ಬಿಜೆಪಿಯಲ್ಲಿ ನಾಯಕರ ಕೊರತೆ ಇದೆ - ಯಡಿಯೂರಪ್ಪ

ದಾವಣಗೆರೆಯಲ್ಲಿ ಮಾತನಾಡಿದ ಅವರು ಬಿಜೆಪಿಯಲ್ಲಿ ಸರಿಯಾದ ನಾಯಕರಿಲ್ಲ. ಆಡಳಿತ ನಡೆಸುವ ತಂತ್ರಗಾರಿಕೆ ತಿಳಿದಿಲ್ಲ. ಶಾಸಕರ ಮೇಲೆ ಹಿಡಿತವಿಟ್ಟುಕೊಂಡು ಅಧಿಕಾರ ನಡೆಸಲು ಸಾಧ್ಯವಾಗದ ಮುಖ್ಯಮಂತ್ರಿಗಳು ರಾಜ್ಯವನ್ನು ಹೇಗೆ ಆಳುತ್ತಾರೆ ಎಂದು ವ್ಯಂಗ್ಯವಾಡಿದರು.
ಪಕ್ಷದ ರಾಜ್ಯಾಧ್ಯಕ್ಷರು, ಮುಖ್ಯಮಂತ್ರಿಗಳು ಶಾಸಕರ ರಾಜೀನಾಮೆ ತಡೆಯುವಲ್ಲಿ ವಿಫಲರಾಗಿದ್ದಾರೆ. ಪಕ್ಷದಲ್ಲಿರುವ ಶಾಸಕರನ್ನು ಉಳಿಸಿಕೊಳ್ಳಲಾಗದ ಮುಖ್ಯಮಂತ್ರಿಗಳು ರಾಜೀನಾಮೆ ನೀಡಿ ಚುನಾವಣೆಗೆ ಬರುವಂತೆ ಅವರು ಸವಾಲು ಹಾಕಿದರು.
ಬಿಜೆಪಿಯ ಸಚಿವರಾದ ಸಿ.ಪಿ.ಯೋಗೇಶ್ವರ್, ರಾಜೂಗೌಡ ಶಾಸಕರಾದ ಶಂಕರಲಿಂಗೇಗೌಡ, ಬೇಳೂರು ಗೋಪಾಲಕೃಷ್ಣ ಹೀಗೆ ಪಕ್ಷದ ಶಾಸಕರು ಮತ್ತು ಸಚಿವರ ರಾಜೀನಾಮೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಎಲ್ಲ ಸಚಿವರು, ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆಡಳಿತ ನಡೆಸಬೇಕು. ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಇದರಲ್ಲಿ ವಿಫಲರಾಗಿದ್ದಾರೆ. ಹೆಸರಿಗೆ ಮಾತ್ರ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಿದ್ದಾರೆ ಎಂದು ಕುಹಕವಾಡಿದರು.
ಬಿಜೆಪಿ ಪಕ್ಷದೊಳಗಿನ ಇಕ್ಕಟಿನ ಪರಿಸ್ಥಿತಿ ಎಲ್ಲರಿಗೂ ತಿಳಿದಿದೆ. ಶಾಸಕರನ್ನು ಕಡೆಗಣಿಸಿ, ವ್ಯಕ್ತಿಗತ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಇನ್ನಷ್ಟು ಶಾಸಕರು ಪಕ್ಷ ತೊರೆಯುತ್ತಾರೆ ಎಂದು ಹೇಳಿದರು.












Click it and Unblock the Notifications