ಯಾರೂ ಬಿಜೆಪಿ ಬಿಡಲ್ಲ, ಸರ್ಕಾರ ಭದ್ರವಾಗಿದೆ :ಶೆಟ್ಟರ್

ಸ್ಪೀಕರ್ ಹಾಗೂ ನಾಮಕರಣ ಸದಸ್ಯರನ್ನು ಹೊರತುಪಡಿಸಿದರೆ ವಿಧಾನಸಭೆಯಲ್ಲಿ ಬಿಜೆಪಿಯ ಬಲ 105. ಪಕ್ಷೇತರ ಸದಸ್ಯ ವರ್ತೂರು ಪ್ರಕಾಶ್ ಸಚಿವರಾಗಿದ್ದಾರೆ. ಅವರ ಬೆಂಬಲ ಸಹಜವಾಗಿಯೇ ಸರ್ಕಾರಕ್ಕೆ ಇದೆ. ಇವರೆಲ್ಲರೂ ಸೇರಿ ಬಿಜೆಪಿಯ ಬಲ 108. ಇವರಲ್ಲಿ ಇಬ್ಬರು (ನಾಗಠಾಣ ಕ್ಷೇತ್ರದ ವಿಠಲ ಕಟಕದೋಂಡ ಮತ್ತು ತರೀಕೆರೆಯ ಡಿ.ಎಸ್.ಸುರೇಶ್) ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ ಅದು ಇನ್ನೂ ಅಂಗೀಕಾರ ಆಗಿಲ್ಲ.
ಬಿಜೆಪಿ ತಂತ್ರ: ಹೀಗಾಗಿ ಸರ್ಕಾರ ಉರುಳುವ ಸಂಭವ ಕಮ್ಮಿ. ಪಕ್ಷೇತರರಾದ ಪಿ.ಎಂ.ನರೇಂದ್ರ ಸ್ವಾಮಿ, ಡಿ.ಸುಧಾಕರ್, ವೆಂಕಟರಮಣಪ್ಪ, ಶಿವರಾಜ ತಂಗಡಗಿ ಬೆಂಬಲ ನೀಡಿದರೂ ಒಟ್ಟು ಸಂಖ್ಯೆ 100 ದಾಟುವುದಿಲ್ಲ. ಹೀಗಾಗಿ ಸದ್ಯಕ್ಕೆ ಸರ್ಕಾರಕ್ಕೆ ಬಹುಮತದ ಕೊರತೆ ಬೀಳುವುದಿಲ್ಲ. ಸಂಖ್ಯಾ ಬಲ ವಿವರ ಇಲ್ಲಿ ಲಭ್ಯ. ಸಚಿವರಾದ ಸಿ.ಪಿ.ಯೋಗೇಶ್ವರ್, ರಾಜು ಗೌಡ ಶಾಸಕರಾದ ಶಂಕರಲಿಂಗೇಗೌಡ, ಬೇಳೂರು ಗೋಪಾಲಕೃಷ್ಣ, ಪ್ರತಾಪ ಗೌಡ ಸರಣಿ ರಾಜೀನಾಮೆ ಕೊಡಲು ಮುಂದಾಗಿರುವ ಸುದ್ದಿ ಹರಿದಾಡುತ್ತಿದೆ.
ಸಿ.ಪಿ ಯೋಗೇಶ್ವರ್ ಹಾಗೂ ರಾಜೂ ಗೌಡ ಬಹಿರಂಗವಾಗಿ ಹೇಳಿಕೆ ನೀಡುತ್ತಾ ಬಿಜೆಪಿ ನಾಯಕರಿಗೆ ಭಯ ಹುಟ್ಟಿಸಿದ್ದಾರೆ ನಿಜ. ಆದರೆ, ಬಂಡಾಯ ಏಳುವ ವಲಸೆ ಹಕ್ಕಿಗಳ ರೆಕ್ಕೆ ಕತ್ತರಿಸುವ ಕಲೆ ಬಿಜೆಪಿಗೆ ಈಗ ಕರಗತವಾಗಿದೆ. ಮಡಿಕೇರಿಯಲ್ಲಿರುವ ಸ್ಪೀಕರ್ ಬೋಪಯ್ಯ ಅವರ ಮನೆಗೆ ತೆರಳಿ ರಾಜೀನಾಮೆ ಸಲ್ಲಿಸಲು ಯೋಗೇಶ್ವರ್ ಸಿದ್ಧರಾಗಿದ್ದಾರೆ.
ಆದರೆ, ಎಷ್ಟು ಮಂದಿ ರಾಜೀನಾಮೆ ಪತ್ರ ಹಿಡಿದುಕೊಂಡು ಬಂದರೂ ಬೋಪಯ್ಯ ಅವರು ಮತ್ತೊಮ್ಮೆ ವಿಳಂಬ ನೀತಿ ಅನುಸರಿಸುತ್ತಾ ಸತಾಯಿಸುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ರಾಜೀನಾಮೆ ಅಂಗೀಕಾರವಾಗದೆ ಒಂದಷ್ಟು ಕಾಲ ಶಾಸಕರು, ಸಚಿವರು ಸ್ಪೀಕರ್ ಕಚೇರಿಯಲ್ಲೇ ಉಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ.
ಕನಿಷ್ಠ ಪಕ್ಷ ಜಗದೀಶ್ ಶೆಟ್ಟರ್, ಕೆಎಸ್ ಈಶ್ವರಪ್ಪ, ಸದಾನಂದ ಗೌಡ ಅವರಿಗೆ ಹೈಕಮಾಂಡ್ ನಿಂದ ಸೂಚನೆ ಸಿಗುವ ತನಕವಾದರು ಸಚಿವರ ರಾಜೀನಾಮೆ ಅಂಗೀಕಾರ ಸಾಧ್ಯತೆ ಕಮ್ಮಿ. ಯಡಿಯೂರಪ್ಪ ಅವರ ಹಾರೈಕೆಯಂತೆ ಜಗದೀಶ್ ಶೆಟ್ಟರ್ ಅವರು ರಾಜೀನಾಮೆ ನೀಡಿ ಸರ್ಕಾರವನ್ನು ತಾವೇ ವಿಸರ್ಜಿಸಿ ಚುನಾವಣೆಗೆ ಮುಂದಾಗುತ್ತಾರೆ ಎಂದು ಕನಸಿನಲ್ಲೂ ಊಹಿಸಲು ಸಾಧ್ಯವಿಲ್ಲ. ಮೇ ತಿಂಗಳಿನಲ್ಲಿ ಬರುವ ಚುನಾವಣೆ ಒಂದು ತಿಂಗಳು ಮುಂಚಿತವಾಗಿ ಬರುವುದು ಬಿಜೆಪಿ ಬೇಕಿಲ್ಲ.












Click it and Unblock the Notifications