'ಇಡಿ' ಇಂದ ಕಟ್ಟಾ ಆಸ್ತಿ ಮುಟ್ಟುಗೋಲು

ಲೇವಾದೇವಿ ನಿಯಂತ್ರಣ ಕಾಯ್ದೆ(ಪಿಎಂಎಲ್) ಅಡಿಯಲ್ಲಿ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಅವರ ಪತ್ನಿ ಹಾಗೂ ಪುತ್ರ ಕಟ್ಟಾ ಜಗದೀಶ್ ಮತ್ತು ಇಟಾಸ್ಕ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ್, ಪಾಲಿಕೆ ಸದಸ್ಯ ಗೋಪಿ, ಅವರ ಪತ್ನಿ ಸೌಭಾಗ್ಯ ಸೇರಿದಂತೆ 22 ಜನರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಹಕ್ಕುಬಾಧ್ಯತೆಗಳ ತೀರ್ಪು ಕುರಿತ ಪ್ರಾಧಿಕಾರ 82 ಪುಟಗಳನ್ನು ಒಳಗೊಂಡ ಆದೇಶ ಹೊರಡಿಸಿದೆ.
ಆದೇಶದ ಪ್ರಕಾರ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯನಾಯ್ಡು ಅವರ ಬೆಂಗಳೂರಿನ ಸದಾಶಿವನಗರದ ಬಂಗಲೆ, ಬ್ಯಾಂಕ್ ಖಾತೆಗಳು ಸೇರಿದಂತೆ ಎಲ್ಲವೂ ಜಪ್ತಿಯಾಗಲಿವೆ. ಅಲ್ಲದೆ, ಕಟ್ಟಾ ಬೆಂಬಲಿಗ ಹಾಗೂ ಬಿಬಿಎಂಪಿ ಸದಸ್ಯ ಗೋಪಿ, ಪತ್ನಿ ಸೌಭಾಗ್ಯ, ಇಟಾಸ್ಕಾ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ್, ತಂದೆ ಚಲಪತಿ, ತಾಯಿ ಸರಸ್ವತಿ, ಪತ್ನಿ ರಶ್ಮಿ ಹಾಗೂ ಪ್ರಕರಣದಲ್ಲಿರುವ ಜಿ.ಶಿವಪ್ರಸಾದ್, ರಂಗಸ್ವಾಮಿ, ಹರೀಶ್, ಮೋಹನ್, ಕೆ.ಶಿವಕುಮಾರ್ ಸೇರಿದಂತೆ ಇನ್ನಿತರರ ಆಸ್ತಿಯನ್ನೂ ಜಪ್ತಿ ಮಾಡುವಂತೆ ಜಾರಿ ನಿರ್ದೇಶನಾಲಯ ಆದೇಶಿಸಿದೆ.
ಆದಾಯಕ್ಕಿಂತ ಹೆಚ್ಚಿನ ಆಸ್ತಿಗಳಿಕೆ ಆರೋಪದ ಮೇರೆಗೆ ಸುಬ್ರಹ್ಮಣ್ಯ ನಾಯ್ಡು, ಪುತ್ರ ಕಟ್ಟಾ ಜಗದೀಶ್ ಹಾಗೂ ಇಟಾಸ್ಕ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ್ ಅವರುಗಳ ಆಸ್ತಿ ಮುಟ್ಟುಗೋಲಿಗೆ ಜಾರಿ ನಿರ್ದೇಶನಾಲಯವು ಕಳೆದ ನವೆಂಬರ್‌ನಲ್ಲಿ ನೋಟಿಸ್ ಜಾರಿ ಮಾಡಿತ್ತು.
ಕೆಐಎಡಿಬಿ ಭೂ ಹಗರಣದ ಆರೋಪದಲ್ಲಿ ಕಟ್ಟಾ ಕುಟುಂಬದ ವಿರುದ್ಧ ಲೇವಾದೇವಿ ನಿಯಂತ್ರಣ ಕಾಯ್ದೆ ಯಡಿ ಪ್ರಕರಣ ದಾಖಲಿಸಿಕೊಂಡು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಚಾರಣೆ ನಡೆಸಿದ್ದರು.
ಹಣ ದುರ್ಬಳಕೆ ಹಾಗೂ ಅವ್ಯವಹಾರ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಕಟ್ಟಾ ಸುಬ್ರಹ್ಮಣ್ಯ ನಾಯ್ಡುರ ವಾಸದ ಮನೆ, ಜಮೀನು, ಬ್ಯಾಂಕ್ ಖಾತೆಗಳು ಸೇರಿದಂತೆ ಎಲ್ಲ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಜಾರಿ ನಿರ್ದೇಶನಾಲಯ ಕ್ರಮ ಕೈಗೊಂಡಿದೆ.ಇಟಾಸ್ಕಾ ಸಂಸ್ಥೆಗೆ ಭೂಮಿಯನ್ನು ಕೊಡಿಸಲು 87 ಕೋಟಿ ರೂ ಲಂಚ ಪಡೆದಿದ್ದಾರೆ ಎಂಬ ಆರೋಪವನ್ನು ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮತ್ತು ಅವರ ಪುತ್ರ ಹಾಗೂ ಪಾಲಿಕೆ ಸದಸ್ಯ ಜಗದೀಶ್ ಎದುರಿಸುತ್ತಿದ್ದರು. ನಂತರ ಜಾಮೀನು ಪಡೆದು ಜೈಲಿನಿಂದ ಹೊರ ಬಂದಿದ್ದರು.












Click it and Unblock the Notifications