೆ ಬಜೆಟ್ಟಿಗೆ ಸಂಬಂಧಿಸಿದಂತೆ ಕೇಂದ್ರ ಮೊದಲಿನಿಂದಲೂ ತಮಿಳುನಾಡಿನ ವಿರುದ್ಧ ಮಲತಾಯಿ ಧೋರಣೆ ತೋರುತ್ತಲೇ ಬಂದಿದೆ. ಈ ಬಾರಿಯೂ ಆಗಿದ್ದು ಅದೇ. ತಮಿಳುನಾಡಿಗೆ ಏನೂ ಸಿಕ್ಕಿಲ್ಲ.

ಯಶವಂತ ಸಿನ್ಹಾ, ಮಾಜಿ ಕೇಂದ್ರ ಸಚಿವ
ನಾನು ನೋಡಿರುವ ಎಲ್ಲ ಬಜೆಟ್‌ಗಳಲ್ಲಿ ಇದು ತುಂಬಾ ಕಳಪೆ ಮತ್ತು ಸಾಮಾನ್ಯ ಬಜೆಟ್. ಇದರಲ್ಲಿ ಮಹತ್ವಾಕಾಂಕ್ಷೆಯೂ ಇಲ್ಲ, ಫೋಕಸ್ ಅಂತೂ ಇಲ್ಲವೇ ಇಲ್ಲ. ಬನ್ಸಾಲ್ ಅವರು ಹೊಸದೇನನ್ನು ನೀಡಿಲ್ಲ. ಎಲ್ಲ ಭರವಸೆಗಳು ಹಳೆಯವೆ.

ಕಪಿಲ್ ಸಿಬಲ್, ಕೇಂದ್ರ ಸಚಿವ
ಬನ್ಸಾಲ್ ಅವರು ಮಂಡಿಸಿರುವ ಬಜೆಟ್ ದೂರದರ್ಶಿತ್ವವನ್ನು ಹೊಂದಿದೆ. ಪ್ರಯಾಣ ದರ ಏರಿಸದೆ ಬಡವರ ಮೇಲಿನ ಹೊರೆಯನ್ನು ಇಳಿಸಿದ್ದಾರೆ.

ಮುಲಾಯಂ ಸಿಂಗ್ ಯಾದವ್, ಎಸ್ಪಿ ಮುಖಂಡ
ಹಲವಾರು ವರ್ಷಗಳಲ್ಲಿ ಮಂಡಿಸಲಾದ ಬಜೆಟ್‌ಗಳಲ್ಲಿಯೇ ಅತ್ಯಂತ ಕೆಟ್ಟ ಮತ್ತು ನಿರಾಶಾದಾಯಕ ಬಜೆಟ್ ಇದಾಗಿದೆ. ಉತ್ತರ ಪ್ರದೇಶದಲ್ಲಿ ಅನೇಕ ಕಡೆಗಳಲ್ಲಿ ರೈಲ್ವೆ ಲೈನುಗಳೇ ಇಲ್ಲ. ಬನ್ಸಾಲ್ ಅವರು ಉತ್ತರ ಪ್ರದೇಶಕ್ಕೆ ಹೆಚ್ಚಿನದೇನನ್ನೂ ನೀಡಿಲ್ಲ.

ಶ್ರೀಧರ ಪೆರ್ಲ, ಟ್ವಿಟ್ಟಿಗ
ಕರ್ನಾಟಕದ ಕೆಎಸ್‌ಆರ್ಟಿಸಿ ಮತ್ತು ಬಿಎಂಟಿಸಿಯಿಂದ ರೈಲ್ವೆ ಇಲಾಖೆ ಕಲಿಯುವುದು ಸಾಕಷ್ಟಿದೆ. ಆನ್‌ಲೈನ್ ಸೇವೆ, ಎಸ್ಎಮ್ಎಸ್ ಮಾಹಿತಿ, ಮುಂದಿನ ನಿಲ್ದಾಣದ ಕುರಿತು ಘೋಷಣೆ, ಸಮಯಪಾಲನೆ ಬಗ್ಗೆ ಕರ್ನಾಟಕದ ಸಂಸ್ಥೆಗಳಿಂದ ರೈಲ್ವೆ ಕಲಿಯಬೇಕು.

ಪಿ ಚಿದಂಬರಂ, ಕೇಂದ್ರ ವಿತ್ತ ಸಚಿವ
ಬನ್ಸಾಲ್ ಮಂಡಿಸಿರುವ ಬಜೆಟ್ ನಿಜಕ್ಕೂ ಆಶಾದಾಯಕವಾಗಿದೆ ಮತ್ತು ಶ್ಲಾಘನೀಯವಾಗಿದೆ. ಬಜೆಟ್ ಪ್ರಾಕ್ಟಿಕಲ್ ಆಗಿದ್ದು, ಎಲ್ಲ ಭರವಸೆಗಳನ್ನು ಈಡೇರಿಸಬಹುದಾಗಿದೆ.

ಮಾಯಾವತಿ, ಉತ್ತರ ಪ್ರದೇಶದ ಮುಖ್ಯಮಂತ್ರಿ
ರೈಲ್ವೆಯನ್ನು ಹೆಚ್ಚಾಗಿ ಬಳಸುವ ಬಡವರು ಮತ್ತು ಮಧ್ಯಮ ವರ್ಗದವರ ಪರವಾಗಿ ರೈಲ್ವೆ ಬಜೆಟ್ ಮಂಡಿಸಲಾಗಿಲ್ಲ. ಬನ್ಸಾಲ್ ಬಜೆಟ್ ನಿಜಕ್ಕೂ ನಿರಾಶೆ ಮೂಡಿಸಿದೆ. ಸರಕು ಸಾಗಣೆ ದರ ಏರಿಕೆ ಹಣದುಬ್ಬರವನ್ನು ಮತ್ತಷ್ಟು ಹೆಚ್ಚಿಸಲಿದೆ.












Click it and Unblock the Notifications