ಬೆಂಗಳೂರು ಕಾರ್ ಪೂಲಿಂಗ್ ಬಗ್ಗೆ ನೀವೇನಂತೀರಿ?
ಬೆಂಗಳೂರು, ಫೆ. 25: ಕಾರು ಹಂಚಿಕೆ ಅಂದರೆ car-pooling ಅಥವಾ car-sharing ಎಂಬ ಸೌಹಾರ್ಧ ವ್ಯವಸ್ಥೆಗೆ ಬೆಂಗಳೂರು ಪೊಲೀಸರು ಮತ್ತೆ ಮೊರೆಹೋಗಿದ್ದಾರೆ. ಬೆಂಗಳೂರು ಟ್ರಾಫಿಕ್ ಮಧ್ಯೆ ನಿಂತು ಕಾರ್ ಪೂಲಿಂಗ್ ವ್ಯವಸ್ಥೆ ಬಗ್ಗೆ ನೀವು ಏನಂತೀರಿ, ಹೇಳಿ.
ಏಕೆಂದರೆ ಕಾರ್ ಪೂಲಿಂಗ್ ವ್ಯವಸ್ಥೆಯಿಂದ ಸುಗಮ ಸಂಚಾರದ ಜತೆಗೆ ಹಣ ಮತ್ತು ಪೆಟ್ರೋಲ್ ಉಳಿತಾಯ ಸಾಧ್ಯವಾಗುತ್ತದೆ.ಅದಕ್ಕಿಂತ ಮುಖ್ಯವಾಗಿ ಟ್ರಾಫಿಕ್ ಒತ್ತಡ ನಿವಾರಣೆಯಾಗಿ ನಿಮ್ಮ ಆರೋಗ್ಯವೂ ಉತ್ತಮಗೊಳ್ಳುತ್ತದೆ ಎಂಬ ವಾಸ್ತವವನ್ನು ತೆರೆದಿಡುತ್ತಾರೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಜ್ಯೋತಿಪ್ರಕಾಶ್ ಮಿರ್ಜಿ.

ಶನಿವಾರ ಆಯೋಜಿಸಲಾಗಿದ್ದ 'ಕಾರ್ ಪೂಲಿಂಗ್ ಆಂದೋಲನ' ಕಾರ್ಯಕ್ರಮದಲ್ಲಿ ಮಾತನಾಡಿದ ಆಯುಕ್ತ ಜ್ಯೋತಿಪ್ರಕಾಶ್ ಮಿರ್ಜಿ ಅವರು ಇತ್ತೀಚಿನ ದಿನಗಳಲ್ಲಿ ಉಳ್ಳವರು ಕೇವಲ ಪ್ರತಿಷ್ಠೆಗಾಗಿ ಐಷಾರಾಮಿ ಕಾರುಗಳನ್ನು ಖರೀದಿಸುತ್ತಿದ್ದಾರೆ. ಇದರಿಂದಾಗಿಯೇ ನಗರದಲ್ಲಿ ಸಂಚಾರ ದಟ್ಟಣೆ ಅಧಿಕವಾಗುತ್ತಿದೆ. ಟ್ರಾಫಿಕ್ ಕಡಿಮೆ ಮಾಡಿ, ಸುಗಮ ಸಂಚಾರ ವ್ಯಸವ್ಥೆ ಕಲ್ಪಿಸಲು ಪೊಲೀಸರ ಜತೆಗೆ ಸಾರ್ವಜನಿಕರೂ ಕೈ ಜೋಡಿಸಬೇಕು ಎಂದು ಅವರು ಆಶಿಸಿದರು.
ಇದನ್ನು ಆದ್ಯವಾಗಿ ಗಮನಿಸಿ: ಬೆಂಗಳೂರಿನಲ್ಲಿ 10 ದಶಲಕ್ಷ ಜನರಿದ್ದಾರೆ. ಹಾಗೆಯೇ, 44 ಲಕ್ಷ ಕಾರಿಗಳಿವೆ. ಪೀಕ್ ಅವರ್ ನಲ್ಲಿ ಟ್ರಾಫಿಕ್ ವೇಗ ಸರಾಸರಿ ಗಂಟೆಗೆ 15 ಕಿಮೀ ವೇಗ(?)ದಲ್ಲಿರುತ್ತದೆ.
ವಾಯು ಮಾಲಿನ್ಯ ಬೆಂಗಳೂರಿನಲ್ಲಿ ಕಳೆದೊಂದು ದಶಕದಲ್ಲಿ ಗರಿಷ್ಠ ಪ್ರಮಾಣದಲ್ಲಿ ಏರಿಕೆಯಾಗಿದೆ. ಗರಿಷ್ಠ ಶಬ್ದಮಾಲಿನ್ಯ 62.7 ಡೆಸಿಬಲ್ಸ್ ಇರಬೇಕು. ಆದರೆ ಅದು 100ರ ಗಡಿ ದಾಟಿದೆ.
ಮಿರ್ಜಿ ಇನ್ನೂ ಏನು ಹೇಳಿದರೆಂದರೆ: ದಿನ ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಗಳಲ್ಲಿ ತೆವಳಿಕೊಳ್ಳುತ್ತಾ ಹೋದರೆ ಇನ್ನೂ ಏನಾಗುತ್ತದೆಂದರೆ ಸ್ಮರಣೆ ಶಕ್ತಿ ಕುಂದುತ್ತದೆ. ದೈಹಿಕ ಬಳಲಿಕೆ. ಆಯಾಸ, ರಕ್ತದೊತ್ತಡ, ಮಾಂಸಖಂಡಗಳ ಮೇಲೆ ಒತ್ತಡ, ಹೃದಯ ಬಡಿತ ಏರಿಕೆ, ಇದರಿಂದ ಕೆಲಸಕ್ಕೆ ಚಕ್ಕರ್ ಹೊಡೆಯುವ ಪರಿಪಾಠ ಹೆಚ್ಚಾಗುತ್ತಿದೆ. ಬೇಕಾ ಇದೆಲ್ಲ!?
ಒಂದೇ ಕಚೇರಿಯಲ್ಲಿ ಕೆಲಸ ಮಾಡುವ ಒಂದೇ ಮಾರ್ಗವಾಗಿ ಪ್ರಯಾಣಿಸುವ ನಾಲ್ವರು ಉದ್ಯೋಗಿಗಳು, ಪ್ರತ್ಯೇಕವಾಗಿ ನಾಲ್ಕು ಕಾರುಗಳಲ್ಲಿ ಹೋಗುವ ಬದಲು ಒಂದೇ ವಾಹನದಲ್ಲಿ ಸಂಚರಿಸಬೇಕು. ಇದರಿಂದ ಸಂಚಾರ ದಟ್ಟಣೆ ನಿಯಂತ್ರಣವಾಗುತ್ತದೆ. ಜತೆಗೆ, ಹಣ ಮತ್ತು ಇಂಧನ ಉಳಿತಾಯವೂ ಆಗುತ್ತದೆ ಎಂದು ಅವರು ಕಿವಿಮಾತು ಹೇಳಿದರು.
ತಮ್ಮ ಕೈಲಾದ ಮಟ್ಟಿಗೆ ಸಮಾಜಕ್ಕೆ ಉಪಯೋಗವಾಗುವಂತೆ ಜನ ಯೋಚಿಸಬೇಕು. ಶರವೇಗದಲ್ಲಿ ಬೆಳೆಯುತ್ತಿರುವ ಸಿಲಿಕಾನ್ ಸಿಟಿಯಲ್ಲಿ ವಾಹನ ದಟ್ಟಣೆ ದಟ್ಟವಾಗಿದೆ. ಇದರ ನಿಯಂತ್ರಣದ ಜವಾಬ್ದಾರಿ ಪ್ರತಿಯೊಬ್ಬ ಕರ್ತವ್ಯ. ಆದ್ದರಿಂದ ಕಡ್ಡಾಯವಾಗಿ ಕಾರ್ ಪೂಲಿಂಗ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವುದಾಗಿ/ಪಾಲಿಸುವುದಾಗಿ ದೃಢ ಸಂಕಲ್ಪ ಮಾಡಬೇಕು ಎಂದು ಆಯುಕ್ತ ಜ್ಯೋತಿಪ್ರಕಾಶ್ ಮಿರ್ಜಿ ಹೇಳಿದರು.












Click it and Unblock the Notifications